Advertisement

ಗಲಾಟೆಗಳೇ ಸರಕಾರಕ್ಕೆ ವರದಾನ: ಕಾಂಗ್ರೆಸ್‌ಗೆ ಧರ್ಮಸಂಕಟ

11:27 AM Apr 22, 2020 | mahesh |

ಬೆಂಗಳೂರು: ಮಹಾಮಾರಿ ಕೋವಿಡ್ ಹರಡುವುದನ್ನು ತಡೆಗಟ್ಟಲು ರಾಜ್ಯ ಸರಕಾರ ಮಾಡುತ್ತಿರುವ ಪ್ರಯತ್ನಕ್ಕಿಂತ ಕೋವಿಡ್ ವಾರಿಯರ್ ಮೇಲೆ ನಡೆಯುತ್ತಿರುವ ಹಲ್ಲೆಗಳು ರಾಜ್ಯ ಸರಕಾರಕ್ಕೆ ವಿಪಕ್ಷಗಳ ಟೀಕೆಯಿಂದ ಪಾರುಮಾಡುವ ಅಂಶವಾಗಿದ್ದು ಇದು ಕಾಂಗ್ರೆಸ್‌ಗೆ ಧರ್ಮಸಂಕಟವಾಗಿ ಪರಿಣಮಿಸಿದೆ.

Advertisement

ವಿಧಾನಸಭೆ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿಯೇ ಸರಕಾರದ ವಿರುದ್ಧ ಕೋವಿಡ್ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸುತ್ತ ಬಂದಿತ್ತು. ಈ ವಿಷಯದಲ್ಲಿ ರಾಜಕೀಯ ಇಲ್ಲ ಎಂದರೂ ಟೀಕೆ ಮುಂದುವರಿದಿತ್ತು. ವೈಫ‌ಲ್ಯಕ್ಕೆ ತರಾಟೆ ರಾಜ್ಯ ಸರಕಾರ ಆರಂಭದಲ್ಲಿಯೇ ವಿದೇಶಗಳಿಂದ ಬಂದಿರುವವರನ್ನು ವಿಮಾನ ನಿಲ್ದಾಣಗಳಲ್ಲಿಯೇ ಸರಿಯಾಗಿ ತಪಾಸಣೆ ಮಾಡದೆ ಅವರನ್ನು ಮುಕ್ತವಾಗಿ ಒಳಗೆ ಬರಲು ಬಿಟ್ಟಿರುವುದು ರಾಜ್ಯದಲ್ಲಿ ಕೋವಿಡ್ ಹರಡುವಂತೆ ಆಯಿತು ಎಂದು ಕಾಂಗ್ರೆಸ್‌ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಆ ಸಂದರ್ಭ ಸಿಎಂ ಅವರು ತತ್‌ಕ್ಷಣ ನಾಲ್ವರು ಸಚಿವರ ಟಾಸ್ಕ್ಫೋರ್ಸ್‌ ರಚನೆ ಮಾಡಿ ಪ್ರತಿದಿನ ಕೋವಿಡ್ ನಿಯಂತ್ರಿಸುವ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿದರು. ಅಲ್ಲದೇ ಸರ್ವಪಕ್ಷದ ಸಭೆ ಕರೆದು ಅಭಿಪ್ರಾಯ ಪಡೆದು ಸಮಾಧಾನಪಡಿಸುವ ಯತ್ನ ಮಾಡಿದರು.

ತಬ್ಲಿ ಜಮಾತ್‌ ಘಟನೆ
ಆ ಬಳಿಕ ಸೋಂಕಿತರನ್ನು ಪತ್ತೆ ಹಚ್ಚುವಲ್ಲಿ, ಕ್ವಾರಂಟೈನ್‌ ಮಾಡಿಸುವಲ್ಲಿ ವಿಫ‌ಲವಾಗುತ್ತಿದೆ. ಲಾಕ್‌ಡೌನ್‌ ವೇಳೆ ನಿರ್ಗತಿಕರು, ಕಾರ್ಮಿಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ, ರೈತರ ಬೆಳೆಗಳಿಗೆ ಮಾರುಕಟ್ಟೆ ಸಿಕ್ಕಿಲ್ಲ ಎನ್ನುವುದನ್ನು ಕಾಂಗ್ರೆಸ್‌ ಟೀಕಿಸಿತ್ತು. ಆದರೆ ತಬ್ಲಿ ಪ್ರಕರಣ ವರದಿಯಾಗುತ್ತಿದ್ದಂತೆ ಬಿಜೆಪಿ ನಾಯಕರು ಅಲ್ಪಸಂಖ್ಯಾಕ ಸಮುದಾಯದ ವಿರುದ್ಧ ಹೇಳಿಕೆಗಳನ್ನು ನೀಡತೊಡಗಿದ್ದು, ಕಾಂಗ್ರೆಸ್‌ ಅನ್ನೂ ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ನಿಜಾಮುದ್ದೀನ್‌ಗೆ ಹೋಗಿ ಬಂದ ರಾಜ್ಯದ 1,500 ಜನರಲ್ಲಿ ಬಹುತೇಕರು ತಪಾಸಣೆಗೆ ಒಳಪಡಲು ಹಿಂದೇಟು ಹಾಕಿದ್ದು, ಬಿಜೆಪಿ ನಾಯಕರಿಗೆ ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ನಡೆಸಲು ದೊಡ್ಡ ಅಸ್ತ್ರ ದೊರೆತಂತಾಯಿತು. ಅಲ್ಲಿವರೆಗೆ ಸರಕಾರವನ್ನು ಕೋವಿಡ್ ವಿಚಾರದಲ್ಲಿ ಟೀಕಿಸುತ್ತ ಬಂದಿದ್ದ ಕಾಂಗ್ರೆಸ್‌ ತಬ್ಲಿ ವಿಚಾರದಲ್ಲಿ ಬಹಿರಂಗ ಸಮರ್ಥಿಸಿಕೊಳ್ಳಲೂ ಆಗದೆ, ವಿರೋಧಿಸಲೂ ಆಗದೆ ಪಕ್ಷದ ಮುಸ್ಲಿಂ ಸಮುದಾಯದ ನಾಯಕರ ಮೂಲಕ ತೇಪೆ ಹಚ್ಚುವ ಕೆಲಸ ಮಾಡಿತು.

ಸರಕಾರ ಪಾರು
ಅನಂತರದಲ್ಲಿ ಕಾಂಗ್ರೆಸ್‌ ನಾಯಕರು ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ| ಸುಧಾಕರ್‌ ನಡುವಿನ ಶೀತಲ ಸಮರ, ಪ್ರಯೋಗಾಲಯಗಳು ಹೆಚ್ಚಾಗದಿರುವುದು, ರ್ಯಾಪಿಡ್‌ ಟೆಸ್ಟ್‌ ಕಿಟ್‌ಗಳ ಖರೀದಿ ವಿಚಾರದಲ್ಲಿ ಸಚಿವರ ಗುದ್ದಾಟ, ತಪಾಸಣೆ ಪ್ರಮಾಣ ಕಡಿಮೆ, ಇತ್ಯಾದಿಗಳನ್ನಿಟ್ಟುಕೊಂಡು ಸರಕಾರದ ವೈಫ‌ಲ್ಯವನ್ನು ಬಿಚ್ಚಿಡುವ ಯತ್ನ ಮಾಡಿದ್ದರು. ಆದರೆ ಬೆಂಗಳೂರಿನಲ್ಲಿ ತಪಾಸಣೆಗೆ ತೆರಳಿದ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ, ಪಾದರಾಯನಪುರದ ಘಟನೆ ಬಿಜೆಪಿ ಸರಕಾರಕ್ಕೆ ವರವಾಗಿದೆ. ಕಾಂಗ್ರೆಸ್‌ ಧರ್ಮ ಸಂಕಟಕ್ಕೆ ಸಿಲುಕುವಂತೆಯೂ ಮಾಡಿದೆ. ಈ ಘಟನೆಗೆ ಮುಸ್ಲಿಂ ಸಮುದಾಯ ಹಾಗೂ ಕಾಂಗ್ರೆಸ್‌ ಶಾಸಕರೇ ಕಾರಣ ಎಂದು ಬಿಜೆಪಿಯವರು ವಾಗ್ಧಾಳಿ ನಡೆಸಿದ್ದಾರೆ. ಇದು ಕಾಂಗ್ರೆಸ್‌ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. ಕೋವಿಡ್ ವಿಚಾರದಲ್ಲಿ ಸರಕಾರದ ವೈಫ‌ಲ್ಯಗಳನ್ನು ಕಾಂಗ್ರೆಸ್‌ ಎತ್ತಿ ತೋರಿಸುವುದಕ್ಕಿಂತ ತಬ್ಲಿ ಮತ್ತು ಪಾದರಾಯನಪುರ ಪ್ರಕರಣದಲ್ಲಿ ತಾನೇ ವಿರೋಧ ಎದುರಿಸುವಂತಾಗಿದ್ದು ವಿಪರ್ಯಾಸ.

Advertisement

Udayavani is now on Telegram. Click here to join our channel and stay updated with the latest news.

Next