ಬೆಂಗಳೂರು: ಉಚಿತ ಟಿಕೆಟ್ ಪಡೆಯಲು ಆಧಾರ್ ಕಾರ್ಡ್ ತೋರಿಸುವ ವಿಚಾರವಾಗಿ ನಡೆದ ಜಗಳದ ವೇಳೆ ಬಿಎಂಟಿಸಿ ಬಸ್ ನಿರ್ವಾಹಕಿ ಮೇಲೆ ಹಲ್ಲೆ ನಡೆಸಿ, ಮುಖ ಪರಚಿದ್ದ ಖಾಸಗಿ ಫೈನಾನ್ಸ್ ಕಂಪನಿಯ ಮಹಿಳಾ ಉದ್ಯೋಗಿಯನ್ನು ಬಾಗಲಗುಂಟೆ ಪೊಲೀಸರು ಸೋಮವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಚಿಕ್ಕಬಾಣವಾರ ನಿವಾಸಿ ಮೋನಿಷಾ(29) ಜೈಲು ಸೇರಿದವರು.
ಭಾನುವಾರ ಬೆಳಗ್ಗೆ ಬಿಎಂಟಿಸಿ ಘಟಕ 40ರ ಬಸ್ ನಿರ್ವಾಹಕಿ ಸುಕನ್ಯಾ(49) ಅವರನ್ನು ಅವಾಚ್ಯಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿ, ಉಗುರಿನಿಂದ ಮುಖ ಪರಚಿದ್ದರು. ಈ ಸಂಬಂಧ ಸುಕನ್ಯಾ ನೀಡಿದ ದೂರಿನ ಮೇರೆಗೆ ಬಾಗಲಗುಂಟೆ ಠಾಣೆ ಪೊಲೀಸರು ಆರೋಪಿ ಮೊನೀಷಾಳನ್ನು ಬಂಧಿಸಿದ್ದರು.
ಸೋಮವಾರ ಸಂಕ್ರಾಂತಿ ಹಬ್ಬದ ರಜೆ ಹಿನ್ನೆಲೆ 31ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಮನೆಗೆ ಆಕೆಯನ್ನು ಹಾಜರುಪಡಿಸಿದ್ದರು. ವಿಚಾರಣೆ ಮಾಡಿದ ನ್ಯಾಯಾಧೀಶರು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಹೀಗಾಗಿ ಬಾಗಲಗುಂಟೆ ಠಾಣೆ ಪೊಲೀಸರು ಆರೋಪಿಯನ್ನು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಬಿಟ್ಟು ಬಂದಿದ್ಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರಕರಣದ ಹಿನ್ನೆಲೆ: ಮತ್ತಿಕೆರೆಯಲ್ಲಿ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮೋನಿಷಾ, ಭಾನುವಾರ ಬೆಳಗ್ಗೆ 10.30ಕ್ಕೆ 8ನೇ ಮೈಲಿಯಿಂದ ದಾಸರಹಳ್ಳಿಗೆ ಹೋಗಲು ಮೆಜೆಸ್ಟಿಕ್-ನೆಲಮಂಗಲ ಮಾರ್ಗದ ಬಿಎಂಟಿಸಿ ಬಸ್ ಹತ್ತಿದ್ದಾರೆ. ಆಗ ನಿರ್ವಾಹಕಿ ಸುಕನ್ಯಾ, ಆಧಾರ್ ಕಾರ್ಡ್ ತೋರಿಸುವಂತೆ ಕೇಳಿದ್ದು, ಆರೋಪಿ ಮೋನಿಷಾ, ಆಧಾರ್ ಕಾರ್ಡ್ ತೋರಿಸಲು ತಡ ಮಾಡಿದ್ದಾರೆ. ಅದರಿಂದ ಅಸಮಾಧಾನಗೊಂಡ ನಿರ್ವಾಹಕಿ ಸುಕನ್ಯಾ, ಏರುಧ್ವನಿಯಲ್ಲಿ ಬೇಗನೇ ತೋರಿಸಬೇಕು ಎಂದಿದ್ದಾರೆ. ಈ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಅದು ವಿಕೋಪಕ್ಕೆ ಹೋದಾಗ ಆರೋಪಿ ಮೋನಿಷಾ, ನಿರ್ವಾಹಕಿ ಸುಕನ್ಯಾ ಮೇಲೆ ಹಲ್ಲೆ ನಡೆಸಿ, ಉಗುರಿನಿಂದ ಮುಖ ಪರಚಿದ್ದರು.