ಮಂಗಳೂರು: ಇಲ್ಲಿನ ಪ್ರಸಿದ್ಧ ಪಿಲಿಕುಳ ನಿಸರ್ಗಧಾಮದಲ್ಲಿರುವ ಕಾಡುಕುರಿಗಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ 15 ಕಾಡುಕುರಿಗಳು ಸಾವನ್ನಪ್ಪಿದ ಘಟನೆ ಗುರುವಾರ ರಾತ್ರಿ ನಡೆದಿದೆ.
ನಿಸರ್ಗಧಾಮದ ಬಳಿಯಿರುವ ಡಂಪಿಂಗ್ ಯಾರ್ಡ್ ನಿಂದ ಜಿಗಿದು ಬೀದಿ ನಾಯಿಗಳು ನಿಸರ್ಗಧಾಮದ ಒಳಗೆ ಬಂದಿದ್ದು, ಕಾಡುಕುರಿಗಳ ಮೇಲೆ ದಾಳಿ ಮಾಡಿದೆ. ಕಾಡುಕುರಿಗಳ ಕುತ್ತಿಗೆ ಭಾಗಕ್ಕೆ ತೀವ್ರ ಗಾಯವಾದ ಕಾರಣ 15 ಕಾಡುಕುರಿಗಳು ಸಾವನ್ನಪ್ಪಿದೆ. ಎರಡು ಕಾಡುಕುರಿಗಳಿಗೆ ಗಾಯವಾಗಿದೆ ಎಂದು ವರದಿಯಾಗಿದೆ.
ಇಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ. ತಡೆಗೋಡೆ ನಿರ್ಮಾಣವಾದರೆ ಬೀದಿನಾಯಿಗಳು ಒಳ ಪ್ರವೇಶಿಸುವುದನ್ನು ತಡೆಯಬಹುದು ಎನ್ನಲಾಗಿದೆ.
ಮೊದಲು ಪಿಲಿಕುಳ ನಿಸರ್ಗಧಾಮದಲ್ಲಿ ಜಿಂಕೆಗಳು ಸಾವನ್ನಪ್ಪಿದೆ ಎಂದು ವರದಿಯಾಗಿತ್ತು. ಆದರೆ ನಂತರ ನಿಸರ್ಗಧಾಮದ ನಿರ್ದೇಶಕ ಜಯಪ್ರಕಾಶ್ ಬಂಢಾರಿ ಸ್ಪಷ್ಟನೆ ನೀಡಿದ್ದು, ಬೀದಿನಾಯಿಗಳ ದಾಳಿಗೆ ಕಾಡುಕುರಿಗಳು ಸಾವನ್ನಪ್ಪಿದ್ದು, ಜಿಂಕೆಗಳಲ್ಲ. ಅವುಗಳೆರಡು ನೋಡಲು ಒಂದೇ ರೀತಿ ಇರುವ ಕಾರಣ ಗೊಂದಲ ಉಂಟಾಯಿತು ಎಂದಿದ್ದಾರೆ.