Advertisement

Jammu ದೋಡಾದಲ್ಲಿ ಸೇನಾ ಪೋಸ್ಟ್ ಗುರಿ: 3 ದಿನಗಳಲ್ಲಿ ಮೂರನೇ ಉಗ್ರ ದಾಳಿ

09:46 AM Jun 12, 2024 | Team Udayavani |

ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ದೋಡಾ ಜಿಲ್ಲೆಯ ಸೇನೆಯ ತಾತ್ಕಾಲಿಕ ಕಾರ್ಯಾಚರಣಾ ನೆಲೆ (TOB) ನಲ್ಲಿ ಗುಂಡು ಹಾರಿಸಿದ ನಂತರ ಒಬ್ಬ ಉಗ್ರನನ್ನು ಹತ್ಯೆಗೈಯಲಾಗಿದೆ. ಒಬ್ಬ ನಾಗರಿಕ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ರಿಯಾಸಿ ಮತ್ತು ಕಥುವಾದಲ್ಲಿ ದಾಳಿ ನಡೆದ ನಂತರ, ಜಮ್ಮು ಪ್ರದೇಶದಲ್ಲಿ ಕಳೆದ ಮೂರು ದಿನಗಳಲ್ಲಿ ಇದು ಮೂರನೇ ಉಗ್ರ ದಾಳಿಯಾಗಿದೆ.

“ಒಬ್ಬ ಭಯೋತ್ಪಾದಕನನ್ನು ತಟಸ್ಥಗೊಳಿಸಲಾಗಿದೆ ಮತ್ತು ಒಬ್ಬ ನಾಗರಿಕ ಗಾಯಗೊಂಡಿದ್ದಾನೆ ಆದರೆ ಈಗ ಅಪಾಯದಿಂದ ಪಾರಾಗಿದ್ದಾನೆ. ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಮತ್ತು ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದಾರೆ” ಎಂದು ಜಮ್ಮು ಎಡಿಜಿಪಿ ಆನಂದ್ ಜೈನ್ ಹೇಳಿದ್ದಾರೆ.

ಚತ್ತರ್ಗಾಲಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಎನ್‌ಕೌಂಟರ್ ನಡೆಯುತ್ತಿದ್ದು, ದೋಡಾದ ಭದೇರ್ವಾದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಮನೆಯೊಂದರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ ನಂತರ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಓರ್ವನನ್ನು ಹತ್ಯೆ ಮಾಡಿದ ಗಂಟೆಗಳ ನಂತರ ದೋಡಾ ಜಿಲ್ಲೆಯಲ್ಲಿ ದಾಳಿ ನಡೆದಿದೆ.

Advertisement

ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಪ್ರಕಾರ, ಅಂತಾರಾಷ್ಟ್ರೀಯ ಗಡಿಗೆ (ಐಬಿ) ಸಮೀಪವಿರುವ ಹಿರಾನಗರ ಸೆಕ್ಟರ್‌ನಲ್ಲಿರುವ ಕಥುವಾದ ಸೈದಾ ಸುಖಲ್ ಗ್ರಾಮದ ಮನೆಯೊಂದರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.

ಜೂನ್ 9 ರಂದು ರಿಯಾಸಿ ಜಿಲ್ಲೆಯ ದೇಗುಲದಿಂದ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಮೇಲೆ ಗುಂಡಿನ ದಾಳಿ ನಡೆಸಿ 10 ಜನರನ್ನು ಹತ್ಯೆಗೈಯಲಾಗಿತ್ತು. ದಾಳಿಯಲ್ಲಿ 33 ಮಂದಿ ಗಾಯಗೊಂಡಿದ್ದರು.

ಮೂಲಗಳ ಪ್ರಕಾರ, ಭಯೋತ್ಪಾದಕರು ಮೇ 4 ರಂದು ಪೂಂಚ್‌ನಲ್ಲಿ ಭಾರತೀಯ ವಾಯುಪಡೆ (ಐಎಎಫ್) ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡ ಗುಂಪಿಗೆ ಸೇರಿದವರಾಗಿದ್ದಾರೆ.

ಸ್ಕೆಚ್ ಬಿಡುಗಡೆ
ಪೌನಿ ಪ್ರದೇಶದಲ್ಲಿ ಯಾತ್ರಿಕರ ಬಸ್ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿರುವ ಉಗ್ರ ರ ಬಗ್ಗೆ ಯಾವುದೇ ಫಲಪ್ರದ ಮಾಹಿತಿ ನೀಡಿದರೆ 20 ಲಕ್ಷ ರೂ.ಇನಾಮನ್ನು ಘೋಷಿಸಿರುವ ರಿಯಾಸಿ ಪೊಲೀಸರು ಸ್ಕೆಚ್ ಬಿಡುಗಡೆ ಮಾಡಿದ್ದಾರೆ.

ಪ್ರತ್ಯಕ್ಷದರ್ಶಿಗಳ ಮಾಹಿತಿ ಮತ್ತು ವಿವರಣೆ ಆಧರಿಸಿ ರೇಖಾಚಿತ್ರ ಸಿದ್ಧಪಡಿಸಲಾಗಿದೆ. ವಿಶ್ವಾಸಾರ್ಹ ಮಾಹಿತಿಯನ್ನು ಒದಗಿಸುವಂತೆ ರಿಯಾಸಿ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next