ಕಾಬೂಲ್: ಅಫ್ಘಾನಿಸ್ಥಾನದ ಉನ್ನತ ಶಿಕ್ಷಣದ ಪ್ರಧಾನ ಕೇಂದ್ರ ಕಾಬೂಲ್ ವಿಶ್ವವಿದ್ಯಾನಿಲಯದ ಆವರಣಕ್ಕೆ ಉಗ್ರರು ಲಗ್ಗೆ ಹಾಕಿ ಎಂಟು ಮಂದಿ ವಿದ್ಯಾರ್ಥಿಗಳ ಸಹಿತ 25 ಮಂದಿಯನ್ನು ಹತ್ಯೆಗೈದ್ದಾರೆ. ಬರೋಬ್ಬರಿ ಆರು ತಾಸುಗಳ ಕಾಲ ನಡೆದ ದಾಳಿ, ಗುಂಡಿನ ಚಕಮಕಿ ಸೋಮವಾರ ಸಂಜೆಯ ವೇಳೆಗೆ ಮುಕ್ತಾಯವಾಗಿದೆ. ದಾಳಿಗೆ ಕಾರಣರಾಗಿರುವ ಮೂವರು ಉಗ್ರರನ್ನೂ ಕೊಲ್ಲಲಾಗಿದೆ ಎಂದು ಅಲ್ಲಿನ ಗೃಹ ಸಚಿವಾಲಯ ತಿಳಿಸಿದೆ. ವಿ.ವಿ.ಯ ಆವರಣದಲ್ಲಿ ಪುಸ್ತಕ ಪ್ರದರ್ಶನ ಆಯೋಜಿಸಲಾಗಿತ್ತು. ಅದರಲ್ಲಿ ಅಫ್ಘಾನಿಸ್ಥಾನದಲ್ಲಿರುವ ಇರಾನ್ ರಾಯಭಾರಿ ಕೂಡ ಪಾಲ್ಗೊಂಡಿರುವಂತೆಯೇ ಉಗ್ರರು ಈ ಕುಕೃತ್ಯ ನಡೆಸಿದ್ದಾರೆ.
ಬೆಳಗ್ಗೆ 11 ಗಂಟೆಗೆ ವಿ.ವಿ. ಆವರಣದೊಳಕ್ಕೆ ಮೂವರು ಉಗ್ರರು ನುಗ್ಗಿದ್ದರು. ಪ್ರತ್ಯಕ್ಷದರ್ಶಿ ವಿದ್ಯಾರ್ಥಿ ನೀಡಿದ ಮಾಹಿತಿ ಪ್ರಕಾರ ಅವರು ಪಿಸ್ತೂಲ್, ಎ.ಕೆ. 56 ಬಂದೂಕುಗಳನ್ನು ಹಿಡಿದು ಗುಂಡು ಹಾರಿಸುತ್ತಾ ಒಳನುಗ್ಗಿದ್ದರು. “ನನ್ನ 14 ಮಂದಿ ಸಹಪಾಠಿಗಳು ಒಂದೋ ಸಾವಿಗೀಡಾಗಿದ್ದಾರೆ ಇಲ್ಲವೇ ಗಾಯಗೊಂಡಿದ್ದಾರೆ’ ಎಂದು ಈ ಪ್ರತ್ಯಕ್ಷದರ್ಶಿ ಹೇಳಿದ್ದಾರೆ.
ಉಗ್ರರು ವಿ.ವಿ.ಯ ಪೂರ್ವ ಭಾಗದಿಂದ ಪ್ರವೇಶಿಸಿದ್ದರು. ಇದೇ ಸಂದರ್ಭದಲ್ಲಿ ಒಂದು ಸ್ಫೋಟವೂ ನಡೆದಿದ್ದು, ಅದರಲ್ಲಿ ಎಂಟು ಮಂದಿ ಅಸುನೀಗಿದ್ದಾರೆ. ಘಟನೆ ವೇಳೆ ಕ್ಯಾಂಪಸ್‌ನಲ್ಲಿ ಸುಮಾರು 17 ಸಾವಿರ ಮಂದಿ ವಿದ್ಯಾರ್ಥಿಗಳು ಇದ್ದರು.
ವಿ.ವಿ. ಆವರಣದಲ್ಲಿ ಪುಸ್ತಕ ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದರಲ್ಲಿ ಹಲವು ಗಣ್ಯರಿದ್ದರು. ಆದರೆ ಅಫ್ಘಾನ್ ಸರಕಾರ ಮಾತ್ರ ಈ ಬಗ್ಗೆ ಮೌನವಾಗಿಯೇ ಉಳಿದಿದೆ. ದಾಳಿ ಇರಾನ್ ರಾಯಭಾರಿಯನ್ನೇ ಗುರಿಯಾಗಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. 1998ರಲ್ಲಿ ಇರಾನ್‌ನ 9 ಮಂದಿ ರಾಜತಾಂತ್ರಿಕರು ಅಫ್ಘಾನ್‌ನಲ್ಲಿ ಅಸುನೀಗಿದ್ದರು. ಅದಕ್ಕೆ ತಾಲಿಬಾನ್ ಕಾರಣವೆಂದು ಇರಾನ್ ಆರೋಪಿಸಿತ್ತು.
ಹತ್ತು ದಿನಗಳ ಹಿಂದೆ ಇಸ್ಲಾಮಿಕ್ ಸ್ಟೇಟ್‌ನ ಆತ್ಮಹತ್ಯಾ ಬಾಂಬರ್ ಶಿಕ್ಷಣ ಸಂಸ್ಥೆಯೊಂದರ ಮೇಲೆ ದಾಳಿ ನಡೆಸಿ 24 ಮಂದಿ ವಿದ್ಯಾರ್ಥಿಗಳ ಸಾವಿಗೆ ಕಾರಣನಾಗಿದ್ದ.