Advertisement

ಅಂಚೆ ಪತ್ರ ಬಟವಾಡೆ ಮಾಡಲು ತೆರಳಿದ ಪೋಸ್ಟ್‌ಮ್ಯಾನ್‌ ಮೇಲೆ ಹಲ್ಲೆ

10:37 AM Jun 18, 2020 | mahesh |

ಮಂಗಳೂರು: ರಿಜಿಸ್ಟರ್ಡ್‌ ಪೋಸ್ಟ್‌ ಬಟವಾಡೆ ಮಾಡಲು ಮನೆಗೆ ತೆರಳಿದ ಪೋಸ್ಟ್‌ ಮ್ಯಾನ್‌ ಮೇಲೆ ಯುವಕನೊಬ್ಬ ಹಲ್ಲೆ ನಡೆಸಿ ದ್ವಿಚಕ್ರ ವಾಹನವನ್ನು ಜಖಂಗೊಳಿಸಿದ ಘಟನೆ ನಗರದ ಉರ್ವ ಮಠದಕಣಿಯಲ್ಲಿ ಜೂ. 17ರಂದು ನಡೆದಿದೆ.  ಅಶೋಕನಗರ ಅಂಚೆ ಕಚೇರಿಯ ಪೋಸ್ಟ್‌ ಮ್ಯಾನ್‌ ಕೋಟೆಕಾರ್‌ ಕೊಲ್ಯ ನಿವಾಸಿ ದಿನೇಶ್‌ (49) ಹಲ್ಲೆಗೊಳಗಾದವರು. ಮಠದಕಣಿಯ ಮನೀಶ್‌ (20) ಪ್ರಕರಣದ ಆರೋಪಿ.

Advertisement

ದಿನೇಶ್‌ ಅವರು ಕಳೆದ 19 ವರ್ಷಗಳಿಂದ ಪೋಸ್ಟ್‌ಮ್ಯಾನ್‌ ಆಗಿ ಕೆಲಸ ನಿರ್ವಹಿಸುತ್ತಿದ್ದು, ಮಂಗಳವಾರ ಮನೀಶ್‌ಗೆ ಬಂದ ರಿಜಿಸ್ಟರ್ಡ್‌ ಪೋಸ್ಟ್‌ ಬಟವಾಡೆ ಮಾಡಲು ಮಠದಕಣಿಯ ಆತನ ಮನೆಗೆ ತೆರಳಿದ್ದರು. ಟಪಾಲು ಬಟವಾಡೆ ಮಾಡುವ ಸಂದರ್ಭದಲ್ಲಿ ಪೋಸ್ಟ್‌ಮ್ಯಾನ್‌ ದಿನೇಶ್‌ ಅವರನ್ನು ಮನೀಶ್‌ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹಲ್ಲೆ ನಡೆಸಿದ್ದಲ್ಲದೆ, ಬಳಿಕ ಕಬ್ಬಿಣದ ರಾಡ್‌ ಹಿಡಿದು ಬೆದರಿಕೆ ಹಾಕಿ, ದಿನೇಶ್‌ ಅವರ ಬೈಕ್‌ನ್ನು ರಾಡ್‌ನಿಂದ ಜಖಂಗೊಳಿಸಿ, ಅಂಚೆ ಕಾಗದ ಪತ್ರಗಳನ್ನು ಎಸೆದಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಸಂದರ್ಭದಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರೂ, ಅವರ ಮುಂದೆಯೇ ಮನೀಶ್‌ ಯಾವುದೇ ಅಂಜಿಕೆಯಿಲ್ಲದೆ ರಾಡ್‌ ಹಿಡಿದು ನಿಂತಿದ್ದು, ಈ ವೀಡಿಯೋ ದೃಶ್ಯ ವೈರಲ್‌ ಆಗಿದೆ. ಈ ಘಟನೆಯಿಂದ ತನಗೆ 35,000 ರೂ. ನಷ್ಟ ಸಂಭವಿಸಿದೆ ಎಂದು ಪೋಸ್ಟ್‌ ಮ್ಯಾನ್‌ ದಿನೇಶ್‌ ಅವರು ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿ ಮನೀಶ್‌ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವಂತೆ ವರ್ತಿಸುತ್ತಿದ್ದಾನೆ ಎಂಬ ಆರೋಪ ಕೇಳಿ ಬರುತ್ತಿದ್ದು, ಬರ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next