ಹಳಿಯಾಳ: ಗುಟ್ಕಾ, ತಂಬಾಕು ಮಾರಾಟ ಮಾಡುವ ಹಾಗೂ ಪ್ಲಾಸ್ಟಿಕ್ ಬಳಕೆ-ಮಾರಾಟ ಮಾಡುವವರ ವಿರುದ್ಧ ಪುರಸಭೆ ಹಾಗೂ ವಿವಿಧ ಇಲಾಖೆಗಳ ತಂಡ ಜಂಟಿ ಆಶ್ರಯದಲ್ಲಿ ದಾಳಿ ನಡೆಸಿ 21 ಕೆಜಿ ಪ್ಲಾಸ್ಟಿಕ್ ವಶಪಡಿಸಿಕೊಂಡು 9 ಸಾವಿರಕ್ಕೂ ಅಧಿಕ ದಂಡ ವಿಧಿಸಲಾಯಿತು.
ಪ್ಲಾಸ್ಟಿಕ್ ಮುಕ್ತ ಹಳಿಯಾಳ ಮಾಡಲು ಪುರಸಭೆಯವರು ನಿರ್ಧರಿಸಿರುವ ಕಾರಣ ಪುರಸಭೆಯ ಅಧಿಕಾರಿಗಳು, ತಹಶೀಲ್ದಾರ್‌ರು ಹಾಗೂ ಆರೋಗ್ಯ, ಇಲಾಖೆ, ಸಿಡಿಪಿಒ ಇಲಾಖೆಯವರು ಮೇಲಿಂದ ಮೇಲೆ ಜಂಟಿ ಕಾರ್ಯಾಚರಣೆ ನಡೆಸಿ ಅಂಗಡಿಕಾರರಿಗೆ ಬಿಸಿ ಮುಟ್ಟಿಸಿದರು.
ನಿರಂತರ ದಾಳಿ ನಡೆಸಲಾಗುತ್ತಿದ್ದು, ಪಟ್ಟಣದ ಪೋಸ್ಟ್ ಆಫೀಸ್ ರಸ್ತೆ, ಗಣಪತಿ ಗಲ್ಲಿ, ಫೀಶ್ ಸರ್ಕಲ್, ಬಜಾರ್ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಮಿಂಚಿನ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್‌ಗಳನ್ನು ದಾಸ್ತಾನು ಮಾಡಿದ ಹಾಗೂ ಮಾರಾಟ ಮಾಡುತ್ತಿದ್ದ ಅಂಗಡಿ ಮುಂಗಟ್ಟುಗಳಲ್ಲಿಯ 19 ಕೆಜಿ ಪ್ಲಾಸ್ಟಿಕ್‌ಗಳನ್ನು ವಶಕ್ಕೆ ಪಡೆದು 3200 ರೂ. ದಂಡ ವಿಧಿಸಲಾಯಿತು. ತಂಬಾಕು ಮಾರಾಟ ಮಾಡುತ್ತಿದ್ದ ಅಂಗಡಿಗಳಿಂದ 1.5 ಕೆಜಿ ತಂಬಾಕು ವಶಕ್ಕೆ ಪಡೆದು ಸರ್ಕಾರದ ನಿಯಮಗಳನ್ನು ಮೀರಿ ಗುಟ್ಕಾ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ತಂಡವು 4,300 ರೂ.ಗಳನ್ನು ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.
ಇನ್ನೂ ಭಾನುವಾರ ಸಂತೆಯ ದಿನ ಕೂಡ ಕಾರ್ಯಾಚರಣೆ ನಡೆಸಿರುವ ಹಳಿಯಾಳ ಪುರಸಭೆಯವರು 2 ಕೆಜಿ ಪ್ಲಾಸ್ಟಿಕ್ ವಶಕ್ಕೆ ಪಡೆದು 2750 ರೂ. ದಂಡ ವಿಧಿಸಿದ್ದಾರೆ.
ತಾಪಂ ಇಒ ಡಾ| ಮಹೇಶ ಕುರಿಯವರ, ತಹಶೀಲ್ದಾರ್ ವಿದ್ಯಾಧರ ಗುಳಗುಳೆ, ತಾಲೂಕು ವೈದ್ಯಾಧಿಕಾರಿ ಡಾ| ಮಹೇಶ ಕದಂ, ಮುಖ್ಯಾಧಿಕಾರಿ ಕೇಶವ ಚೌಗುಲೆ, ಪರಿಸರ ಅಭಿಯಂತರರಾದ ಬಿ.ಎಸ್. ದರ್ಶಿತಾ, ಇಂಜಿನಿಯರ್ ಹರೀಶಗೌಡ, ಅಶೋಕ ಸಾಳೆನ್ನವರ, ಸಿಡಿಪಿಒ ಅಂಬಿಕಾ ಕಟಕೆ, ರಾಜೇಶ್ವರಿ ಗವಿಮಠ, ಪೊಲೀಸ್ ಇಲಾಖೆ ಎಎಸ್‌ಐ ಸುರೇಶ ಮುಳೆ, ಆರೋಗ್ಯ ಇಲಾಖೆಯ ಪ್ರಕಾಶ ಮಾನೆ ಇದ್ದರು.