ರಿಪ್ಪನ್‌ಪೇಟೆ: ತಾಲೂಕಿನಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಕಾಡಾನೆ ಹೊಲಗದ್ದೆಗಳಿಗೆ ನಿರಂತರ ದಾಳಿ ನಡೆಸಿ, ರೈತರ ಬೆಳೆ ನಾಶಪಡಿಸುತ್ತಿದ್ದರೂ ಅರಣ್ಯ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅರಸಾಳು ಹಾಗೂ ಹೆದ್ದಾರಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾನಗೋಡು, ತಮ್ಮಡಿಕೊಪ್ಪ ಹಾರಂಬಳ್ಳಿ ಬಾಳೆಕೊಡ್ಲು ಕಾರೆಹೊಂಡ ಕಗಚಿ ತಳಲೆ ಸುಳಕೋಡು ಗ್ರಾಮದ ರೈತರ ಜಮೀನಿಗೆ ನಿರಂತರ ದಾಳಿಯಿಡುತ್ತಿದೆ.
ರೈತರು ಬೆಳೆದ ಅಡಿಕೆ, ತೆಂಗು, ಬಾಳೆ, ಕಬ್ಬು ಬೆಳೆಗಳನ್ನು ಮುರಿದು ತಿಂದು ನಷ್ಟಮಾಡುತ್ತಿದೆ. ಈ ಭಾಗದಲ್ಲಿ ಆನೆ ಬೀಡುಬಿಟ್ಟಿರುವ ಮಾಹಿತಿಯಿದ್ದರೂ ಅರಣ್ಯ ಇಲಾಖೆ ಮಾತ್ರ ರಾತ್ರಿ ಗಸ್ತು ತಿರುಗುವುದನ್ನು ಹೊರತು ಪಡಿಸಿದರೆ ಆನೆಯನ್ನು ಬೇರೆಡೆ ಓಡಿಸುವ ಯಾವುದೇ ಪ್ರಯತ್ನ ಮಾಡದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಡಾನೆ ಹಗಲಿರುಳು ದುಡಿದು ಹತ್ತಾರು ವರ್ಷಗಳು ಕಷ್ಟಪಟ್ಟು ಸಾಕಿದ ಅಡಿಕೆ ತೆಂಗು ಮರಗಳನ್ನು ಮುರಿದು ಧರೆಗುರುಳಿಸುತ್ತಿದೆ. ಬೆಳಗಾಗಿ ನೋಡಿದರೆ ಕೈಗೆ ಬಂದ ಫಸಲನ್ನು ಕಳೆದುಕೊಂಡು ಮರುಗುವುದು ನಿತ್ಯರೋದನವಾಗಿದೆ. ನಾಳೆ ಮತ್ತೆ ತಮ್ಮ ಜಮೀನುಗಳಿಗೆ ಆನೆ ಬರುವುದೋ ಎಂಬ ಆತಂಕದಿಂದ ನಿದ್ರೆ ಬಿಟ್ಟು ಪಟಾಕಿ ಸಿಡಿಸಿ ಕಾವಲು ಕಾಯುವುದು ರೈತರಿಗೆ ಅನಿವಾರ್ಯವಾಗಿದೆ.
ಬೆಳೆ ಕಳೆದುಕೊಂಡ ರೈತರು ಹಾಗೂ ಭಯಭೀತಿಗೊಂಡ ಸುತ್ತಮುತ್ತಲಿನ ಜನರು ಅರಣ್ಯಾ ಧಿಕಾರಿಗಳಿಗೆ, ಗೃಹ ಸಚಿವರಿಗೆ ಆನೆ ಕಾಟ ನಿರ್ಬಂಧಿ ಸುವಂತೆ ಹಲವು ಬಾರಿ ಬೇಡಿಕೊಳ್ಳುತ್ತಿದ್ದರೂ ಅಧಿಕಾರಸ್ಥರು ಮಾತ್ರ ಜನರ ಸಮಸ್ಯೆ ಪರಿಹರಿಸಲು ನಿರಾಸಕ್ತಿ ವಹಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಮೂಗುಡ್ತಿ ಅರಣ್ಯ ಕಚೇರಿ ಎದುರು ಇಲಾಖೆಯ ವಿರುದ್ಧ ಜನರನ್ನು ಸಂಘಟಿಸಿ, ಪ್ರತಿಭಟಿಸಲಾಗುವುದು ಎಂದು ಹೆದ್ದಾರಿಪುರ ಗ್ರಾಮ ಪಂಚಾಯತಿ ಸದಸ್ಯ ಪ್ರವೀಣ್ ಸುಳಕೋಡು ತಿಳಿಸಿದ್ದಾರೆ.