ಬೆಂಗಳೂರು: ಹಳೇ ದ್ವೇಷಕ್ಕೆ ಎದುರಾಳಿ ಮೇಲೆ ದಾಳಿ ನಡೆಸಲು ಬಂದ ರೌಡಿಶೀಟರ್‌ವೊಬ್ಬ ಸಂಬಂಧವೇ ಇಲ್ಲದ ಮಹಿಳೆಯೊಬ್ಬರ ಮನೆಗೆ ಬಾಗಿಲಿಗೆ ಮಾರಕಾಸ್ತ್ರದಿಂದ ಹೊಡೆದು, ಅದನ್ನು ತಡೆಯಲು ಮುಂದಾದ ಮಹಿಳೆ ಕೈಗೆ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಭಾನುವಾರ ತಡರಾತ್ರಿ ಸುಬ್ರಹ್ಮಣ್ಯನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗಾಯಿತ್ರಿನಗರ ನಿವಾಸಿ, ಶಿಕ್ಷಕಿಯೂ ಆಗಿರುವ ವೀಣಾ(48) ಗಾಯಗೊಂಡ ಮಹಿಳೆ. ಕೃತ್ಯ ಎಸಗಿದ ರೌಡಿಶೀಟರ್ ಅಭಿಷೇಕ್ ಎಂಬಾತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಈ ಸಂಬಂಧ ವೀಣಾ ಎಂಬುವರು ನೀಡಿದ ದೂರಿನ ಮೇರೆಗೆ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದರು. ಖಾಸಗಿ ಶಾಲೆಯ ಶಿಕ್ಷಕಿಯಾಗಿರುವ ವೀಣಾ ಗಾಯತ್ರಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಈ ಮಧ್ಯೆ ರೌಡಿಶೀಟರ್ ಅಭಿಷೇಕ್ ಮತ್ತು ರಾಕೇಶ್ ಅಲಿಯಾಸ್ ರಾಕಿ ಎಂಬಾತನ ನಡುವೆ ಕೆಲ ದಿನಗಳ ಹಿಂದೆ ಗಣಪತಿ ಪ್ರತಿಷ್ಠಾಪನೆ ವಿಚಾರಕ್ಕೆ ಗಲಾಟೆ ಆಗಿತ್ತು. ಆಗ ರಾಕೇಶ್, ಅಭಿಷೇಕ್‌ಗೆ ಚಾಕುವಿನಿಂದ ಹಲ್ಲೆ ನಡೆಸಿದ್ದ. ಜತೆಗೆ ಯುವತಿ ವಿಚಾರಕ್ಕೂ ಈ ಹಿಂದೆ ಇಬ್ಬರ ನಡುವೆ ಗಲಾಟೆಯಾಗಿತ್ತು ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಗಾಯಿತ್ರಿ ನಗರಕ್ಕೆ ಸ್ನೇಹಿತರ ಜತೆ ಬಂದ ಅಭಿಷೇಕ್, ರಾಕೇಶ್ ಮನೆ ಎಂದು ಶಿಕ್ಷಕಿ ವೀಣಾ ಮನೆ ಬಾಗಿಲನ್ನು ಮಾರಕಾಸ್ತ್ರಗಳಿಂದ ಹೊಡೆದಿದ್ದಾನೆ. ಜೋರು ಶಬ್ದ ಕೇಳಿ ಬಾಗಿಲು ತೆರೆದು, ತಡೆಯಲು ಹೋದಾಗ ವೀಣಾ ಅವರ ಕೈಗೆ ಗಂಭೀರ ಗಾಯವಾಗಿದೆ. ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಗಾಯಗೊಂಡಿದ್ದ ವೀಣಾ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ವೀಣಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆರೋಪಿ ಪತ್ತೆ ಕಾರ್ಯ ನಡೆಯುತ್ತಿದೆ. ಜತೆಗೆ ರಾಕೇಶ್‌ನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಸುಬ್ರಹ್ಮಣ್ಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.