ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿನ ಶಿಕ್ಷಣ ಕೇಂದ್ರದ ಮೇಲೆ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಕನಿಷ್ಠ 19 ಮಂದಿ ಸಾವನ್ನಪ್ಪಿರುವ ಘಟನೆ ಶುಕ್ರವಾರ (ಸೆಪ್ಟೆಂಬರ್ 30) ನಡೆದಿದೆ.
ಇದನ್ನೂ ಓದಿ:ಭಾರತೀಯ ಸೇನಾಪಡೆಯ ಮುಖ್ಯಸ್ಥರಾಗಿ ಜನರಲ್ ಅನಿಲ್ ಚೌಹಾಣ್ ಅಧಿಕಾರ ಸ್ವೀಕಾರ
ಶಿಕ್ಷಣ ಕೇಂದ್ರದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ತಯಾರಿ ನಡೆಸುತ್ತಿದ್ದ ಸಂದರ್ಭದಲ್ಲಿ ಆತ್ಮಹತ್ಯಾ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡ ಪರಿಣಾಮ 19 ಮಂದಿ ಸಾವನ್ನಪ್ಪಿದ್ದು, 27 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಅಫ್ಘಾನ್ ರಾಜಧಾನಿ ಕಾಬೂಲ್ ನ ಶಿಯಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಆತ್ಮಹತ್ಯಾ ಬಾಂಬರ್ ದಾಳಿಯಲ್ಲಿ ಹಲವಾರು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿರುವುದಾಗಿ ಅಫ್ಘಾನಿಸ್ತಾನದ ಆಂತರಿಕ ಸಚಿವಾಲಯದ ವಕ್ತಾರ ಅಬ್ದುಲ್ ನಾಫೈ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಭದ್ರತಾ ಪಡೆ ತೆರಳಿದ್ದು, ಆತ್ಮಹತ್ಯಾ ಬಾಂಬರ್ ದಾಳಿಯಲ್ಲಿ ಸಾವನ್ನಪ್ಪಿರುವವರ ನಿಖರ ಅಂಕಿಸಂಖ್ಯೆ ಇನ್ನಷ್ಟೇ ತಿಳಿದುಬರಬೇಕಾಗಿದೆ. ನಾಗರಿಕರ ಮೇಲಿನ ಈ ದಾಳಿ ಅಮಾನವೀಯತೆಯ ಕ್ರೌರ್ಯವಾಗಿದೆ ಎಂದು ಸಚಿವಾಲಯ ತಿಳಿಸಿದೆ.