Advertisement

86 ಯುವಕರ ಮನಪರಿವರ್ತಿಸಿದ ಎಟಿಎಸ್‌

06:45 AM Nov 27, 2017 | Harsha Rao |

ಮುಂಬಯಿ: ಇಡೀ ದೇಶವನ್ನೇ ನಡುಗಿಸಿದಂಥ 26/11ರ ಮುಂಬಯಿ ದಾಳಿ ನಡೆದು ರವಿವಾರಕ್ಕೆ ಸರಿಯಾಗಿ 9 ವರ್ಷ ಪೂರ್ಣಗೊಂಡಿದ್ದು, ಉಗ್ರರ ವಿರುದ್ಧ ಹೋರಾಡಿ ಹುತಾತ್ಮರಾದ ಯೋಧರು ಹಾಗೂ ಗುಂಡಿಗೆ ಬಲಿಯಾದ ನಾಗರಿಕರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವಿಶೇಷವೆಂದರೆ, ಯಾರಧ್ದೋ ಮಾತಿಗೆ ಮರುಳಾಗಿ ತಪ್ಪು ಹಾದಿ ಹಿಡಿದು ತೀವ್ರಗಾಮಿಯಾಗಲು ಹೊರಟಿದ್ದ 80ಕ್ಕೂ ಹೆಚ್ಚು ಮಂದಿಯನ್ನು ಕಳೆದ 2 ವರ್ಷಗಳಲ್ಲಿ ಮಹಾರಾಷ್ಟ್ರ ಉಗ್ರ ನಿಗ್ರಹ ದಳ(ಎಟಿಎಸ್‌)ವು ಮುಖ್ಯವಾಹಿನಿಗೆ ತಂದಿರುವ ಅಂಶವೂ ಇದೀಗ ಬಹಿರಂಗವಾಗಿದೆ.

Advertisement

ಮುಂಬಯಿನಲ್ಲಿ ಪಾಕಿಸ್ಥಾನದ 10 ಮಂದಿ ಉಗ್ರರು ರಕ್ತದೋಕುಳಿ ಹರಿಸಿದ ಬಳಿಕ ತೀವ್ರಗಾಮಿತ್ವದ ಕಡೆಗೆ ಹೊರಳಿದ್ದ 86 ಮಂದಿ ಯುವಕರ ಮನವೊಲಿಸಿ, ಅವರನ್ನು ಕೆಟ್ಟ ಹಾದಿ ತುಳಿಯುವುದರಿಂದ ತಪ್ಪಿಸಲಾಗಿದೆ. ಅಂಥ ಯುವಕರಲ್ಲಿ ಫಾರ್ಮಸಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಯುವ ದಂಪತಿ, ಏರೋನಾಟಿಕಲ್‌ ಎಂಜಿನಿಯರ್‌, ಐಟಿ ವೃತ್ತಿಪರರೂ ಸೇರಿದ್ದಾರೆ. ಜಿಹಾದ್‌ನತ್ತ ಆಕರ್ಷಿತರಾಗಿ ಐಸಿಸ್‌ ಉಗ್ರ ಸಂಘಟನೆ ಸೇರಲೆಂದು ಮನೆ ಬಿಟ್ಟು ಹೊರಟಿದ್ದ ಇಂಥವರನ್ನು ವಾಪಸ್‌ ಕರೆತಂದು, ಸಹಜ ಜೀವನ ನಡೆಸಲು ಪ್ರೇರೇಪಿಸಲಾಗಿದೆ ಎಂದು ಎಟಿಎಸ್‌ ಅಧಿಕಾರಿಗಳು ತಿಳಿಸಿದ್ದಾರೆ. ವಿಶೇಷವೆಂದರೆ, ಈ ಪೈಕಿ 8 ಮಂದಿ ಮಹಿಳೆಯರೂ ಇದ್ದಾರೆ. 

ನಿರಂತರ ಶ್ರಮ: ಜಿಹಾದ್‌ ಕಡೆ ಹೊರಳಿದ್ದ ಯುವಕರ ಕುಟುಂಬ ಸದಸ್ಯರು, ಸಮುದಾಯದ ಧಾರ್ಮಿಕ ನಾಯಕರು ಹಾಗೂ ಆಪ್ತ ಸಮಾಲೋಚಕರನ್ನು ಸಂಪರ್ಕಿಸಿ ಅವರನ್ನು ಮುಖ್ಯವಾಹಿನಿಗೆ ತರಲಾಗಿದೆ. ಪ್ರತಿಯೊಬ್ಬರ ಮನವೊಲಿಸಲೂ ತಲಾ 2 ತಿಂಗಳ ಸಮಯ ಹಿಡಿದಿದೆ ಎಂದಿದ್ದಾರೆ ಅಧಿಕಾರಿಗಳು.

Advertisement

Udayavani is now on Telegram. Click here to join our channel and stay updated with the latest news.

Next