ಲುಸಾನ್ನೆ: ಸ್ಪೇನ್‌ನ 19 ವರ್ಷದ ಕಾರ್ಲೋಸ್ ಅಲ್ಕರಾಝ್ ನೂತನ ಎಟಿಪಿ ಟೆನಿಸ್ ರ್‍ಯಾಂಕಿಂಗ್‌ನಲ್ಲಿ 5ನೇ ಸ್ಥಾನಕ್ಕೆ ನೆಗೆದಿದ್ದಾರೆ. ಇದರೊಂದಿಗೆ ಈ ಶತಮಾನದಲ್ಲಿ ಟಾಪ್-5 ಸ್ಥಾನ ಅಲಂಕರಿಸಿದ ವಿಶ್ವದ 2ನೇ ಅತೀ ಕಿರಿಯ ಟೆನಿಸಿಗನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮೊದಲಿಗ ಬೇರೆ ಯಾರೂ ಅಲ್ಲ, ಸ್ಪೇನ್‌ನವರೇ ಆದ ರಫೆಲ್ ನಡಾಲ್. ಅವರು 2005ರಲ್ಲಿ ಈ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆಗ ನಡಾಲ್ ವಯಸ್ಸು ಕೇವಲ 18 ವರ್ಷ.
ಕಾರ್ಲೋಸ್ ಅಲ್ಕರಾಝ್ಗೆ 4ನೇ ಸ್ಥಾನಕ್ಕೆ ನೆಗೆಯುವ ಉತ್ತಮ ಅವಕಾಶವಿತ್ತು. ಆದರೆ “ಹ್ಯಾಂಬರ್ಗ್ ಯುರೋಪಿಯನ್ ಟೂರ್ನಿ’ಯ ಫೈನಲ್‌ನಲ್ಲಿ ಲೊರೆಂಝೊ ಮುಸೆಟ್ಟಿ ವಿರುದ್ಧ ಅನುಭವಿಸಿದ ಸೋಲು ಇದಕ್ಕೆ ಹಿನ್ನಡೆಯಾಗಿ ಪರಿಣಮಿಸಿತು.
7ಕ್ಕೆ ಕುಸಿದ ಜೊಕೋವಿಕ್
ಡ್ಯಾನಿಲ್ ಮೆಡ್ವೆಡೇವ್ ಅಗ್ರಸ್ಥಾನದಲ್ಲಿ ಮುಂದುವರಿದರೆ, ನೊವಾಕ್ ಜೊಕೋವಿಕ್ 7ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಅಲೆಕ್ಸಾಂಡರ್ ಜ್ವೆರೇವ್ 2ನೇ, ನಡಾಲ್ 3ನೇ ಹಾಗೂ ಸ್ಟೆಫನಸ್ ಸಿಸಿಪಸ್ 4ನೇ ಸ್ಥಾನದಲ್ಲಿದ್ದಾರೆ.