ಲಂಡನ್: ಜಪಾನಿನ ಕೀ ನಿಶಿಕೊರಿ ಕೈಯಲ್ಲಿ ಆಘಾತಾಕರಿ ಸೋಲನುಭವಿಸಿದ ಎರಡೇ ದಿನಗಳಲ್ಲಿ ರೋಜರ್ ಫೆಡರರ್ “ಎಟಿಪಿ ಫೈನಲ್ಸ್ ಟೂರ್ನಿ’ಯಲ್ಲಿ ಗೆಲುವಿನ ಲಯಕ್ಕೆ ಮರಳಿದ್ದಾರೆ.
ಮಂಗಳವಾರ ರಾತ್ರಿಯ ಸ್ಪರ್ಧೆಯಲ್ಲಿ ಆಸ್ಟ್ರಿಯಾದ ಡೊಮಿನಿಕ್ ಥೀಮ್ ಅವರನ್ನು 6-2, 6-3 ನೇರ ಸೆಟ್‌ಗಳಲ್ಲಿ ಮಣಿಸಿದರು. ಇದರೊಂದಿಗೆ ಫೆಡರರ್ ಅವರ ಸೆಮಿಫೈನಲ್ ಸಾಧ್ಯತೆ ಹೆಚ್ಚಿದೆ.
6 ಬಾರಿಯ ಎಟಿಪಿ ಫೈನಲ್ಸ್ ಚಾಂಪಿಯನ್ ಆಗಿರುವ ಫೆಡರರ್ 67 ನಿಮಿಷಗಳಲ್ಲಿ ಥೀಮ್ ವಿರುದ್ಧ ಗೆದ್ದು ಬಂದರು. ಫೆಡರರ್ ಅವರಿನ್ನು ಅಂತಿಮ ಗ್ರೂಪ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್ ವಿರುದ್ಧ ಆಡಲಿದ್ದಾರೆ.
“ಇಲ್ಲಿ ಯಾವ ಪಂದ್ಯವೂ ಸುಲಭವಲ್ಲ. ಮೊದಲು ಸೋತದ್ದು, ಬಳಿಕ ಗೆಲುವನ್ನು ಕಂಡದ್ದೊಂದು ಉತ್ತಮ ಅನುಭವ. ನನ್ನ ಪಾಲಿಗೆ ಇದು ದೊಡ್ಡ ಸವಾಲಾಗಿತ್ತು. ಡೊನಿಮಿಕ್ ವಿರುದ್ಧ ಆಡಿದ ರೀತಿಯಿಂದ ಬಹಳ ಖುಷಿಯಾಗಿದೆ’ ಎಂದು ವಿಶ್ವದ ನಂ.3 ಆಟಗಾರ ಫೆಡರರ್ ಹೇಳಿದರು.
ಮುಂದಿನ ಪಂದ್ಯದ ಬಗ್ಗೆ ಪ್ರತಿಕ್ರಿಯಿಸಿದ ಫೆಡರರ್, “ಇದರ ಬಗ್ಗೆ ನಾನು ಹೆಚ್ಚೇನೂ ಹೇಳಲಾರೆ. ಇದೊಂದು ಕಠಿನ ಪಂದ್ಯ. ಇಲ್ಲಿ ಉತ್ತಮ ಪ್ರದರ್ಶನ ನೀಡುವುದು ಅತ್ಯಗತ್ಯ. ಸ್ಪರ್ಧೆಯಲ್ಲಿ ಉಳಿಯಬೇಕಾದರೆ ಕೆವಿನ್ ಅವರನ್ನು ಸೋಲಿಸಲೇ ಬೇಕು. ಈ ಪ್ರಯತ್ನ ಮಾಡುತ್ತೇನೆ. ಈಗ ಅವರು ಉತ್ತಮ ಫಾರ್ಮ್ನಲ್ಲಿದ್ದಾರೆ. ನನ್ನ ವಿರುದ್ಧ ವಿಂಬಲ್ಡನ್‌ನಲ್ಲಿ ಅಮೋಘ ಆಟವಾಡಿದ್ದರು’ ಎಂದರು.