ಕಾಸರಗೋಡು: ದಕ್ಷಿಣದ ಕಾಶಿ ಎಂದೇ ಪ್ರಖ್ಯಾತವಾಗಿರುವ ಕಾಸರಗೋಡು ಜಿಲ್ಲೆಯ ಬೇಕಲದ ತೃಕ್ಕನ್ನಾಡ್ ಸಮುದ್ರ ಕಿನಾರೆಯಲ್ಲಿ ಆಟಿ ಅಮಾವಾಸ್ಯೆಯಾದ ಆ. 31ರಂದು ಪಿತೃ ತರ್ಪಣ ನಡೆಯಿತು.
ಆಟಿ ಅಮಾವಾಸ್ಯೆ ಪ್ರಯುಕ್ತ ಬುಧವಾರ ಕೇರಳ ರಾಜ್ಯಾದ್ಯಂತ ವಿವಿಧ ದೇವಸ್ಥಾನಗಳಲ್ಲಿ ಅಗಲಿದ ಆತ್ಮಗಳಿಗೆ ಮೋಕ್ಷಕ್ಕಾಗಿ ಪಿತೃ ತರ್ಪಣೆ ನಡೆಯಿತು. ತೃಕ್ಕನ್ನಾಡಿನಲ್ಲಿ ನಡೆದ ಪಿತೃ ತರ್ಪಣ ಕಾರ್ಯಕ್ರಮದಲ್ಲಿ ಕಾಸರಗೋಡು, ಅವಿಭಜಿತ ದ.ಕ. ಜಿಲ್ಲೆಗಳ ಸಹಿತ ನಾನಾ ಕಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದರು.
ಇತಿಹಾಸ ಪ್ರಸಿದ್ಧವಾಗಿರುವ ತೃಕ್ಕನ್ನಾಡ್ ತ್ರಯಂಬಕೇಶ್ವರ ದೇವಸ್ಥಾನ ಪಿತೃ ತರ್ಪಣೆಗೆ ಖ್ಯಾತಿಯನ್ನು ಪಡೆದಿದೆ. ಇದು ದಕ್ಷಿಣದ ಕಾಶಿ ಎಂದೂ ಗುರುತಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಆಟಿ ಅಮಾವಾಸ್ಯೆಯಂದು ಸಾವಿರಾರು ಮಂದಿ ಅಗಲಿದ ಹಿರಿಯರಿಗೆ ಮೋಕ್ಷ ಲಭಿಸಲು ಪಿತೃ ತರ್ಪಣ ಮಾಡುವುದು ರೂಢಿ. ವರ್ಷದಿಂದ ವರ್ಷಕ್ಕೆ ಪಿತೃ ತರ್ಪಣ ಕಾರ್ಯಕ್ರಮದಲ್ಲಿ ಭಾಗವಹಿಸುವವರ ಸಂಖ್ಯೆ ಹೆಚ್ಚುತ್ತಿದ್ದು, ಈ ವರ್ಷವೂ ಭಾರೀ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ಭಕ್ತರ ಸಂಖ್ಯೆಯ ಹೆಚ್ಚಳವನ್ನು ಪರಿಗಣಿಸಿ ಅವರಿಗೆ ಸಕಲ ಸೌಲಭ್ಯ ಹಾಗೂ ರಕ್ಷಣೆ ನೀಡುವುದಕ್ಕೆ ಎಲ್ಲ ಕ್ರಮ ತೆಗೆದುಕೊಳ್ಳಲಾಗಿತ್ತು. ಕಡಲಬ್ಬರದ ಹಿನ್ನೆಲೆಯಲ್ಲಿ ಸಮುದ್ರ ಸ್ನಾನ ನಡೆಸುವವರಿಗೆ ಪೊಲೀಸರು ನಿಯಂತ್ರಣ ಏರ್ಪಡಿಸಿದ್ದರು. ಆದರೂ ಪಿತೃ ತರ್ಪಣಕ್ಕೆ ಯಾವುದೇ ಸಮಸ್ಯೆ ಉಂಟಾಗಲಿಲ್ಲ.
ಪೊಲೀಸರಿಂದ ಸುರಕ್ಷಾ ಕ್ರಮ
ಪಿತೃ ತರ್ಪಣೆಯ ಅಂಗವಾಗಿ ಸಮುದ್ರ ಸ್ನಾನ ಮಾಡಬೇಕಾಗಿದ್ದು, ಇಂತಹ ಸಂದರ್ಭದಲ್ಲಿ ಅಪಾಯಕ್ಕೆ ಸಿಲುಕದಂತೆ ಲೈಫ್ ಜಾಕೆಟ್ ಮೊದಲಾದ ಸೌಕರ್ಯಗಳನ್ನೊಳಗೊಂಡ ಕೋಸ್ಟ್ ಗಾರ್ಡ್ ನೇತೃತ್ವದಲ್ಲಿ ಕೋಸ್ಟಲ್ ಪೊಲೀಸ್ ಕರ್ತವ್ಯ ನಿರ್ವಹಿಸಿದರು.