Advertisement

ಇಎಂವಿ ಚಿಪ್‌ ಎಟಿಎಂ ಕಾರ್ಡ್‌ ಕಡ್ಡಾಯ

10:05 AM Dec 10, 2018 | |

ಸುಳ್ಯ: ಹಳೆಯ ಮಾದರಿಯ, ಮ್ಯಾಗ್ನೆಟಿಕ್‌ ಸ್ಟ್ರೈಪ್‌ ಎಟಿಎಂ ಡೆಬಿಟ್‌ ಕಾರ್ಡ್‌ ಹೊಂದಿರುವ ಗ್ರಾಹಕರು ಆದಷ್ಟು ಬೇಗ ಬ್ಯಾಂಕ್‌ಗೆ ತೆರಳಿ ಇಎಂವಿ ಚಿಪ್‌ ಇರುವ ಎಟಿಎಂ ಪಡೆದುಕೊಳ್ಳಬೇಕು. ಆರ್‌ಬಿಐ ಆದೇಶದ ಪ್ರಕಾರ ಡಿ.31ರ ಅನಂತರ ಹಳೆಯ ಕಾರ್ಡ್‌ ಉಪಯೋಗಿಸಿ ಹಣ ಡ್ರಾ ಮಾಡಲು ಸಾಧ್ಯವಿಲ್ಲ.

Advertisement

ಈ ಬಗ್ಗೆ ಈಗಾಗಲೇ ಬ್ಯಾಂಕ್‌ಗಳು ಬಳಕೆದಾರರ ಮೊಬೈಲ್‌ಗೆ ಸಂದೇಶ ಕಳುಹಿಸಲು ಆರಂಭಿಸಿವೆ. ಕೆಲವು ಬಳಕೆದಾರರು ಎಟಿಎಂ ಬಳಸುವ ವೇಳೆ ತೊಂದರೆ ಉಂಟಾದ ಹಿನ್ನೆಲೆಯಲ್ಲಿ ಬ್ಯಾಂಕಿಗೆ ತೆರಳಿ ವಿಚಾರಿಸಿದ ಸಂದರ್ಭ ಮಾಹಿತಿ ದೊರೆತಿದೆ. 

ಇಎಂವಿ ಚಿಪ್‌
ಇದು ಸಿಮ್‌ ಅಳತೆಯ ಚಿಪ್‌, ಬ್ಯಾಂಕ್‌ಗಳು ಈಚೆಗೆ ನೀಡುತ್ತಿರುವ ಎಟಿಎಂ ಕಾರ್ಡ್‌ಗಳಲ್ಲಿ ಇರುತ್ತದೆ. ಈ ಹಿಂದೆ ಬಳಕೆಯಾಗುತ್ತಿದ್ದ ಮ್ಯಾಗ್ನೆಟಿಕ್‌ ಸ್ಟ್ರೈಪ್‌ ಕಾರ್ಡ್‌ಗಿಂತ ಈ ಕಾರ್ಡ್‌ ಹೆಚ್ಚು ರಕ್ಷಣೆ ನೀಡುತ್ತದೆ ಎನ್ನುವ ಕಾರಣಕ್ಕೆ ಈ ಬದಲಾವಣೆ ತರಲಾಗಿದೆ. ಆನ್‌ಲೈನ್‌ ಮೂಲಕ ಖಾತೆಯಿಂದ ಹಣ ದೋಚುವ ವಂಚಕರ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಆರ್‌ಬಿಐ ಎಲ್ಲ ಬ್ಯಾಂಕ್‌ಗಳಿಗೆ ಈ ಮಾದರಿಯ ಡೆಬಿಟ್‌ ಕಾರ್ಡ್‌ ನೀಡುವಂತೆ ಸೂಚಿಸಿತ್ತು. ಇತ್ತೀಚೆಗಿನ ಸ್ವಲ್ಪ ಸಮಯದಿಂದ ಎಲ್ಲ ಬ್ಯಾಂಕ್‌ಗಳು ಇಎಂವಿ ಚಿಪ್‌ ಇರುವ ಎಟಿಎಂ ಕಾರ್ಡ್‌ಗಳನ್ನೇ ನೀಡುತ್ತಿವೆ. ಹಳೆ ಮಾದರಿಯ ಕಾರ್ಡ್‌ ಬದಲಾವಣೆಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ.

ಹಳೆಯ ಎಟಿಎಂ ಕಾರ್ಡ್‌
ಹಳೆಯ ಎಟಿಎಂ ಕಾರ್ಡ್‌ನ ಮ್ಯಾಗ್ನೆಟಿಕ್‌ ಸ್ಟ್ರೈಪ್‌ನಲ್ಲಿ ಎನ್‌ಕ್ರಿಪ್ಟ್ ಆಗಿರುವ ಡೇಟಾ ಕದಿಯಲು ಸಾಧ್ಯವಿದೆ. ಗ್ರಾಹಕರು ಕಾರ್ಡ್‌ ಕಳೆದುಕೊಂಡರೆ ಅಥವಾ ಕಳವಾದರೆ ಅದನ್ನು ಬಳಸಿ ಖಾತೆಯಿಂದ ಹಣ ಲಪಟಾಯಿಸಬಹುದು. ಹೊಸ ಚಿಪ್‌ ಆಧಾರಿತ ಕಾರ್ಡುಗಳು ಗ್ರಾಹಕರನ್ನು ಎಲ್ಲ ಬಗೆಯ ವಂಚನೆಗಳಿಂದ ರಕ್ಷಿಸಬಲ್ಲವು, ಎಟಿಎಂ ಯಂತ್ರಗಳಿಗೆ ವಂಚಕರು ಸ್ಕಿಮ್ಮಿಂಗ್‌ ಉಪಕರಣ ಇರಿಸಿ ಕಳವು ಮಾಡುವುದನ್ನು ತಡೆಯಲು ಇವು ಸಮರ್ಥ ಎನ್ನಲಾಗಿದೆ.

ನೇರ ಬ್ಯಾಂಕಿಗೆ ತೆರಳಿ
ಗ್ರಾಹಕರು ನೇರವಾಗಿ ಬ್ಯಾಂಕ್‌ ಖಾತೆಗೆ ತೆರಳಿ ಇಎಂವಿ ಚಿಪ್‌ ಇರುವ ಎಟಿಎಂಗಾಗಿ ಅರ್ಜಿ ಸಲ್ಲಿಸಬೇಕು. ಈ ಸೇವೆಗೆ ಶುಲ್ಕ ಇಲ್ಲ. ಇಎಂವಿ ಚಿಪ್‌ ಕಾರ್ಡ್‌ ಮೂಲಕ ನಡೆದ ವಹಿವಾಟಿನ ಪರಿಶೀಲನೆಗೆ ವಿಶೇಷ ವಹಿವಾಟು ಕೋಡ್‌ ಇರುತ್ತದೆ. ಇದು ಬಳಕೆದಾರನ ವೆರಿಫಿಕೇಶನ್‌ ನಡೆಸುತ್ತದೆ ಎನ್ನುತ್ತವೆ ಬ್ಯಾಂಕ್‌ ಮೂಲಗಳು.

Advertisement

ಇದರ ಜತೆಗೆ ಸಿಟಿಎಸ್‌ ಅಲ್ಲದ ಚೆಕ್‌ಗಳೂ ಮುಂದಿನ ದಿನಗಳಲ್ಲಿ ಮಾನ್ಯತೆ ಕಳೆದುಕೊಳ್ಳಲಿವೆ. ಸ್ಟೇಟ್‌ಬ್ಯಾಂಕ್‌ ಆಫ್ ಇಂಡಿಯಾ ಡಿ.12ರಿಂದಲೇ ಸಿಟಿಎಸ್‌ಯೇತರ ಚೆಕ್‌ ಬಳಕೆಯನ್ನು ಸ್ಥಗಿತಗೊಳಿಸಲಿದ್ದರೆ, ಇನ್ನುಳಿದ ಬ್ಯಾಂಕ್‌ಗಳು ಜ.1ರಿಂದ ಸಿಟಿಎಸ್‌ ಸಹಿತ ಚೆಕ್‌ ಬಳಕೆ ಕಡ್ಡಾಯಗೊಳಿಸಲಿವೆ. ಸಿಟಿಎಸ್‌ ಎಂದರೆ ಚೆಕ್‌ ಟ್ರಂಕೇಶನ್‌ ಸಿಸ್ಟಮ್‌. 

ಇಎಂವಿ ಚಿಪ್‌ ಇರುವ ಎಟಿಎಂ ಪಡೆದುಕೊಳ್ಳಲು ಗ್ರಾಹಕರಿಗೆ ಸಂದೇಶ ಬಂದಲ್ಲಿ ಖಾತೆ ಹೊಂದಿರುವ ಬ್ಯಾಂಕ್‌ ಸಂಪರ್ಕಿಸಬೇಕು. ಅಲ್ಲಿ ಹೊಸ ಕಾರ್ಡ್‌ ನೀಡುವ ಪ್ರಕ್ರಿಯೆ ನಡೆಯುತ್ತದೆ. ಈಗಾಗಲೇ ಹಲವಾರು ಮಂದಿ ಪಡೆದುಕೊಂಡಿದ್ದಾರೆ.
ರವೀಂದ್ರ ಕುಮಾರ್‌,  ಎಸ್‌ಬಿಐ ಶಾಖಾಧಿಕಾರಿ, ಬಿ.ಸಿ.ರೋಡ್‌

ಹಣ ತೆಗೆಯಲು ಎಟಿಎಂಗೆ ಹೋಗಿದ್ದೆ. ಕಾರ್ಡ್‌ ಡೆಡ್‌ ಎಂಬ ಸಂದೇಶ ಬಂತು. ತತ್‌ಕ್ಷಣ ಬ್ಯಾಂಕಿಗೆ ಹೋಗಿ ವಿಚಾರಿಸಿದೆ. ಆಗ ಹಳೆಯ ಕಾರ್ಡ್‌ ಬದಲಾಯಿಸಿ ಇಎಂವಿ ಚಿಪ್‌ ಇರುವ ಎಟಿಎಂ ಬಳಸಬೇಕು ಎಂಬ ಮಾಹಿತಿ ಸಿಕ್ಕಿತ್ತು.
ಸಂತೋಷ್‌, ಎಟಿಎಂ ಬಳಕೆದಾರ, ಸುಳ್ಯ

 ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next