Advertisement

ಮಾಡಬೂಳ ಮೃಗಾಲಯದಲ್ಲಿಯೇ ಮತ್ಸ್ಯಾಲಯ ಅಭಿವೃದ್ಧಿ

06:05 AM Mar 03, 2019 | |

ಕಲಬುರಗಿ: ನಗರದ ಸಾರ್ವಜನಿಕ ಉದ್ಯಾನವನದಲ್ಲಿರುವ ಕಿರು ಮೃಗಾಲಯವನ್ನು ಉದ್ದೇಶಿತ ಮಾಡಬೂಳ ಮೃಗಾಲಯಕ್ಕೆ ಸ್ಥಳಾಂತರಿಸಲು ನಿರ್ಧಾರ ಕೈಗೊಂಡಿರುವ ಹಿನ್ನೆಲೆಯಲ್ಲಿಯೆ, ಮಾಡಬೂಳದಲ್ಲಿಯೆ ಮತ್ಸ್ಯಾಲಯವನ್ನು ಅಭಿವೃದ್ಧಿಪಡಿಸಲು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆ ನಿರ್ಧಾರ ಕೈಗೊಂಡಿತು.

Advertisement

ಪ್ರಸ್ತುತ ನಗರದಲ್ಲಿರುವ ಕಿರು ಮೃಗಾಲಯವನ್ನು ಮಾಡಬೂಳಕ್ಕೆ ವರ್ಗಾಯಿಸಲಾಗುತ್ತಿದ್ದು, ಅಲ್ಲಿ 43 ಎಕರೆ ಪ್ರದೇಶದಲ್ಲಿ ಹೊಸದಾಗಿ ಕಿರು ಮೃಗಾಲಯ ಸ್ಥಾಪಿಸಲಾಗುತ್ತಿದೆ. ಹೀಗಾಗಿ ಅಲ್ಲಿಯೆ ಮತ್ಸ್ಯಾಲಯ ಅಭಿವೃದ್ಧಿಪಡಿಸುವುದು ಸೂಕ್ತವಾಗಿದೆ. ಇದಕ್ಕಾಗಿ ಅರಣ್ಯ ಇಲಾಖೆಯು ಮತ್ಸ್ಯಾಲಯಕ್ಕೆ ಅಗತ್ಯವಾದ ಕಟ್ಟಡ ನಿರ್ಮಿಸಿಕೊಡಬೇಕು. 

ಕಟ್ಟಡ ನಿರ್ಮಾಣದ ನಂತರ ಮತ್ಸ್ಯಾಲಯ ಅಭಿವೃದ್ಧಿಗೆಂದು ಪ್ರವಾಸೋದ್ಯಮ ಇಲಾಖೆಯಿಂದ ಜಿಲ್ಲೆಗೆ ಮಂಜೂರು ಮಾಡಿರುವ 25 ಲಕ್ಷ ರೂ. ಅನುದಾನವನ್ನು ಮತ್ಸ್ಯಾಲಯದ ಆಂತರಿಕ ಕೆಲಸ ಕಾರ್ಯಗಳಿಗೆ ಬಳಸಲಾಗುವುದು ಎಂದರು.

ಲೊಕೋಪಯೋಗಿ ಇಲಾಖೆಯಿಂದ ಶರಣಬಸವೇಶ್ವರ ಅಪ್ಪನ ಕೆರೆಯಲ್ಲಿ 185.66 ಲಕ್ಷ ರೂ.ಗಳ ಎಚ್‌.ಆರ್‌.ಡಿ.ಬಿ.ಅನುದಾನದಲ್ಲಿ ವಾಕಿಂಗ್‌ ಟ್ರ್ಯಾಕ್‌ ಮತ್ತು ಸೈಕಲ್‌ ಟ್ರ್ಯಾಕ್‌ ಅಭಿವೃದ್ಧಿ ಪಡಿಸಲು ಹಾಗೂ ಪ್ರವಾಸೋದ್ಯಮ ಇಲಾಖೆಯ 2017-18 ಹಾಗೂ 2018-19ನೇ ಸಾಲಿನ ರಸ್ತೆ, ಯಾತ್ರಿ ನಿವಾಸ, ಪ್ರವಾಸಿ ಮೂಲಸೌಲಭ್ಯಗಳಿಗಾಗಿ ಕ್ರಮವಾಗಿ 53 ಮತ್ತು 8 ಕಾಮಗಾರಿಗಳನ್ನು ಜಿಲ್ಲೆಯಲ್ಲಿ ಕೈಗೊಳ್ಳಲು ಸಭೆ ಒಪ್ಪಿಗೆ ಸೂಚಿಸಿತು.

ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಹೆಚ್ಚಿನ ರೀತಿಯಲ್ಲಿ ಪ್ರಚಾರ ಒದಗಿಸಲು ಜಿಲ್ಲೆಯ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಗರಕ್ಕೆ ಹೊಂದಿಕೊಂಡಂತೆ ಹೆದ್ದಾರಿ ಫಲಕಗಳ ಮೇಲೆ ಜಿಲ್ಲೆಯ ಪ್ರವಾಸಿ ಸ್ಥಾನಗಳ ದರ್ಶನ, ಪ್ರವಾಸಿ ಸ್ಥಾನಗಳ ಬಗ್ಗೆ ಸಮಗ್ರವಾಗಿ ಕಿರುಹೊತ್ತಿಗೆ ಹೊರತರಲು ಉದ್ದೇಶಿಸಿದ್ದು, ಮಾಹಿತಿ ಸಂಗ್ರಹಣೆಗಾಗಿ ತಜ್ಞರ ಸಮಿತಿ ರಚಿಸಲು ಸಹ ಸಭೆ ಒಮ್ಮತದ ನಿರ್ಧಾರ ಕೈಗೊಂಡಿತು.

Advertisement

ಹೋಟೆಲ್‌ ಉದ್ಯಮಕ್ಕು ಅನುಮೋದನೆ: ಜಿಲ್ಲೆಯ ಪ್ರವಾಸಿ ತಾಣಗಳ ಹತ್ತಿರದಲ್ಲಿ ಪ್ರವಾಸಿಗರಿಗೆ ವಸತಿಗಾಗಿ ನೂತನ ಹೋಟೆಲ್‌ ಮತ್ತು ಬೋರ್ಡಿಂಗ್‌ ಸ್ಥಾಪಿಸುವ ಉದ್ದಿಮೆದಾರರಿಗೆ ಪ್ರವಾಸೋದ್ಯಮ ಇಲಾಖೆಯಿಂದ ಆರ್ಥಿಕ ಸಹಾಯಧನ ನೀಡಲಾಗುತ್ತಿದೆ. ಇದಕ್ಕಾಗಿ ನಗರದ ಉಪ್ಪಿನ ತೋಟ ಹಾಗೂ ತಾಲೂಕಿನ ಕಪನೂರ, ಉಪಳಾಂವ ಮತ್ತು ಕೆರೆಭೋಸಗಾದಲ್ಲಿ, ಚಿಂಚೋಳಿ ತಾಲೂಕಿನ ಕೋಡ್ಲಿ ಹಾಗೂ ಜೇವರ್ಗಿ ತಾಲೂಕಿನ ಇಜೇರಿ ಗ್ರಾಮದಲ್ಲಿ ಹೋಟೆಲ್‌ಗ‌ಳನ್ನು ಸ್ಥಾಪಿಸಲು ಉದ್ಯಮಿಗಳು ಮುಂದೆ ಬಂದಿದ್ದು, ಅವರೆಲ್ಲರು ಪ್ರವಾಸೋದ್ಯಮ ನೀತಿಯಡಿ ಅರ್ಹರಿರುವುದರಿಂದ ಅವರ ಪ್ರಸ್ತಾವನೆಗಳಿಗೆ ಸಭೆ ಒಪ್ಪಿಗೆ ಸೂಚಿಸಿತು. ಅಲ್ಲದೆ ಈ ಹಿಂದೆ ಅನುಮೋದಿಸಿದ ಎರಡು ಹೋಟೆಲ್‌ ಕಾಮಗಾರಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಆರ್ಥಿಕ ಸಹಾಯಧನ ನೀಡಲು ಶಿಫಾರಸ್ಸಿಗೂ ಸಭೆ ಅನುಮೋದನೆ ನೀಡಿತು.

2015-16ನೇ ಸಾಲಿನ ಪ್ರವಾಸಿ ಟ್ಯಾಕ್ಸಿ ಯೋಜನೆಯಡಿ ಹಿಂದುಳಿದ, ಅಲ್ಪಸಂಖ್ಯಾತ ವರ್ಗಕ್ಕೆ ಮೀಸಲಿರಿಸಿದ 88ರ ಗುರಿಯಲ್ಲಿ 22, ಪರಿಶಿಷ್ಠ ಜಾತಿ ವರ್ಗಕ್ಕೆ ನಿಗದಿಪಡಿಸಿದ 36ರಲ್ಲಿ 12 ಮತ್ತು ಪರಿಶಿಷ್ಠ ಪಂಗಡ ಮಂಜೂರಾಗಿದ್ದ 12ರಲ್ಲಿ 07 ಪ್ರವಾಸಿ ಟ್ಯಾಕ್ಸಿಗಳು ಕಾರಣಾಂತರದಿಂದ ಮಂಜೂರಾಗದೆ ಬಾಕಿ ಉಳಿದಿದ್ದು, ಈ ಸಾಲಿನಲ್ಲಿ ಯಾವುದೇ ಅರ್ಹ ಫಲಾನುಭವಿಗಳು ಲಭ್ಯವಿಲ್ಲದ ಕಾರಣ ಮುಂದಿನ ಸಾಲಿನಲ್ಲಿ ಅರ್ಹತೆ ಹೊಂದಿ ವೇಟಿಂಗ್‌ ಲಿಸ್ಟ್‌ನಲ್ಲಿರುವ ಅರ್ಹ ಅಭ್ಯರ್ಥಿಗಳಿಗೆ ಪ್ರವಾಸಿ ಟ್ಯಾಕ್ಸಿ ಮಂಜೂರು ಮಾಡಲು ಸಭೆ ಅನುಮತಿ ನೀಡಿತು. 

ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ರಫಿಕ್‌ ಲಾಡಜಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಚಪ್ಪ, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಮಹೆಬೂಬ ಪಾಶಾ, ಡಾ| ಬಿ.ಆರ್‌. ಅಂಬೇಡ್ಕರ ಅಭಿವೃದ್ಧಿ ನಿಗಮ, ಸಮಾಜ ಕಲ್ಯಾಣ ಇಲಾಖೆ, ಇನ್ನಿತರ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next