ಬೆಂಗಳೂರು: ಎಟಿಎಂ ಕಾರ್ಡ್ ನಿಮ್ಮ ಬಳಿಯೇ ಇದ್ದರೂ, ಖಾತೆಯಲ್ಲಿರುವ ಹಣ ಮಂಗಮಾಯವಾಗಿರುತ್ತದೆ. ಈಗಾಗಲೇ ಬೆಂಗಳೂರಿನ ಪ್ರತಿಷ್ಠಿತ ಬ್ಯಾಂಕುಗಳ ಎಟಿಎಂನಿಂದ ಹಣ ಎಗರಿಸಿರುವ ಬಗ್ಗೆ ದೂರು ದಾಖಲಾಗಿದೆ. ಎಟಿಎಂಗೆ ಸ್ಕಿಮ್ಮರ್ ಮಷೀನ್ ಅಳವಡಿಸುವ ಮೂಲಕ ಹಣ ಲೂಟಿ ಮಾಡುತ್ತಿದ್ದ ಗ್ಯಾಂಗ್ ಸಿಐಡಿ ಬಲೆಗೆ ಬಿದ್ದಿದೆ.
ಏನಿದು ಸ್ಕಿಮ್ಮರ್ ಮಷೀನ್, ಎಟಿಎಂನಿಂದ ಹಣ ಹೇಗೆ ಲಪಟಾಯಿಸುತ್ತಿದ್ದರು ಗೊತ್ತಾ?
ಸಿಲಿಕಾನ್ ಸಿಟಿಯ ವಿಮಾನ ನಿಲ್ದಾಣದಲ್ಲಿರುವ ಕೋಟಕ್ ಮಹೀಂದ್ರಾ ಬ್ಯಾಂಕ್ ಎಟಿಎಂ, ಬ್ರಿಗೇಡ್ ರಸ್ತೆಯಲ್ಲಿರುವ ಕೋಟಕ್ ಮಹೀಂದ್ರಾ ಬ್ಯಾಂಕ್, ಎಂಜಿ ರಸ್ತೆಯಲ್ಲಿನ ಕೆನರಾ ಬ್ಯಾಂಕ್, ಮೆಟ್ರೋ ನಿಲ್ದಾಣದಲ್ಲಿನ ಕೋಟಕ್ ಮಹೀಂದ್ರಾ ಬ್ಯಾಂಕ್ ಎಟಿಎಂನಲ್ಲಿನ ಹಣ ಮಂಗಮಾಯವಾಗುತ್ತಿತ್ತು. ಕೂಡಲೇ ಎಚ್ಚೆತ್ತ ಕೋಟಕ್ ಮಹೀಂದ್ರಾ ಬ್ಯಾಂಕ್ ಅಧಿಕಾರಿಗಳು ದೂರು ದಾಖಲಿಸಿದ್ದರು. ಅದರಂತೆ ಸಿಐಡಿ ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದರು.
ವಿದೇಶಿ ಕಳ್ಳರು ಬಲೆಗೆ:
ಎಟಿಎಂನಲ್ಲಿ ಸ್ಕಿಮ್ಮರ್ ಅಳವಡಿಕೆ ಮಾಡಿ ಹಣ ಲಪಟಾಯಿಸುತ್ತಿದ್ದ ರೊಮೇನಿಯಾ, ಹಂಗೇರಿಯಾ ಮೂಲದ ಇಬ್ಬರು ಖದೀಮರನ್ನು ಸಿಐಡಿ ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದಾಗ ಸ್ಕಿಮ್ಮರ್ ಕರಾಮತ್ತು ಬೆಳಕಿಗೆ ಬಂದಿತ್ತು. ಸ್ಯಾಬಿಯನ್ ಕ್ರಿಶ್ಚಿಯನ್ ಮತ್ತು ಮಾರೆ ಜಾನೋಸ್ ಬಂಧಿತ ಆರೋಪಿಗಳಾಗಿದ್ದಾರೆ.
ಏನಿದು ಸ್ಕಿಮ್ಮರ್:
ಸ್ಕಿಮ್ಮರ್ ಮಷೀನ್ ಎಂದರೆ ಎಟಿಎಂ ಡಾಟಾ ಸಂಗ್ರಹಿಸುವುದು. ಚಿಕ್ಕದಾದ ಸ್ಕಿಮ್ಮರ್ ಮಷೀನ್ ಅನ್ನು ಈ ತಂಡ ಬೆಳಗಿನ ಜಾವ ಯಾರಿಗೂ ತಿಳಿಯದ ಹಾಗೆ ಎಟಿಎಂಗೆ ಬಂದು ಹಣ ಸ್ವೈಪ್ ಮಾಡುವ ಯಂತ್ರದ ಮೇಲ್ಭಾಗದಲ್ಲಿ ಸ್ಕಿಮ್ಮರ್ ಅನ್ನು ಅಳವಡಿಸಿ ಇಡುತ್ತಾರೆ. ಬಳಿಕ ಗ್ರಾಹಕರು ಹಣ ಡ್ರಾ ಮಾಡಲು ಹೋದಾಗ ನಾವು ಹಾಕುವ ಪಿನ್ ಸಂಖ್ಯೆ, ಎಟಿಎಂ ಕಾರ್ಡ್ ಸಂಖ್ಯೆ ಎಲ್ಲಾ ಡಾಟಾ ಸ್ಕಿಮ್ಮರ್ ಸಂಗ್ರಹಿಸುತ್ತದೆ.
ನಂತರ ಈ ತಂಡ ಬಂದು ಸ್ಕಿಮ್ಮರ್ ಮಷೀನ್ ತೆಗೆದುಕೊಂಡು ಹೋಗಿ ಅದನ್ನು ತಮ್ಮ ಜಾಲದವರಿಗೆ ರವಾನಿಸುತ್ತಾರೆ. ಬಳಿಕ ಖಾತೆಯಲ್ಲಿದ್ದ ಹಣವನ್ನು ದೋಚುವುದೇ ಅವರ ಕೆಲಸವಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.