Advertisement

ಎಟಿಎಂ ಭದ್ರತಾ ಸಿಬ್ಬಂದಿ ಕಗ್ಗೊಲೆ

12:14 PM Mar 25, 2019 | Team Udayavani |

ಬೆಂಗಳೂರು: ದುಷ್ಕರ್ಮಿಗಳು ಎಟಿಎಂ ಕೇಂದ್ರದ ಭದ್ರತಾ ಸಿಬ್ಬಂದಿಯೊಬ್ಬರನ್ನು ಕಲ್ಲು ಎತ್ತಿ ಹಾಕಿ ದಾರುಣವಾಗಿ ಹತ್ಯೆಗೈದಿರುವ ಘಟನೆ ಉತ್ತರಹಳ್ಳಿ ಮುಖ್ಯ ರಸ್ತೆಯಲ್ಲಿ ಶನಿವಾರ ರಾತ್ರಿ ನಡೆದಿದೆ. ಗೌಡಯ್ಯನ ಪಾಳ್ಯ ನಿವಾಸಿ ಲಿಂಗಪ್ಪ (62) ಕೊಲೆಯಾದ ಭದ್ರತಾ ಸಿಬ್ಬಂದಿ.

Advertisement

ಬಾಗಲಕೋಟೆ ಜಿಲ್ಲೆ ಮೂಲದ ಲಿಂಗಪ್ಪ ಹಲವು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದು, ಕುಟುಂಬ ಸಮೇತ ವಾಸವಾಗಿದ್ದಾರೆ. ನಾಲ್ಕೈದು ವರ್ಷಗಳಿಂದ ಉತ್ತರಹಳ್ಳಿ ಮುಖ್ಯರಸ್ತೆಯ ಕದಿರೇನಹಳ್ಳಿ ಪೆಟ್ರೋಲ್‌ ಬಂಕ್‌ ಪಕ್ಕದಲ್ಲಿರುವ ಕರ್ನಾಟಕ ಬ್ಯಾಂಕ್‌ ಎಟಿಎಂ ಕೇಂದ್ರದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು.

ನೆಲ ಮಹಡಿಯಲ್ಲಿ ಬ್ಯಾಂಕ್‌ ಇದ್ದು, ಪಕ್ಕದಲ್ಲೇ ಎಟಿಎಂ ಕೇಂದ್ರವಿದೆ. ಮೊದಲ ಮಹಡಿಯಲ್ಲಿ ಬ್ಯೂಟಿ ಪಾರ್ಲರ್‌ ಇದೆ. ಶನಿವಾರ ರಾತ್ರಿ ಗೌಡಯ್ಯ, ಮೊದಲ ಮಹಡಿಗೆ ಹೋಗುವ ಮೆಟ್ಟಿಲುಗಳ ಕೆಳಗೆ ನಿದ್ರೆಗೆ ಜಾರಿದ್ದರು. ಈ ವೇಳೆ ದುಷ್ಕರ್ಮಿಗಳು ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದರು.

ಭಾನುವಾರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಬ್ಯೂಟಿ ಪಾರ್ಲರ್‌ ಮಾಲೀಕರು ಗ್ರಾಹಕರ ಜತೆ ಪಾರ್ಲರ್‌ ಬಾಗಿಲು ತೆರೆಯಲು ಬಂದಾಗ ಗೌಡಯ್ಯ ಹತ್ಯೆಯಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ, ದುಷ್ಕರ್ಮಿಗಳು ಎಟಿಎಂ ಕೇಂದ್ರದಲ್ಲಿ ಕಳ್ಳತನಕ್ಕೆ ಯತ್ನಿಸಿಲ್ಲ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಸಾಧ್ಯತೆಯಿದೆ. ಈ ಕುರಿತಂತೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಸ್ನೇಹಿತರಿಂದಲೇ ಇರಿದು ಕೊಲೆ: ಮತ್ತೂಂದು ಪ್ರಕರಣದಲ್ಲಿ, ಮೊಬೈಲ್‌ ಶೋರೂಂ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನನ್ನು ಸ್ನೇಹಿತರೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಎಚ್‌ಎಸ್‌ಆರ್‌ ಲೇಔಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಅಗರ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

Advertisement

ಮಾರತಹಳ್ಳಿ ನಿವಾಸಿ ಪೃಥ್ವಿ (28) ಕೊಲೆಯಾದ ಯುವಕ. ಮಾ.21ರಂದು ತಡರಾತ್ರಿ ಅಗರ ಗ್ರಾಮದ ವೆಂಕಟರಮಣ ಸ್ವಾಮಿ ದೇವಾಲಯದ ಜಾತ್ರೆಗೆ ಸಂಬಂಧಿ ಭರತ್‌ ಜತೆ ಪೃಥ್ವಿ ಹೋಗುತ್ತಿದ್ದ. ಮಾರ್ಗ ಮಧ್ಯೆ ಇಬ್ಬರೂ ಬಾರ್‌ ಒಂದರಲ್ಲಿ ಮದ್ಯ ಸೇವಿಸಿದ್ದಾರೆ. ನಂತರ ಅಲ್ಲೇ ಇದ್ದ ಸ್ನೇಹಿತರ ಜತೆ ಮಾತನಾಡುತ್ತಿದ್ದರು.

ಈ ವೇಳೆ ಕ್ಷುಲ್ಲಕ ವಿಚಾರಕ್ಕೆ ಪೃಥ್ವಿ ಹಾಗೂ ಸ್ನೇಹಿತರ ನಡುವೆ ಮಾತಿನ ಚಕಮಕಿ ಉಂಟಾಗಿದ್ದು, ಆ ಸಂದರ್ಭದಲ್ಲಿ ಪೃಥ್ವಿ, ಸ್ನೇಹಿತನೊಬ್ಬನ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ಕೋಪಗೊಂಡ ಆರೋಪಿ, ಚಾಕುವಿನಿಂದ ಪೃಥ್ವಿಯ ಎದೆ ಮತ್ತು ಹೊಟ್ಟೆಗೆ ಇರಿದು ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದರು. ಪ್ರಕರಣ ಎಚ್‌ಎಸ್‌ಆರ್‌ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

ಪಾದಚಾರಿಗೆ ಚಾಕು ಇರಿತ: ಬೈಕ್‌ ತಗುಲಿದನ್ನು ಪ್ರಶ್ನಿಸಿದಕ್ಕೆ ಪಾದಚಾರಿಯೊಬ್ಬರ ಮೇಲೆ ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ.

ಕೂಡ್ಲು ನಿವಾಸಿ ಮಂಜುನಾಥ್‌ (32) ಚಾಕು ಇರಿತಕ್ಕೊಳಗಾದವರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮಂಜುನಾಥ್‌, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಹೇಳಿದರು. ಶನಿವಾರ ತಡರಾತ್ರಿ 12 ಗಂಟೆ ಸುಮಾರಿಗೆ ಮಂಜುನಾಥ್‌, ಪರಪ್ಪನ ಅಗ್ರಹಾರ ಸಮೀಪದ ಹೊಸರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು.

ಈ ವೇಳೆ ಇಬ್ಬರು ಕುಳಿತು ಬರುತ್ತಿದ್ದ ಬೈಕ್‌ ಒಂದು ಮಂಜುನಾಥ್‌ಗೆ ತಗುಲಿದೆ. ಆಕ್ರೋಶಗೊಂಡ ಮಂಜುನಾಥ್‌ ಬೈಕ್‌ ಸವಾರರನ್ನು ಪ್ರಶ್ನಿಸಿದ್ದಾರೆ. ಇಷ್ಟಕ್ಕೇ ಕೋಪಗೊಂಡ ಆರೋಪಿಗಳು, ಮಂಜುನಾಥ್‌ನ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.

ಕೂಡಲೇ ಸ್ಥಳೀಯರು ಮಂಜುನಾಥ್‌ನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ಹೇಳಿದರು. ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next