Advertisement

ಆರೋಪಿಗಳ ಸೆರೆ, 6.30 ಕೋ.ರೂ. ವಶ 

10:19 AM May 17, 2017 | Karthik A |

ಸೋಮವಾರಪೇಟೆ/ಮಂಗಳೂರು: ಮಂಗಳೂರಿನ ಯೆಯ್ಯಾಡಿಯಲ್ಲಿರುವ ಆ್ಯಕ್ಸಿಸ್‌ ಬ್ಯಾಂಕಿನ ಕರೆನ್ಸಿ ಚೆಸ್ಟ್‌ನಿಂದ ಬೆಂಗಳೂರಿನ ಕೋರಮಂಗಲ ಶಾಖೆಗೆ ವಾಹನದಲ್ಲಿ ಸಾಗಿಸುತ್ತಿದ್ದ 7.5 ಕೋ.ರೂ. ಹಣಗಳೊಂದಿಗೆ ಆರೋಪಿಗಳು ಪರಾರಿಯಾದ ಪ್ರಕರಣ ಸಂಬಂಧ ದ.ಕ. ಜಿಲ್ಲಾ ವಿಶೇಷ ಪೊಲೀಸ್‌ ತಂಡ, ಕೊಡಗು ಜಿಲ್ಲಾ ಅಪರಾಧ ಪತ್ತೆದಳ ಸೋಮವಾರಪೇಟೆ ಸಮೀಪದ ಕುಂಬಾರಗಡಿಗೆಯಲ್ಲಿ ಮಂಗಳವಾರ ಮೂವರು ಆರೋಪಿಗಳನ್ನು ಬಂಧಿಸಿದ್ದು, 6.30 ಕೋ.ರೂ. ನಗದು ವಶಪಡಿಸಿಕೊಂಡಿದೆ.

Advertisement

ವಾಹನ ಚಾಲಕ ಚಿತ್ರದುರ್ಗದ ಕರಿಬಸಪ್ಪ (24), ಕೊಡಗು ಜಿಲ್ಲೆಯ ಸೋಮವಾರಪೇಟೆ ಸಮೀಪದ ಕುಂಬಾರಗಡಿಗೆ ಗ್ರಾಮಕ್ಕೆ ಸೇರಿದವರಾದ ಗನ್‌ಮ್ಯಾನ್‌ ಪೂವಪ್ಪ (38), ಕರಿಯಪ್ಪ ಅಲಿಯಾಸ್‌ ಕಾಶಿ (46) ಬಂಧಿತ ಆರೋಪಿಗಳು. ಸಾಗಿಸುತ್ತಿದ್ದ ಹಣದ ಕಸ್ಟೋಡಿಯನ್‌ ಆಗಿದ್ದ ಪರಶುರಾಮ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಮಂಗಳೂರು ಪೊಲೀಸ್‌ ಆಯುಕ್ತ ಎಂ. ಚಂದ್ರಶೇಖರ್‌ ಅವರು ಮಂಗಳವಾರ ತಿಳಿಸಿದರು. ಎಸ್‌ಐಎಸ್‌ ಪ್ರೊಸೆಕ್ಯುರ್‌ ಹೋಲ್ಡಿಂಗ್ಸ್‌ ಕಂಪೆನಿಯ ಮೂಲಕ ಮೇ 11ರಂದು ಯೆಯ್ಯಾಡಿ ಆ್ಯಕ್ಸಿಸ್‌ ಬ್ಯಾಂಕಿನಿಂದ ಕೋರಮಂಗಲಕ್ಕೆ ಬೊಲೆರೋ ವಾಹನದಲ್ಲಿ ಚಾಲಕ ಕರಿಬಸಪ್ಪ, ಕಸ್ಟೋಡಿಯನ್‌ ಪರಶುರಾಮ ಹಾಗೂ ಗನ್‌ಮ್ಯಾನ್‌ಗಳಾದ ಪೂವಣ್ಣ ಮತ್ತು ಬಸಪ್ಪ ಅವರು 7.5 ಕೋ.ರೂ. ಹಣವನ್ನು ತೆಗೆದುಧಿಕೊಂಡು ಹೋಗಿದ್ದರು. ಬಳಿಕ ವಾಹನ ಕೋರಮಂಗಲಕ್ಕೆ ತಲುಪದೆ ಮಾರ್ಗಮಧ್ಯದಲ್ಲಿ ನಾಪತ್ತೆಯಾಗಿತ್ತು. ಈ ಬಗ್ಗೆ ಕಂಪೆನಿಯ ಮೆನೇಜರ್‌ ನೀಡಿದ ದೂರಿನಂತೆ ಕಂಕನಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಕೊಂಡು ಆರೋಪಿಗಳ ಪತ್ತೆಗೆ 13 ಮಂದಿಯ ವಿಶೇಷ ತಂಡ ರಚಿಸಲಾಗಿತ್ತು ಎಂದವರು ತಿಳಿಸಿದರು.

ಸೋಮವಾರಪೇಟೆಯಲ್ಲಿದ್ದರು
ವಿಶೇಷ ಪೊಲೀಸ್‌ ತಂಡ ಚಿತ್ರದುರ್ಗ, ಬೆಂಗಳೂರು, ಮೈಸೂರು ಹಾಗೂ ಕೊಡಗಿನಲ್ಲಿ ಶೋಧಕಾರ್ಯ ನಡೆಸಿತ್ತು. ಈ ವೇಳೆ ಆರೋಪಿಗಳು ಸೋಮವಾರಪೇಟೆಯಲ್ಲಿ ಇರುವ ಬಗ್ಗೆ ಸುಳಿವು ಲಭ್ಯವಾಯಿತು. ಕೊಡಗು ಪೊಲೀಸ್‌ ಅಧೀಕ್ಷಕ ರಾಜೇಂದ್ರ ಪ್ರಸಾದ್‌ ಅವರ ಸಹಾಯ ಪಡೆದುಕೊಂಡು ಅಲ್ಲಿನ ಜಿಲ್ಲಾ ಅಪರಾಧ ಪತ್ತೆಧಿದಳದ ಸಹಕಾರದೊಂದಿಗೆ ಆರೋಪಿಗಳು ಅಡಗಿರುವ ತಾಣಕ್ಕೆ ದಾಳಿ ಮಾಡಿ ಬಂಧಿಸಲಾಯಿತು ಎಂದು ಪೊಲೀಸ್‌ ಆಯುಕ್ತರು ವಿವರಿಸಿದರು. 

ಪರಶುರಾಮನಿಗೆ ಬೆದರಿಕೆ ಹಾಕಿದ್ದರೆ?
ಪ್ರಕರಣದಲ್ಲಿ ಹಣದ ಕಸ್ಟೋಡಿಯನ್‌ ಆಗಿದ್ದ ಪರಶುರಾಮ ಅವರ ಪಾತ್ರದ ತನಿಖೆ ನಡೆಯುತ್ತಿದೆ. ಆರೋಪಿಗಳು ಪರಶುರಾಮನಿಗೆ ಬೆದರಿಕೆಯೊಡ್ಡಿ ಹಣದ ವ್ಯಾನನ್ನು ಕುಂಬಾರಗಡಿಗೆಗೆ ಕೊಂಡೊಯ್ದಿದ್ದರು. ಅಲ್ಲಿ ಅತನನ್ನು ಇರಿಸಲಾಗಿತ್ತು ಎಂಬ ಬಗ್ಗೆ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ವಿಚಾರಣೆ ನಡೆಸುತ್ತಿದ್ದು ಬಂಧಿಸಿಲ್ಲ. ತನಿಖೆಯಲ್ಲಿ ಈ ಬಗ್ಗೆ ಸ್ವಷ್ಟ ವಿವರ ಲಭ್ಯವಾಗಲಿದೆ ಎಂದು ಪೊಲೀಸ್‌ ಆಯುಕ್ತರು ತಿಳಿಸಿದರು. 

ಭೀಮಯ್ಯ ಸೂತ್ರಧಾರ
ಪ್ರಕರಣದ ಪ್ರಮುಖ ಆರೋಪಿ ಭೀಮಯ್ಯ ಇದರ ಸೂತ್ರಧಾರ. ಈತ ಪರಾರಿಯಾಗಿದ್ದಾನೆ. ಪರಾರಿಯಾದ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಪ್ರಕರಣದಲ್ಲಿ ಇನ್ನೂ ಹಲವಾರು ಮಂದಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸ್‌ ಆಯುಕ್ತರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿಗಳಾದ ಡಾ| ಸಂಜೀವ ಪಾಟೀಲ್‌, ಶಾಂತರಾಜು ಅವರು ಉಪಸ್ಥಿತರಿದ್ದರು. 

Advertisement

ಎಸಿಪಿ ಶ್ರುತಿ ನೇತೃತ್ವದಲ್ಲಿ ಮಂಗಳೂರಿನ ಸಿಸಿಆರ್‌ಬಿ ಘಟಕದ ಎಸಿಪಿ ವೆಲಂಟೈನ್‌ ಡಿ’ಸೋಜಾ, ಪೊಲೀಸ್‌ ಅಧಿಕಾರಿಗಳಾದ ರವೀಶ್‌ ನಾಯಕ್‌, ಮಹಮ್ಮದ್‌ ಶರೀಫ್‌, ಶಾಂತಾರಾಮ, ಕೆ.ಯು. ಬೆಳ್ಳಿಯಪ್ಪ, ರವಿನಾಯಕ್‌, ಶ್ಯಾಮಧಿಸುಂದರ್‌, ಸಿಎಚ್‌ಸಿಗಳಾದ ರಾಜೇಂದ್ರ ಪ್ರಸಾದ್‌, ಗಂಗಾಧರ, ದಯಾನಂದ, ಶೀನಪ್ಪ, ಚಂದ್ರಶೇಖರ, ಜಬ್ಟಾರ್‌, ರಿಜಿ, ಸಿಸಿಪಿ ಶಿವಪ್ರಸಾದ್‌, ನೂತನ್‌ ಕುಮಾರ್‌ ಹಾಗೂ ಕೊಡಗಿನ ಅಪರಾಧ ಪತ್ತೆದಳದ ಪೊಲೀಸ್‌ ನಿರೀಕ್ಷಕ ಅಬ್ದುಲ್‌ ಕರೀಂ, ಎಎಸ್‌ಐಗಳಾದ ತಂಬಯ್ಯ, ಹಮೀಮ್‌, ವೆಂಕಟೇಶ್‌, ಎಚ್‌.ಸಿ.ಗಳಾದ ವೆಂಕಟೇಶ, ಅನಿಲ್‌, ಮುಂತಾದವರು ಭಾಗವಹಿಸಿದ್ದರು.

ಕಾಡಿನಲ್ಲಿ ಅಡಗಿದ್ದರು
ಆರೋಪಿಗಳು ಸೋಮವಾರಪೇಟೆಯಿಂದ 20 ಕಿ.ಮೀ. ದೂರದ ಕುಂಬಾರಗಡಿಗೆಯ ಅರಣ್ಯ ಪ್ರದೇಶದಲ್ಲಿ ಅಡಗಿದ್ದರು. ಹಣವನ್ನು ಅಲ್ಲಿನ ಮನೆಯೊಂದರಲ್ಲಿ ಅಡಗಿಸಿಟ್ಟಿದ್ದರು. ಪ್ರಕರಣವನ್ನು ಭೇದಿಸಲು ಹೊರಟ ಪೊಲೀಸರಿಗೆ ಸ್ಥಳೀಯ ವಾಹನ ಚಾಲಕರೋರ್ವರ ದೂರವಾಣಿಯ ಮೂಲಕ ಆರೋಪಿಗಳನ್ನು ಸಂಪರ್ಕಿಸಿರುವ ಬಗ್ಗೆ ದೊರೆತ ಸುಳಿವಿನ ಮೇರೆಗೆ ಚಾಲಕನನ್ನು ವಿಚಾರಣೆಗೊಳಪಡಿಸಿದ ಸಂದರ್ಭ ಓರ್ವ ತನ್ನ ದೂರವಾಣಿಯನ್ನು ಉಪಯೋಗಿಸಿರುವ ಬಗ್ಗೆ ಮಾಹಿತಿ ನೀಡಿದ್ದ. ಆತನನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಆರೋಪಿಗಳು ಅಡಗಿರುವ ಸ್ಥಳದ ಬಗ್ಗೆ ಬಾಯಿ ಬಿಟ್ಟಿದ್ದು, ತತ್‌ಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳಿದ್ದ ಸ್ಥಳವನ್ನು ಸುತ್ತುವರಿದು ಅವರ‌ನ್ನು ಬಂಧಿಸುವಲ್ಲಿ ಯಶಸ್ವಿಯಾದರು.

ತನಿಖೆಯ ದಿಕ್ಕು ತಪ್ಪಿಸುವ ಯತ್ನ
ಪ್ರಕರಣ ನಡೆದ ದಿನದಂದೆ ಆರೋಪಿಗಳು ಹಣದ ವ್ಯಾನ್‌ ಸಹಿತ ಸೋಮವಾರಪೇಟೆ ತಾಲೂಕಿನ ಕುಂಬಾರಗಡಿಗೆ ಗ್ರಾಮಕ್ಕೆ ಬಂದು ಹಣವನ್ನು ಇಳಿಸಿ ತನಿಖೆಯ ದಿಕ್ಕು ತಪ್ಪಿಸಲು ಯೋಜನೆ ರೂಪಿಸಿ ವಾಹನವನ್ನು ಹುಣಸೂರು ಸಮೀಪದ ಕಲ್ಲಹಳ್ಳಿ ಗ್ರಾಮದ ಬಳಿ ಬಿಟ್ಟು ತೆರಳಿದ್ದಾರೆ. ಅನಂತರ ಕುಂಬಾರಗಡಿಗೆ ಗ್ರಾಮ ಸಮೀಪದ ಅರಣ್ಯ ಪ್ರದೇಶದಲ್ಲಿ ಹಣದೊಂದಿಗೆ ಅಡಗಿದ್ದರು. ಈ ಸಂದರ್ಭ ಆರೋಪಿಗಳಿಗೆ ಊಟ ಮತ್ತಿತರೆ ವಸ್ತುಗಳನ್ನು ನೀಡಿ ಸಹಕರಿಸಿದ ಹಲವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next