ಬೀದರ್ ; ಎಟಿಎಂ ಕೇಂದ್ರಗಳಲ್ಲಿ ಅಮಾಯಕ ಜನರನ್ನು ಮರಳು ಮಾಡಿ ಅವರ ಖಾತೆಯಿಂದ ಹಣ ದೋಚುತ್ತಿದ್ದ ನೆರೆಯ ಆಂದ್ರ ಪ್ರದೇಶದ ಆರೋಪಿತನನ್ನು ಸೋಮವಾರು ಸಿಇಎನ್ ಕ್ರೈಂ ಪೊಲೀಸರು ವಶಕ್ಕೆ ಪಡೆದು, ಆತನಿಂದ 1.18 ಲಕ್ಷ ರೂ. ನಗದು, ವಿವಿಧ ಬ್ಯಾಂಕಿನ 112 ಎಟಿಎಂ ಕಾರ್ಡ್ ಹಾಗೂ ಒಂದು ಬೈಕ್‌ನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಆಂದ್ರಪ್ರದೇಶದ ನರಸರಾವಪೇಟ್ ಪಟ್ಟಣದ ತುಮ್ಮಲ್ ಉದಯಕುಮಾರ ರಾಮಲಿಂಗಯ್ಯ (39) ಬಂಧಿತ ಆರೋಪಿ. ನಗರದ ಕೆಇಬಿ ಹತ್ತಿರದ ಎಸ್‌ಬಿಐ ಎಟಿಎಂ ಎದುರುಗಡೆ ಉದಯಕುಮಾರ ಅವರನ್ನು ಕ್ರೈಂ ಪೊಲೀಸ್ ಠಾಣೆಯ ನಿರೀಕ್ಷಕ ಬಸವರಾಜ ಫುಲಾರಿ ನೇತೃತ್ವದ ಸಿಬ್ಬಂದಿಗಳ ತಂಡ ದಸ್ತಗಿರಿ ಮಾಡಿ ವಿಚಾರಣೆ ನಡೆಸಿದೆ. ಈ ವೇಳೆ ಬೀದರನ ಒಟ್ಟು 4 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಒಟ್ಟು 1.81,122 ರೂ. ವಂಚಿಸಿದ್ದಾನೆ ಜತೆಗೆ ತೆಲಂಗಾಣದಲ್ಲಿ ಸಹ ಒಟ್ಟು 23 ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಬಾಯಿ ಬಿಟ್ಟಿದ್ದಾನೆ.
ಕಳೆದ ವರ್ಷಗಳಿಂದ ಜಿಲ್ಲೆಯ ಎಟಿಎಂ ಕೇಂದ್ರಗಳಲ್ಲಿ ಅಮಾಯಕರು ಹಣ ತೆಗೆಯಲು ಹೋದಾಗ ಅವರಿಗೆ ಸಹಾಯ ಮಾಡಿದಂತೆ ನಟಿಸಿ ಪಿನ್ ನಂಬರ್ ತಿಳಿದುಕೊಂಡು ಅವರ ಗಮನ ಬೇರೆಡೆಗೆ ಹರಿಸಿ ಎಟಿಎಂ ಕಾರ್ಡ್ ಬದಲಾಯಿಸುತ್ತಿದ್ದ. ನಂತರ ಸದರಿ ಎಟಿಎಂ ಕಾರ್ಡ್ ಹಾಗೂ ಪಿನ್ ನಂಬರ್ ಬಳಸಿ ಬ್ಯಾಂಕ್ ಖಾತೆಯಿಂದ ಹಣ ದೋಚಿ ವಂಚನೆ ಮಾಡುತ್ತಿದ್ದ.
ಇದನ್ನೂ ಓದಿ :ಮಹಾರಾಷ್ಟ್ರದಲ್ಲಿ ಕೋವಿಡ್ ಹೆಚ್ಚಳ : ಶಿರಡಿ ಸಾಯಿಬಾಬಾ ದೇವಸ್ಥಾನದ ಬಾಗಿಲು ಬಂದ್
ಪ್ರಕರಣವನ್ನು ಬೇಧಿಸುವಲ್ಲಿ ಪಿಎಸ್‌ಐ ಸುನೀತಾ, ಸಿಬ್ಬಂದಿಗಳಾದ ಅರುಣಕುಮಾರ, ಶಿವಕುಮಾರ, ಮಲ್ಲಿಕಾರ್ಜುನ, ಸಾದಕ್ ಅಲಿ, ರವಿ, ಹರಿಕಿಶನ್, ಭರತ, ದಶರಥ, ಸಿದ್ರಾಮೇಶ, ಪ್ರಶಾಂತ, ಸುನೀಲ ಮತ್ತು ಮಾಯಾ ಅವರು ಯಶಸ್ವಿಯಾಗಿದ್ದಾರೆ.
ಪೊಲೀಸ್ ತಂಡದ ಕರ್ತವ್ಯವನ್ನು ಮೆಚ್ಚಿರುವ ಎಸ್‌ಪಿ ನಾಗೇಶ ಡಿ.ಎಲ್ ಅವರು ಪ್ರಶಂಸನಾ ಪ್ರಮಾಣ ಪತ್ರ ನೀಡಿ ಅಭಿನಂದಿಸಿದ್ದಾರೆ.