ಮಂಗಳೂರು: ಯೆಯ್ಯಾಡಿಯಲ್ಲಿರುವ ಆ್ಯಕ್ಸಿಸ್ ಬ್ಯಾಂಕಿನ ಕರೆನ್ಸಿ ಚೆಸ್ಟ್‌ನಿಂದ ಬೆಂಗಳೂರಿನಲ್ಲಿರುವ ಬ್ಯಾಂಕಿನ ಕೋರಮಂಗಲ ಶಾಖೆಗೆ ಸಾಗಿಸುತ್ತಿದ್ದ 7.5 ಕೋಟಿ ರೂ. ನಗದು ಸಹಿತ ನಾಪತ್ತೆಯಾಗಿದ್ದ ನಾಲ್ವರನ್ನು ಪೊಲೀಸರು ಸೋಮವಾರ ಪೇಟೆಯ ಕುಂಬಾರಗಡಿಗೆ ಗ್ರಾಮದಲ್ಲಿ ಮಂಗಳವಾರ 6.70 ಕೋಟಿ ರೂಪಾಯಿ ನಗದು ಸಹಿತ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರು ಕರಿಬಸವ, ಪರಶುರಾಮ ,ಬಸಪ್ಪ,ಮತ್ತು ಪೂವಣ್ಣ ಎಂದು ತಿಳಿದು ಬಂದಿದೆ. ಪ್ರಮುಖ ಆರೋಪಿ ಭೀಮಯ್ಯ 80 ಕೋಟಿ ರೂಪಾಯಿ ಹಣದೊಂದಿಗೆ ಪರಾರಿಯಾಗಿದ್ದು ಆತನಿಗಾಗಿ ಬಲೆ ಬೀಸಿದ್ದಾರೆ.
ಎಸ್‌ಐಎಸ್ ಪ್ರೊಸೆಕ್ಯುರ್ ಹೋಲ್ಡಿಂಗ್ಸ್ ಕಂಪೆನಿ ವಾಹನದಲ್ಲಿದ್ದ ಚಾಲಕ ಕರಿಬಸವ, ಬೆಂಗಾವಲು ರಕ್ಷಕ ಪರಶುರಾಮ, ಗನ್ ಮ್ಯಾನ್‌ಗಳಾದ ಬಸಪ್ಪ ಮತ್ತು ಪೂವಣ್ಣ 7.5 ಕೋಟಿ ರೂ. ಹಣ ಸಹಿತ ವಾಹನದೊಂದಿಗೆ ಪರಾರಿಯಾಗಿದ್ದರು.
ಹಣ ಸಾಗಿಸುತ್ತಿದ್ದ ವಾಹನವು ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಅನಾಥವಾಗಿ ಪತ್ತೆಯಾಗಿತ್ತು. ಮೊಬೈಲ್ ಟವರ್ ಆಧರಿಸಿ ಪೊಲೀಸರು ಕಾರ್ಯಾಚರಣೆಗಿಳಿದಾಗ ನಿರ್ಜನ ಪ್ರದೇಶದಲ್ಲಿರುವ ನಿರ್ಮಾಣ ಹಂತದ ಮನೆಯೊಂದರಲ್ಲಿ ಅಡಗಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ನಿರ್ಮಾಣ ಹಂತದ ಮನೆಯ ವಾರಿಸುದಾರರು ಬೆಂಗಳೂರಿನಲ್ಲಿದ್ದರು ಎಂದು ತಿಳಿದು ಬಂದಿದೆ.
ಆಟೋ ಚಾಲಕನೊಬ್ಬನ ಮೊಬೈಲ್ ಪಡೆದು ಕರೆ ಮಾಡಿದ್ದರು. ಪೊಲೀಸರು ಕರೆಯ ಜಾಡು ಬೆನ್ನಟ್ಟಿ ಆರೋಪಿಗಳನ್ನು ನಗದು ಸಮೇತ ವಶಕ್ಕೆ ಪಡೆದು ಪ್ರಕರಣ ಭೇಧಿಸಿದ್ದಾರೆ.
ಆರೋಪಿಗಳಿಗಾಗಿ ವ್ಯಾಪಕ ಶೋಧ ನಡೆಸುತ್ತಿದ್ದ ಮಂಗಳೂರು ಎಸಿಪಿ ವ್ಯಾಲೆಂಟೇನ್ ಡಿಸೋಜಾ ನೇತೃತ್ವದ ಪೊಲೀಸರ ತಂಡ ಕೊಡಗು ಪೊಲೀಸರ ನೆರವಿನೊಂದಿಗೆ ಆರೋಪಿಗಳನ್ನು ಬಂಧಿಸಿ ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.