ಖರ್ತಾಂವ್ : ದಕ್ಷಿಣ ಆಫ್ರಿಕಾದ ದೇಶಗಳಲ್ಲಿ ಒಂದಾಗಿರುವ ಸೂಡಾನ್ ನ ರಾಜಧಾನಿ ಖರ್ತಾಂವ್ ಬಹ್ರಿ ಎಂಬ ಪ್ರದೇಶದಲ್ಲಿರುವ ಸಾಲುಮಿ ಸಿರಾಮಿಕ್ ಫ್ಯಾಕ್ಟರಿಯಲ್ಲಿ ಭೀಕರ ಎಲ್.ಪಿ.ಜಿ. ಸ್ಪೋಟ ಸಂಭವಿಸಿದೆ.
ಭೀಕರ ಸ್ಪೋಟದ ಬೆನ್ನಲ್ಲೇ ಕಾಣಿಸಿಕೊಂಡ ಭಾರೀ ಬೆಂಕಿಯ ಜ್ವಾಲೆಗೆ ಇದುವರೆಗೆ ಸುಮಾರು 23 ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇನ್ನೂಕಳವಳಕಾರಿ ವಿಷಯವೆಂದರೆ ಮೃತಪಟ್ಟವರಲ್ಲಿ ಸುಮಾರು 18 ಜನರು ಭಾರತೀಯರೆಂದು ತಿಳಿದುಬಂದಿದೆ. ಈ ದುರ್ಘಟನೆಯಲ್ಲಿ ಒಟ್ಟಾರೆಯಾಗಿ 130 ಜನರು ಗಾಯಗೊಂಡಿದ್ದಾರೆ.
ಸೂಡಾನ್ ನಲ್ಲಿರುವ ಭಾರತೀಯ ದೂತವಾಸ ಕಛೇರಿಯ ಮೂಲಗಳು ಈ ಸುದ್ದಿಯನ್ನು ಖಚಿತಪಡಿಸಿವೆ. ‘ಸದ್ಯಕ್ಕೆ ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ 18 ಜನ ಭಾರತೀಯರು ಈ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ. ಆದರೆ ಪ್ಯಾಕ್ಟರಿಯನ್ನು ವ್ಯಾಪಿಸಿಕೊಂಡಿರುವ ಬೆಂಕಿಯಲ್ಲಿ ಹಲವು ಕಾರ್ಮಿಕರು ಕಾಣೆಯಾಗಿರುವ ಕುರಿತಾಗಿಯೂ ಮಾಹಿತಿ ಲಭ್ಯವಾಗಿದ್ದು ಈ ದೇಹಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವುದರಿಂದ ಇವುಗಳ ಪತ್ತೆ ಕಷ್ಟ ಸಾಧ್ಯವಾಗಿದೆ’ ಎಂದು ಭಾರತೀಯ ದೂತವಾಸ ಕಛೇರಿ ಮೂಲಗಳು ತಿಳಿಸಿವೆ.
ಈ ದುರ್ಘಟನೆಯಲ್ಲಿ ಮೃತಪಟ್ಟಿರುವ, ಕಾಣೆಯಾಗಿರುವ ಮತ್ತು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಭಾರತೀಯ ಕಾರ್ಮಿಕರ ಸಂಪೂರ್ಣ ವಿವರಗಳನ್ನು ಭಾರತೀಯ ದೂತವಾಸ ಕಛೇರಿ ಇಂದು ಪ್ರಕಟಿಸಿದೆ. ಮಾಹಿತಿಗಳ ಪ್ರಕಾರ 7 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ರಕ್ಷಿಸಲ್ಪಟ್ಟ 34 ಭಾರತೀಯರನ್ನು ಫ್ಯಾಕ್ಟರಿಯ ವಸತಿಗೃಹದಲ್ಲಿ ಇರಿಸಲಾಗಿದೆ ಎಂಬ ಮಾಹಿತಿಯೂ ಇದೀಗ ಲಭ್ಯವಾಗಿದೆ.