Advertisement

ದಿಲ್ಲಿಯ ವಿವಿಧ ಮಸೀದಿಗಳಲ್ಲಿ ಇನ್ನೂ ಅಡಗಿದ್ದಾರೆ 800 ವಿದೇಶಿ ತಬ್ಲೀಘಿಗಳು

04:33 PM Apr 05, 2020 | Hari Prasad |

ಹೊಸದಿಲ್ಲಿ: ತಬ್ಲೀಘಿ  ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸುಮಾರು 800 ಮಂದಿ ವಿದೇಶಿಯರು ಹೊಸದಿಲ್ಲಿಯ ವಿವಿಧ ಮಸೀದಿಗಳಲ್ಲಿ ಅಡಗಿದ್ದಾರೆ. ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯದ ಮೂಲಗಳನ್ನು ಉಲ್ಲೇಖೀಸಿ ‘ದ ಹಿಂದು ಸ್ತಾನ್‌ ಟೈಮ್ಸ್‌’ ವರದಿ ಮಾಡಿದೆ. ನಿಜಾಮುದ್ದೀನ್‌ ಮಸೀದಿಯನ್ನು ತೆರವುಗೊಳಿಸಿದ ನಂತರ, ಲಭ್ಯವಾಗಿದ್ದ ಮಾಹಿತಿಯ ಪ್ರಕಾರ, 187 ವಿದೇಶೀಯರು, ಇಬ್ಬರು ಭಾರತೀಯರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿತ್ತು.

Advertisement

ಆದರೆ, ಮಾ.31ರಂದು ಬಂದ ಮಾಹಿತಿಯು ಈ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿತು. ದೆಹಲಿಯ ಅನೇಕ ಮಸೀದಿಗಳಲ್ಲಿ  ತಬ್ಲೀಘಿ  ಸಂಘಟನೆಯ ಬೆಂಬಲಿಗರು ಅಡಗಿದ್ದಾರೆ ಎಂಬ ಮಾಹಿತಿಯನ್ನು ಆಧರಿಸಿ, ಹಲವಾರು ಕಡೆ ದಾಳಿ ನಡೆಸಲಾಗಿದೆ. ಈಶಾನ್ಯ ದೆಹಲಿಯ ಮಸೀದಿಗಳಲ್ಲಿ 100 ವಿದೇಶಿಗರು ಸಿಕ್ಕಿದ್ದು, ನೈರುತ್ಯ ಭಾಗದ ಮಸೀದಿಗಳಲ್ಲಿ 200, ದಕ್ಷಿಣ ದೆಹಲಿಯ ಮಸೀದಿಗಳಲ್ಲಿ 170 ಹಾಗೂ ಪಶ್ಚಿಮ ದೆಹಲಿಯಲ್ಲಿ 7 ವಿದೇಶಿಗರು ಪತ್ತೆಯಾಗಿದ್ದಾರೆ ಎಂದು ಇಲಾಖೆ ತಿಳಿಸಿದೆ.

ಜಮಾತ್‌ ಸದಸ್ಯರ ಕೆಟ್ಟ ವರ್ತನೆ
ಸೋಂಕಿನಿಂದಾಗಿ ಕಾನ್ಪುರದ ಆಸ್ಪತ್ರೆಯ ನಿಗಾ ಘಟಕದಲ್ಲಿ ದಾಖಲಾಗಿರುವ ತಬ್ಲೀಘಿ ಸಂಘಟನೆಯ ಸದಸ್ಯರು, ಅಲ್ಲಿನ ಮಹಿಳಾ ಸಿಬಂದಿಯ ಬಳಿ ಅನುಚಿತವಾಗಿ ವರ್ತಿಸಿರುವ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ, ಆ ವಾರ್ಡ್‌ನಲ್ಲಿದ್ದ ಮಹಿಳಾ ಸಿಬಂದಿಯನ್ನು ತೆರವುಗೊಳಿಸಿ, ಅಲ್ಲಿ ಪುರುಷ ಸಿಬಂದಿಯನ್ನು ಮಾತ್ರ ನೇಮಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪರಿಸ್ಥಿತಿಯ ಸತತ ಅವಲೋಕನ
ಕೇಂದ್ರ ಗೃಹ ಸಚಿವಾಲಯ ಶನಿವಾರ ಸುದ್ದಿಗೋಷ್ಠಿ ನಡೆಸಿ, ದೇಶಾದ್ಯಂತ ಸುಮಾರು 22,000  ತಬ್ಲೀಘಿ -ಎ-ಜಮಾತ್‌ ಸದಸ್ಯರನ್ನು ಹಾಗೂ ಅವರ ಆಪ್ತರನ್ನು ನಿಗಾ ವಲಯದಲ್ಲಿ ಇರಿಸಲಾಗಿದೆ ಎಂದಿದೆ. ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಪುಣ್ಯಾ ಸಲೀಲಾ ಶ್ರೀವಾಸ್ತವ ಮಾತನಾಡಿ ‘ಸರಕಾರವು ದೇಶಾದ್ಯಂತ ಹರಡಿರುವ ಜಮಾತ್‌ ಸದಸ್ಯರನ್ನು ಹುಡುಕಿ ಅವರನ್ನು ಪರೀಕ್ಷೆಗೊಳಪಡಿಸುವ ಕಾರ್ಯವನ್ನು ಮಾಡುತ್ತಿದೆ.

ಜೊತೆಗೆ, ಲಾಕ್‌ ಡೌನ್‌ನ ಪರಿಸ್ಥಿತಿಯನ್ನು ಸತತವಾಗಿ ಅವಲೋಕಿಸಲಾಗುತ್ತಿದೆ. ಜನರ ಕುಂದು ಕೊರತೆಗಳನ್ನು ಆಲಿಸುವ ಸಲುವಾಗಿಯೇ ಶುರು ಮಾಡಲಾಗಿರುವ 24 ಗಂಟೆ ಕಾರ್ಯ ನಿರ್ವಹಿಸುವ ಕಸ್ಟಮರ್‌ ಕೇರ್‌ ನಿರ್ವಹಣೆಗಾಗಿ ರಾಷ್ಟ್ರೀಯ ವಿಪತ್ತು ನಿಗ್ರಹ ಪಡೆ (ಎನ್‌ಡಿಆರ್‌ಎಫ್), ಕೇಂದ್ರೀಯ ಮೀಸಲು ಪಡೆ (ಸಿಆರ್‌ಪಿಎಫ್) ಸಿಬಂದಿಯನ್ನು ನೇಮಿಸಲಾಗಿದೆ” ಎಂದು ತಿಳಿಸಿದ್ದಾರೆ .

Advertisement

ಉತ್ತರ ಪ್ರದೇಶದಲ್ಲಿ ಹಲವು ಪ್ರಕರಣ
ಉತ್ತರ ಪ್ರದೇಶದ ಮುಜಫರ್‌ ನಗರ್‌ ನಲ್ಲಿ 12 ಬಾಂಗ್ಲಾದೇಶಿಯರು ಮತ್ತು ಒಬ್ಬನ ವಿರುದ್ಧ 1946ರ ವಿದೇಶೀಯರ ಕಾಯ್ದೆಯನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಥಾಣಾ ಭವನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಠಾಣಾಧಿಕಾರಿಗಳು ತಿಳಿಸಿದ್ದಾರೆ. ಬಾಂದಾ ಜಿಲ್ಲೆಯಲ್ಲಿನ ಒಬ್ಬನಿಗೆ ಸೋಂಕು ದೃಢಪಟ್ಟಿದೆ.ಇನ್ನು, ಮಹಾರಾಜ್‌ ಗಂಜ್‌ ಜಿಲ್ಲೆಯ ಆರು ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಆಂಧ್ರದಲ್ಲಿ 16 ಕೇಸ್‌ ಪತ್ತೆ
ಸಮಾವೇಶಕ್ಕೆ ಹೋಗಿ ಬಂದಿದ್ದ ಆಂಧ್ರದ 16 ಜನರಲ್ಲಿ ಸೋಂಕು ಪತ್ತೆಯಾಗಿದೆ. ಆಂಧ್ರದಲ್ಲಿ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 180ಕ್ಕೇರಿದೆ.

5 ಜಿಲ್ಲೆಗಳಲ್ಲಿ ಕೋವಿಡ್ 19?
ದೆಹಲಿಯಲ್ಲಿ ನಡೆದಿದ್ದ  ಸಮಾವೇಶಕ್ಕೆ ಹೋಗಿ ಬಂದವರಿಂದ ರಾಜಸ್ಥಾನದ ಟೋಂಕ್‌, ಭಾರತ್‌ಪುರ್‌, ಧೋಲ್ಪುರ್‌, ದೌಸಾ ಹಾಗೂ ಬಿಕಾನೇರ್‌ ಜಿಲ್ಲೆಗಳಲ್ಲಿ ಸೋಂಕು ಹರಡಿದೆ.

Advertisement

Udayavani is now on Telegram. Click here to join our channel and stay updated with the latest news.

Next