Advertisement

ಕೇಜ್ರಿವಾಲ್ ಸಂಪುಟಕ್ಕೆ ಸೇರಿದ ಅತಿಶಿ ಮತ್ತು ಸೌರಭ್ ಭಾರದ್ವಾಜ್

07:01 PM Mar 09, 2023 | Team Udayavani |

ನವದೆಹಲಿ : ಆಮ್ ಆದ್ಮಿ ಪಕ್ಷದ ಶಾಸಕರಾದ ಸೌರಭ್ ಭಾರದ್ವಾಜ್ ಮತ್ತು ಅತಿಶಿ ಅವರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಮ್ಮುಖದಲ್ಲಿ ಗುರುವಾರ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರಿಂದ ಗುರುವಾರ (ಮಾರ್ಚ್ 9) ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

Advertisement

ದೆಹಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ರಾಮ್‌ವೀರ್ ಸಿಂಗ್ ಬಿಧೂರ್ ಕೂಡ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಅತಿಶಿ ಅವರು ಶಿಕ್ಷಣ, ಲೋಕೋಪಯೋಗಿ , ವಿದ್ಯುತ್ ಮತ್ತು ಪ್ರವಾಸೋದ್ಯಮ ಇಲಾಖೆಗಳನ್ನು ನಿರ್ವಹಿಸಿದರೆ, ಭಾರದ್ವಾಜ್ ಅವರು ಆರೋಗ್ಯ, ನಗರಾಭಿವೃದ್ಧಿ, ನೀರು ಮತ್ತು ಕೈಗಾರಿಕೆಗಳನ್ನು ನೋಡಿಕೊಳ್ಳಲಿದ್ದಾರೆ.

ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಪ್ರಸ್ತುತ ತಿಹಾರ್ ಜೈಲಿನಲ್ಲಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಸಚಿವ ಸತ್ಯೇಂದ್ರ ಜೈನ್ ರಾಜೀನಾಮೆ ನೀಡಿದ ನಂತರ, ಕ್ಯಾಬಿನೆಟ್ ನಲ್ಲಿ ಎರಡು ಸ್ಥಾನಗಳು ಖಾಲಿಯಾಗಿದ್ದವು.

2021-22ರ ದೆಹಲಿ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿನ ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ಫೆಬ್ರವರಿ 26 ರಂದು ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿತ್ತು. ಮಾರ್ಚ್ 20ರವರೆಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

Advertisement

ನ್ಯಾಯಾಂಗ ಬಂಧನದಲ್ಲಿರುವ ಜೈನ್ ಅವರನ್ನು ಕಳೆದ ವರ್ಷ ಮೇ 30 ರಂದು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು ಸಿಸೋಡಿಯಾ ಮತ್ತು ಜೈನ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದರು.

ಲೆಫ್ಟಿನೆಂಟ್ ಗವರ್ನರ್ ಸಕ್ಸೇನಾ ಅವರು ಅತಿಶಿ ಮತ್ತು ಭಾರದ್ವಾಜ್ ಅವರ ಹೆಸರನ್ನು ಕ್ಯಾಬಿನೆಟ್ ಮಂತ್ರಿಗಳಾಗಿ ನೇಮಕ ಮಾಡಲು ರಾಷ್ಟ್ರಪತಿ ಅವರಿಗೆ ಶಿಫಾರಸು ಮಾಡಿದ್ದಾರೆ.

ಪ್ರಮಾಣ ವಚನ ಸ್ವೀಕರಿಸಿದ ನಂತರ ಅತಿಶಿ ಮತ್ತು ಭಾರದ್ವಾಜ್ ಅವರು ಮಾರ್ಚ್ 17 ರಿಂದ ದೆಹಲಿ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಸಚಿವರಾಗಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಭಾರದ್ವಾಜ್ ಅವರು 2013 ರಿಂದ ಎಎಪಿಯ ಶಾಸಕರಾಗಿದ್ದಾರೆ ಮತ್ತು ಪ್ರಸ್ತುತ ದೆಹಲಿ ಜಲ ಮಂಡಳಿಯ ಉಪಾಧ್ಯಕ್ಷರಾಗಿದ್ದಾರೆ. ಅವರು 2013 ರಲ್ಲಿ ಕೇಜ್ರಿವಾಲ್ ಸರಕಾರದ ಸಂಕ್ಷಿಪ್ತ ಮೊದಲ ಅವಧಿಯಲ್ಲಿ ಸಚಿವರಾಗಿದ್ದರು.ಅತಿಶಿ ಅವರು 2020 ರಿಂದ ಎಎಪಿಯ ಶಾಸಕಿಯಾಗಿದ್ದಾರೆ ಮತ್ತು ಅದರ ಆರಂಭದಿಂದಲೂ ಪಕ್ಷದೊಂದಿಗೆ ಸಂಬಂಧ ಹೊಂದಿದ್ದಾರೆ.ಅವರು ಸಿಸೋಡಿಯಾ ಅವರ ಶಿಕ್ಷಣ ಖಾತೆಯಲ್ಲಿ ಸಲಹೆಗಾರರಾಗಿದ್ದರು.

ದೆಹಲಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ನಿಲ್ಲಿಸಲು ಕೇಂದ್ರ ಸರ್ಕಾರ ಯಾವ ರೀತಿ ದಾಳಿ ನಡೆಸುತ್ತಿದೆಯೋ, ಆ ಎಲ್ಲಾ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ಪ್ರಯತ್ನ ನಮ್ಮದು. ದೆಹಲಿಯ ಜನರಿಗೆ ಕೆಲಸ ಮಾಡಲು ಅವಕಾಶ ನೀಡುವಂತೆ ಲೆಫ್ಟಿನೆಂಟ್ ಗವರ್ನರ್ ಗೆ ಮನವಿ ಮಾಡಲಾಗಿದೆ.ಈ ಹಿಂದೆಯೂ ನಾವು ಪ್ರತಿಕೂಲ ಪರಿಸ್ಥಿತಿಯಲ್ಲಿ ಉತ್ತಮ ಕೆಲಸ ಮಾಡಿದ್ದೇವೆ, ಆದ್ದರಿಂದ ನಮಗೆ ದೆಹಲಿಯ ಜನರ ಆಶೀರ್ವಾದ ಸಿಕ್ಕಿದೆ ಎಂದು ಸೌರಭ್ ಭಾರದ್ವಾಜ್ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next