Advertisement

ಅತೀಕ್‌ ಹಂತಕರಿಗೆ ಬಿಷ್ಣೋಯ್‌ ಪ್ರೇರಣೆ; ಪೊಲೀಸರ ತನಿಖೆಯಲ್ಲಿ ಉಲ್ಲೇಖ

07:33 PM Apr 18, 2023 | Team Udayavani |

ಲಕ್ನೋ: ಕುಖ್ಯಾತ ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌, ಸಹೋದರ ಅಶ್ರಫ್ ಅಹ್ಮದ್‌ನನ್ನು ಗುಂಡಿಟ್ಟು ಹತ್ಯೆ ಮಾಡಿದ ಮೂವರು ಆರೋಪಿಗಳು ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ನಿಂದ ಪ್ರೇರಿತರಾಗಿದ್ದರು ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

Advertisement

ಹತ್ಯೆಯ ಇಡೀ ಯೋಜನೆಯನ್ನು ಸನ್ನಿ ಸಿಂಗ್‌ ರೂಪಿಸಿದ್ದ. ಈತ ಬಿಷ್ಣೋಯ್‌ನ ಸಂದರ್ಶನಗಳು ಮತ್ತು ವಿಡಿಯೋಗಳನ್ನು ಹೆಚ್ಚು ವೀಕ್ಷಿಸುತ್ತಿದ್ದ. ಆತನ ಭಾಷಣಗಳಿಂದ ಸನ್ನಿ ಪ್ರಭಾವಿತನಾಗಿದ್ದ. ಪಂಜಾಬಿ ಗಾಯಕ ಸಿಧು ಮೂಸೇವಾಲಾನನ್ನು ಬಿಷ್ಣೋಯ್‌ ಗ್ಯಾಂಗ್‌ ಕಳೆದ ವರ್ಷ ಮೇ 29ರಂದು ಹತ್ಯೆ ಮಾಡಿದ್ದರು. ಆತನ ರೀತಿ ಯಾವುದಾದರು ದೊಡ್ಡ ಕೊಲೆ ಪ್ರಕರಣದಲ್ಲಿ ಹೆಸರು ಮಾಡಬೇಕು ಎಂದು ಸನ್ನಿ ಅಂದುಕೊಂಡಿದ್ದ. ಅತೀಕ್‌ ಹತ್ಯೆ ಪ್ರಕರಣದಲ್ಲಿ ಸನ್ನಿ ಸಿಂಗ್‌, ಲವಲೇಶ್‌ ತಿವಾರಿ ಮತ್ತು ಅರುಣ್‌ ಮೌರ್ಯ ಬಂಧಿತರು.

ಪುಸಲಾಯಿಸಿದ್ದ:
ಸನ್ನಿ ಮೇಲೆ ಈಗಾಗಲೇ 12ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈತ ಅತ್ಯಂತ ಅಪಾಯಕಾರಿಯಾಗಿದ್ದಾನೆ. ಈತನೇ ಉಳಿದ ಇಬ್ಬರು ಆರೋಪಿಗಳಾದ ಲವಲೇಶ್‌ ತಿವಾರಿ ಮತ್ತು ಅರುಣ್‌ ಮೌರ್ಯನನ್ನು ಕೃತ್ಯಕ್ಕೆ ಪುಸಲಾಯಿಸಿದ್ದಾನೆ. ಮೂವರು ಸೇರಿ ಪತ್ರಕರ್ತರ ಸೋಗಿನಲ್ಲಿ ಪಾಯಿಂಟ್‌ ಬ್ಲಾಂಕ್‌ನಲ್ಲಿ ಅತೀಕ್‌ ಮತ್ತು ಅಶ್ರಫ್ನನ್ನು ಹತ್ಯೆ ಮಾಡಿದ್ದಾರೆ. ಈ ವಿಚಾರವನ್ನು ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ಬಾಯಿಬಿಟ್ಟಿದ್ದಾರೆ.

ಇನ್ನೊಂದೆಡೆ, ಉತ್ತರ ಪ್ರದೇಶದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ. ಪ್ರಯಾಗ್‌ರಾಜ್‌ನಲ್ಲಿ ಇಂಟರ್ನೆಟ್‌ ಸೇವೆಯನ್ನು ಮರಳಿ ಸ್ಥಾಪಿಸಲಾಗಿದೆ.

ಏ.24ರಂದು ವಿಚಾರಣೆ:
ಅತೀಕ್‌ ಮತ್ತು ಅಶ್ರಫ್ ಹತ್ಯೆಯ ಪ್ರಕರಣವನ್ನು ಸ್ವಾತಂತ್ರ್ಯ ತನಿಖೆಗೆ ಒಪ್ಪಿಸಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಯನ್ನು ಏ.24ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್‌ ಮಂಗಳವಾರ ಒಪ್ಪಿದೆ.

Advertisement

ಬಾಂಬ್‌ ದಾಳಿ:
ಪ್ರಯಾಗ್‌ರಾಜ್‌ನ ಕಟ್ರಾ ಪ್ರದೇಶದಲ್ಲಿರುವ ಅತೀಕ್‌ ಪರ ವಕೀಲರ ಪೈಕಿ ಒಬ್ಬರಾದ ದಯಾಶಂಕರ್‌ ಮಿಶ್ರಾ ನಿವಾಸದ ಸಮೀಪ ಮಂಗಳವಾರ ಸಣ್ಣ ಪ್ರಮಾಣದ ಕಚ್ಚಾ ಬಾಂಬ್‌ ಸ್ಫೋಟವಾಗಿದೆ. ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಲಿಲ್ಲ. ಆದರೆ ಇದು ಮಿಶ್ರಾ ಅವರನ್ನು ಗುರಿಯಾಗಿಸಿ ನಡೆಸಿದ ದಾಳಿಯಲ್ಲ . ಇಬ್ಬರು ಯುವಕರ ನಡುವಿನ ವೈಯಕ್ತಿಕ ದ್ವೇಷದಲ್ಲಿ ಈ ದಾಳಿ ನಡೆದಿದೆ ಎಂದು ಪೊಲೀಸ್‌ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಡಾನ್‌ಗಳ ಬೆದರಿಕೆಗೆ ಬಗ್ಗುವುದಿಲ್ಲ: ಯೋಗಿ
“ಯಾವುದೇ ಮಾಫಿಯಾ ಡಾನ್‌ ಅಥವಾ ಅಪರಾಧಿ ಉತ್ತರ ಪ್ರದೇಶದಲ್ಲಿ ಉದ್ಯಮಿಗಳಿಗೆ ಬೆದರಿಕೆ ಹಾಕುವಂತಿಲ್ಲ. ಅವರಿಂದ ಹಣ ವಸೂಲಿ ಮಾಡುವಂತಿಲ್ಲ. ಹೀಗೆ ಮಾಡಿದ ಅಪರಾಧಿಗಳ ಹೆಡೆಮುರಿ ಕಟ್ಟುತ್ತೇವೆ. ಈ ಹಿಂದೆ ಉತ್ತರ ಪ್ರದೇಶ ಗಲಭೆಗಳಿಂದ ಕುಖ್ಯಾತವಾಗಿತ್ತು. ಕೆಲವು ಜಿಲ್ಲೆಗಳ ಹೆಸರು ಹೇಳಿದರೆ ಜನರು ಬೆಚ್ಚಿ ಬೀಳುತ್ತಿದ್ದರು. ಆದರೆ ಈಗ ವಾತಾವರಣ ಬದಲಾಗಿದೆ. ಎಲ್ಲೆಡೆ ಶಾಂತಿ ಮತ್ತು ಸುವ್ಯವಸ್ಥೆ ನೆಲೆಸಿದೆ,’ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next