Advertisement

ಗಮನ ಸೆಳೆದ ವೈವಿಧ್ಯ ತಿಂಡಿ, ತಿನಸು

11:42 AM Aug 13, 2018 | |

ಮಹಾನಗರ: ಆಟಿ ತಿಂಗಳು ಅಂದಾಕ್ಷಣ ಕರಾವಳಿಗರಿಗೆ ತಿಮರೆ ಚಟ್ನಿ, ಪತ್ರೊಡೆ, ಕನಿಲೆ, ಮೆಂತೆ ಗಂಜಿ, ಹಲಸಿನ ಹಣ್ಣು ಗಾರಿಗೆ ಹೀಗೆ ಬಗೆ ಬಗೆಯ ಪದಾರ್ಥಗಳು ನೆನಪಿಗೆ ಬಂದು ಬಾಯಿಯಲ್ಲಿ ನೀರೂರುತ್ತದೆ. ಹೀಗಿರುವಾಗ, ಆಟಿ ಮಾಸದಲ್ಲಿ ಸಂಪ್ರದಾಯಿಕವಾಗಿ ಮಾಡುವ ಈ ರೀತಿಯ ತಿಂಡಿ- ತಿನಿಸುಗಳನ್ನು ಸವಿಯುವ ಮೆನು ರೆಡಿಯಿದ್ದರೆ ಎಷ್ಟೊಂದು ಚೆಂದ ಎಂದು ನಗರವಾಸಿಗಳು ನೆನಪಿಸಿಕೊಳ್ಳುತ್ತಾರೆ. 

Advertisement

ಇಂತಹ ಆಟಿ ಮಾಸದ ತಿಂಡಿ- ತಿನಸು ಉಣ್ಣುವ ‘ಆಟಿ ಕೂಟದ ಭೋಜನ’ದ ವ್ಯವಸ್ಥೆ ರವಿವಾರ ಪಿಲಿಕುಳ ಉದ್ಯಾನವನದ ಗುತ್ತು ಮನೆಯಲ್ಲಿ ಮಾಡಲಾಗಿತ್ತು. ವಿಜಯಾ ಬ್ಯಾಂಕ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲ್ಕೂರ ಪ್ರತಿಷ್ಠಾನ ಹಾಗೂ ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಸಹಯೋಗದೊಂದಿಗೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಆಧುನಿಕತೆಯ ಭರಾಟೆಯಲ್ಲಿ ಮರೆಯಾಗಿದ್ದ ತುಳುನಾಡಿನ ಈ ತಿಂಡಿ, ತಿನಸುಗಳನ್ನು ಪರಿಚಯಿಸುವ ಕೆಲಸವನ್ನು ಇಲ್ಲಿ ಮಾಡಲಾಗಿತ್ತು. ಈ ತಿಂಡಿ ತಿನಸುಗಳನ್ನು ಸವಿದು ನಗರವಾಸಿಗಳು ಸಂತಸಪಟ್ಟರು. ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗವಹಿಸಿ ಸೆಲ್ಫಿ, ಫೋಟೋ ತೆಗೆದು ಸಂಭ್ರಮಿಸಿದರು. ಮಂಗಳೂರು ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟದವರಿಂದ ಆಟಿಯ ವಿವಿಧ ಬಗೆಯ ವಿಶೇಷ ತಿನಸುಗಳ ಪ್ರದರ್ಶನ ಹಾಗೂ ಹಂಚಿಕೆಯೂ ನಡೆಯಿತು. ಕಾರ್ಯಕ್ರಮದಲ್ಲಿ ಮಧ್ಯಾಹ್ನ ಎಲ್ಲರಿಗೂ ತುಳುನಾಡಿನ ತಿಂಡಿ- ತಿನಸು, ಊಟಗಳ ವಿತರಣೆ ನಡೆಯಿತು.

ಉದ್ಘಾಟನೆ
ಕಾರ್ಯಕ್ರಮವನ್ನು ಜಾನಪದ ವಿದ್ವಾಂಸ ಚಿನ್ನಪ್ಪ ಗೌಡ ಉದ್ಘಾಟಿಸಿದರು. ಮೂಲ್ಕಿ- ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್‌, ಪಶ್ಚಿಮ ವಲಯ ಐಜಿಪಿ ಅರುಣ್‌ ಚಕ್ರವರ್ತಿ, ಮಂಗಳೂರು ಮೇಯರ್‌ ಭಾಸ್ಕರ್‌ ಕೆ., ನಗರ ಡಿಸಿಪಿ ಹನುಮಂತರಾಯ, ವಿಜಯಾ ಬ್ಯಾಂಕ್‌ನ ಡಿಜಿಎಂ ಶ್ರೀಧರ್‌, ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ, ವಿಜ್ಞಾನ ಕೇಂದ್ರದ ಡಾ| ಕೆ.ವಿ. ರಾವ್‌ ಮೊದಲಾದವರು ಸಹಿತ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಆಹಾರ ವೈವಿಧ್ಯ
ಮಧ್ಯಾಹ್ನ ಭೋಜನದಲ್ಲಿ ಉಪ್ಪಿನಕಾಯಿ, ತಿಮರೆ ಚಟ್ನಿ, ನೀರು ಮಾವಿನ ಕಾಯಿ ಚಟ್ನಿ, ಮುಳ್ಳು ಸೌತೆ ಪಚ್ಚೊಡಿ, ಉಪ್ಪಡ್‌ ಪಚ್ಚಿರ್‌, ಕಡ್ಲೆ ಪಲ್ಯ, ಸೊಜಂಕ್‌, ಹಲಸಿನ ಬೀಜ ಉಪ್ಪುಕರಿ, ಕನಿಲೆ, ಹೆಸರು ಗಸಿ, ಮೆಂತೆ ಗಂಜಿ, ಪತ್ರೊಡೆ, ಹಲಸಿನ ಎಲೆ ಕೊಟ್ಟಿಗೆ, ಹರಿವೆ ದಂಟು, ಸೇವು ದಂಟು, ಹೀರೆ ಮತ್ತು ಪಡುವಲಕಾಯಿ ಸಾಂಬಾರ್‌, ಸೌತೆ ಕಾಯಿ ಹುಳಿ, ಕುಚಲಕ್ಕಿ, ಬೆಳ್ತಿಗೆ ಅನ್ನ, ಹುರುಳಿ ಸಾರು, ಜೀಗುಚ್ಚೆ- ಸಿಮ್ಲಾ ಮೆಣಸು ಪೋಡಿ, ಅಂಬಡೆ, ಕಂಚಲ ಮೆಣಸು ಕಾಯಿ, ಸೇವು ತಟ್ಲ ಮತ್ತು ಸೌತೆ ಸಾಂಬಾರ್‌, ಹಲಸಿನ ಹಣ್ಣು ಗಾರಿಗೆ, ಸಾರ್ನಡ್ಡೆ ಪಾಯಸ, ಮಜ್ಜಿಗೆ ಇತ್ತು. 

Advertisement

ಯಕ್ಷಗಾನದ ಮೆರಗು
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ತೆಂಕು ತಿಟ್ಟಿನ ಪ್ರಸಿದ್ಧ ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆ ಅವರ ಸಾರಥ್ಯದಲ್ಲಿ ಯಕ್ಷಮಂಜೂಷ ಅವರಿಂದ ಯಕ್ಷಗಾನ ನಾಟ್ಯ ವೈಭವ ಕಾರ್ಯಕ್ರಮ, ಮೈಮ್‌ ರಾಮ್‌ದಾಸ್‌ ನೇತೃತ್ವದ ಜಾನಪದೀಯ ಸಂಗೀತ ಕಾರ್ಯಕ್ರಮ ಪಿಲಿಕುಳ ಗುತ್ತಿನ ಮನೆಯ ಎದುರು ನಿರ್ಮಿಸಿದ ವೇದಿಕೆಯಲ್ಲಿ ಜರಗಿತು.

ಮಕ್ಕಳಿಗೆ ಮಾಹಿತಿ ನೀಡಬೇಕು
ಇಂತಹ ಕಾರ್ಯಕ್ರಮಕ್ಕೆ ಮೊದಲ ಬಾರಿ ಬರುತ್ತಿದ್ದೇನೆ. ಇಲ್ಲಿ ಇರುವ ಕೆಲವು ವಸ್ತುಗಳ ಬಗ್ಗೆ ನನಗೆ ಮಾಹಿತಿ ಇಲ್ಲ. ಇನ್ನೂ ಇಂದಿನ ಮಕ್ಕಳಿಗೆ ತಿಳಿದಿರಲೂ ಸಾಧ್ಯವಿಲ್ಲ. ಮುಂದಿನ ಬಾರಿ ಬರುವಾಗ ಮಕ್ಕಳನ್ನು ಕರೆತಂದು ಅವರಿಗೆ ಇದರ ಬಗ್ಗೆ ಮಾಹಿತಿ ನೀಡಬೇಕು.
– ಗಾಯತ್ರಿ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next