Advertisement
ಆಷಾಢ ಮಾಸವನ್ನು ತುಳುನಾಡಿನ ಜನರು ತುಳು ತಿಂಗಳ “ಆಟಿ’ಯೆಂದು ಕರೆಯುತ್ತಾರೆ. ಆಟಿ ಅಮಾವಾಸ್ಯೆಗೆ ಅದರಲ್ಲೂ ವಿಶೇಷತೆಯಿದೆ. ಕರ್ನಾಟಕದ ಇತರ ಪ್ರದೇಶಗಳನ್ನು ಗಮನಿಸಿದಾಗ ತುಳುನಾಡಿನ ಜನರ ಆಹಾರ ಪದ್ಧತಿ, ಜೀವನ ಶೈಲಿ, ಆಚರಣ ಪದ್ಧತಿಗಳು ವಿಶಿಷ್ಟವಾಗಿವೆ. ಇಲ್ಲಿನ ಜನರು ಪ್ರಕೃತಿ ಆರಾಧನೆ ಮಾಡುವವರು. ಎಡೆಬಿಡದೇ ಸುರಿಯುವ ಮಳೆಯಿಂದಾಗಿ ಆ ಕಾಲದಲ್ಲಿ ಜನರು ವಿಶೇಷವಾಗಿ ಪ್ರಕೃತಿಯಲ್ಲಿ ಸಿಗುವ ಗೆಡ್ಡೆಗೆಣಸು, ಸೊಪ್ಪು ತರಕಾರಿಗಳನ್ನು ತಿನ್ನುವ ರೂಢಿಯಿತ್ತು.ಆ ಕಾಲದಲ್ಲಿ ಮಾನಸಿಕ ನೆಮ್ಮದಿಯಿಂದ ದೂರವಾದ ಮನಸ್ಸನ್ನು ಸಂತೈಸಲು ಆಟಿ ಕಳೆಂಜನು ಮನೆ ಮನೆಗೆ ಬಂದು ಮಾರಿ ಓಡಿಸುವ ಕ್ರಮವಿತ್ತು.
ಈ ಬಾರಿ ಜುಲೈ 28ರಂದು ಆಟಿ ಅಮಾವಾಸ್ಯೆ. ಈ ದಿನ ತುಳನಾಡಿನಲ್ಲಿ ಹಾಲೆ ಮರದ ತೊಗಟೆಯಿಂದ ಮಾಡುವ ಕಷಾಯ ಕುಡಿಯುವುದು ಪದ್ಧತಿ. ಮುಂಜಾವ ಖಾಲಿ ಹೊಟ್ಟೆಗೆ ಹಾಲೆ ಮರದ ಕಷಾಯ 2 ಚಮಚ ಸೇವಿಸುವುದರಿಂದ ಮುಂದಿನ ವರ್ಷ ಆಷಾಢ ಮಾಸದವರೆಗೆ ಯಾವುದೇ ಕಾಯಿಲೆ ಬರುವು ದಿಲ್ಲವೆಂದು ತುಳುವರ ನಂಬಿಕೆ. ಮರದ ಪರಿಚಯ
ಹಾಲೆ ಮರ ಅಥವಾ ಪಾಲೆ ಮರವು 10 ಮೀ.ಗೂ ಹೆಚ್ಚು ಎತ್ತರ ಬೆಳೆಯುವ ಬೃಹತ್ ಆಕಾರದ ಮರ. ಎಲೆಗಳು 10 ಸೆ.ಮೀ. ಉದ್ದ ಇದ್ದು ಎಲೆಯ ನರಗಳು ಪ್ರಾಮುಖ್ಯವಾಗಿ ಕಾಣುತ್ತವೆ. ಸಣ್ಣದಾದ ತೊಟ್ಟನ್ನು ಹೊಂದಿರುತ್ತದೆ. ಏಳೇಳು ಎಲೆಗಳ ಗೊಂಚಲನ್ನು ಹೊಂದಿದ್ದು ಹಾಲಿನ ರೂಪದಲ್ಲಿ ರಸ ಕೊಡುವ ಮರ ಮತ್ತು ಇದು ಮೆದು ಮರವಾಗಿದೆ. ಇದರಲ್ಲಿ ಕರಿ ಪಾಲೆ ಮತ್ತು ಬಿಳಿ ಪಾಲೆ ಎಂಬ ಎರಡು ವಿಧಗಳಿವೆ. ಶ್ವೇತ ವರ್ಣದಿಂದ ಕೂಡಿದ ಹೂವುಗಳು ಸುವಾಸನೆ ಹೊಂದಿರುತ್ತವೆ. ಹೂವು ಬಿಡುವ ಸಂದರ್ಭದಲ್ಲಿ ಈ ಮರದಡಿಯಲ್ಲಿ ಹೋದರೆ ಮೂಗಿನಿಂದ ತನ್ನಿಂತಾನೆ ನೀರಿಳಿಯುತ್ತದೆ. ತುದಿಯಲ್ಲಿ ಗೊಂಚಲಿನಂತಿರುವ ಕಾಯಿಗಳು 20ರಿಂದ 40 ಸೆ. ಮೀ ಉದ್ದವಿದ್ದು, 6ರಿಂದ 8 ಸೆಂ.ಮೀ. ದಪ್ಪದ ಕೊಳವೆಯಾಕಾರವಾಗಿ ಬಿಳಿ ಚುಕ್ಕೆಗಳಿಂದ ಕೂಡಿದ ಕಪ್ಪು ಬಣ್ಣವನ್ನು ಹೊಂದಿರುತ್ತವೆ.
ಏಳೇಲೆ ಹೊನ್ನೆ, ಕೊಡಾಲೆಮರ, ದೈಪಾಲಂ, ಏರಿಪಾಲಂ, ಸಾಂತ್ನಿ ರೂಕುಂ, ಸಪ್ತಪರ್ಣಿ, ಪಯಸ್ಯ, ಆಂಗ್ಲ ಭಾಷೆಯ ಮಿಲ್ಕ್ವುಡ್, ಮಿಲ್ಕ್ವುಡ್-ಪಿನೆ, ವೈಟ್ ಚೀಸ್ ವುಡ್, ಡೆವಿಲ್ ಟ್ರೀ ನಾಮಧೇಯಗಳಿಂದ ಕರೆಯುವರು.
Related Articles
ತೀಕ್ಷ್ಣವಾದ ಕಂಪು ನೀಡುವ ಈ ಮರಕ್ಕೆ ಹಲವಾರು ರೋಗಗಳನ್ನು ಗುಣಪಡಿಸುವ ಶಕ್ತಿಯಿದೆ. ಇದರ ಒಣಗಿಸಿದ ತೊಗಟೆಯು ಅಮೀಬಾದಿಂದ ಬರುವ ಆಮಶಂಕೆ ರೋಗಕ್ಕೆ ಉಪಯುಕ್ತವಾಗಿದೆ. ಇದು ವಿಷಮಘ್ನ ಮತ್ತು ಜರಘ್ನವುಳ್ಳ¨ªಾಗಿದೆ. ಈ ತೊಗಟೆಯಲ್ಲಿರುವ ಕೊನೇಸಿನ್ ಎಂಬ ಆಲ್ಕಲಾಯಿಡ್ (ಸಸಾರಜನಕ) ದ್ರವ್ಯ ಕ್ಷಯರೋಗದ ಕ್ರಿಮಿಯನ್ನು ನಾಶ ಪಡಿಸುತ್ತದೆ.
Advertisement
ವೈದ್ಯರ ಪ್ರಕಾರ ಪಾಲೆಮರದ ಕಷಾಯ ಮಲೇರಿಯಾ, ಅತಿಸಾರ, ಚರ್ಮದ ಸಮಸ್ಯೆಗಳು ಮತ್ತು ಅಸ್ತಮಾ ರೋಗದಿಂದ ಪಾರು ಮಾಡುತ್ತದೆ.
ಜನಪದ ಸಂಶೋಧನಾ ಕೇಂದ್ರದ ಸಂಶೋಧನೆಯು ಅಮಾವಾಸ್ಯೆಯ ದಿನದಂದು ಸಂಗ್ರಹಿಸಿದ ಪಾಲೆಮರದ ರಸದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫ್ಲವೋನೈಡ್ಸ್ ಎಂಬ ಪದಾರ್ಥವಿದೆ ಎಂದು ಸಾಬೀತು ಪಡಿಸಿದೆ. ಆಟಿ ಅಮಾವಾಸ್ಯೆ ದಿನ ಈ ಮರದ ತೊಗಟೆಯಲ್ಲಿ ಸಾವಿರದೊಂದು ಔಷಧಿಯ ಅಂಶ ಇರುತ್ತದೆ ಎಂಬುದು ಹಿರಿಯರ ನಂಬಿಕೆ.
ಕೆತ್ತೆ ತರುವ ಪಾಲೆ ಮರಕ್ಕೆ ಗುರುತುಹಿಂದಿನ ತಲೆಮಾರಿನವರ ಪ್ರತೀ ಕ್ರಮದಲ್ಲಿ ಅದರದ್ದೇ ಆದ ಅರ್ಥವಿರುತ್ತದೆ. ಆಟಿ ಅಮಾವಾಸ್ಯೆಯ ಹಿಂದಿನ ದಿನ ಪಾಲೆಮರವನ್ನು ಗುರುತಿಸಿ ಅದಕ್ಕೊಂದು ಬಿಳಿ ನೂಲನ್ನು ಕಟ್ಟಿ ಮರದ ಬುಡದಲ್ಲಿ ಬಿಳಿ ಕಲ್ಲನ್ನು (ಬೊಲ್‌ಕಲ್ಲು) ಇಟ್ಟು, ಎಲ್ಲ ರೋಗಗಳನ್ನು ನಿವಾರಿಸುವ ಮದ್ದು ಸಂಗ್ರಹಿಸಿಡು ಹಾಲೆ ಮರವೇ ಎಂದು ಪ್ರಾರ್ಥಿಸಿ ಬರುತ್ತಿದ್ದರು. ಅಮಾವಾಸ್ಯೆ ದಿನ ಬೆಳಗ್ಗೆ ಅಂದರೆ ಸೂರ್ಯೋದಯಕ್ಕಿಂತ ಮೊದಲೇ ತೊಗಟೆ ತಂದು ಕಸಾಯ ಕುಡಿಯಬೇಕು. ಇತ್ತೀಚೆಗೆ ಹಾಲೆಮರದ ತೊಗಟೆ ಎಂದು ತಪ್ಪಾಗಿ ಕೆಲವು ವಿಷಕಾರಿ (ಕಾಸರ್ಕ, ಕುರುಡು ಮರ)ಮರದ ತೊಗಟೆ ರಸವನ್ನು ಸೇವಿಸಿದ ಪರಿಣಾಮ ದುರಂತದ ಘಟನೆಗಳು ನಡೆದಿವೆ. ಹಾಗಾಗಿ ಹಿಂದಿನ ಕಾಲದಲ್ಲಿ ಮರಕ್ಕೆ ನೂಲು ಕಟ್ಟಿ ಗುರುತಿಸಿ ಬರುತ್ತಿದ್ದರು ಮತ್ತು ಅನಾಹುತಗಳು ಸಂಭವಿಸದ ಹಾಗೆ ಎಚ್ಚರ ವಹಿಸುತ್ತಿದ್ದರು.
ಪಾಲೆಮರದ ಕೆತ್ತೆಯನ್ನು ಕತ್ತಿಯಿಂದ ತೆಗೆ ಯುವಂತಿಲ್ಲ ಔಷಧೀಯ ಸತ್ವಗಳು ಕಡಿಮೆಯಾಗುತ್ತವೆ ಎಂಬ ಕಾರಣದಿಂದ ಬೊಲ್ ಕಲ್ಲಿನಿಂದ ಜಜ್ಜಿ ತೆಗೆದು ಅದಕ್ಕೆ ಶುಂಠಿ, ಕಾಳುಮೆಣಸು ಸೇರಿಸಿ ಕಡೆಯುವ ಕಲ್ಲಿನಿಂದ ಅಥವಾ ಮಿಕ್ಸಿನಿಂದ ರುಬ್ಬಿ ಅದರ ರಸ ಸೋಸಿ ಅದಕ್ಕೆ ಬೊಲ್‌ಕಲ್ಲನ್ನು ಬಿಸಿ ಮಾಡಿ ಹಾಕಿ ಆ ಮೇಲೆ 24. ಮಿ. ಲೀ. ಅಂದರೆ ಎರಡು ಚಮಚದಷ್ಟು ಮಾತ್ರ ಕುಡಿಯುವುದು. ಈ ರಸ ಕಹಿ ಮತ್ತು ತೀರಾ ಉಷ್ಣ ಆಗಿರುವುದರಿಂದ ಮದ್ದು ಸೇವಿಸಿ ಸ್ವಲ್ಪ ಸಮಯ ಬಿಟ್ಟು ಮೆಂತೆ ಗಂಜಿ ಅಥವಾ ರಾಗಿ ಮನ್ನಿ ಸೇವಿಸುವ ಕ್ರಮವಿದೆ.
ಹಿರಿಯರ ಪ್ರತೀ ಆಚರಣೆಗಳನ್ನು ಮುಂದಿನ ಪೀಳಿಗೆಗೆ ಪರಿಚಯ ಮಾಡುತ್ತಾ ಆಚರಿಸುತ್ತಾ ಮೌಲ್ಯಗಳಿಗೆ ಕುಂದು ಬರದಂತೆ ನಡೆದುಕೊಳ್ಳೋಣ. ಎಲ್ಲರೂ ಎಚ್ಚರಿಕೆಯಿಂದ ಹಾಲೆ ಮರದ ತೊಗಟೆ ಸಂಗ್ರಹಿಸಿ ಕಷಾಯ ಮಾಡೋಣ. – ನಾರಾಯಣ ಕುಂಬ್ರ