Advertisement

ಆತ್ಮನಿರ್ಭರತೆಯ ಎಫ್‌ಎಂಸಿಜಿಗಿಂದು ಶ್ರೀಕಾರ

12:52 PM Oct 28, 2022 | Team Udayavani |

ಹುಬ್ಬಳ್ಳಿ: ಲಕ್ಷಾಂತರ ಉದ್ಯೋಗ ಸೃಷ್ಟಿ, ಉದ್ಯಮ ವಲಯದ ನೆಗೆತ ಹಾಗೂ ಆರ್ಥಿಕತೆ ಬೆಳವಣಿಗೆಯಲ್ಲಿ ಕ್ರಾಂತಿಕಾರ ಸಾಧನೆಯ ಮಹದುದ್ದೇಶದ, ಬಹುನಿರೀಕ್ಷಿತ ಎಂಎಫ್‌ಸಿಜಿ ಕ್ಲಸ್ಟರ್‌ಗೆ ಅಧಿಕೃತ ಚಾಲನೆ ನಿಟ್ಟಿನಲ್ಲಿ ಸರಕಾರ ಹಾಗೂ ಉದ್ಯಮ ವಲಯ ಮಹತ್ವದ ಹೆಜ್ಜೆ ಇರಿಸಲಿದೆ. ದೇಶದಲ್ಲಿಯೇ ಮಹತ್ವದೆನ್ನುವ, ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತ ಪರಿಕಲ್ಪನೆಗೆ ಬಲ ತುಂಬುವ ಕಾರ್ಯಕ್ಕೆ ಶುಭ ಶುಕ್ರವಾರ ಸಾಕ್ಷಿಯಾಗಲಿದೆ.

Advertisement

ದೇಶದ ಕೆಲವು ಕಡೆಗಳಲ್ಲಿ ಎಫ್‌ಎಂಸಿಜಿ ಉದ್ಯಮ ತನ್ನದೇ ರೀತಿಯಲ್ಲಿ ನೆಲೆ ಕಂಡುಕೊಂಡಿದೆಯಾದರೂ, ಆತ್ಮನಿರ್ಭರತೆ ಪರಿಕಲ್ಪನೆ ಜತೆಗೆ ವ್ಯವಸ್ಥಿತ ಸೌಲಭ್ಯ, ಹಲವು ಸುಧಾರಣೆ, ಸುಮಾರು 200 ಎಕರೆ ಜಾಗದಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ ನೆಲೆಗೊಳ್ಳುತ್ತಿರುವ ಎಫ್‌ ಎಂಸಿಜಿ ದೇಶಕ್ಕೆ ಹಲವು ಪ್ರಥಮಗಳಿಗೆ ಸಾಕ್ಷಿಯಾಗಲಿದೆ. ಅಷ್ಟೇ ಅಲ್ಲ ರಾಜ್ಯದ ಆರ್ಥಿಕತೆ, ಉತ್ತರ ಕರ್ನಾಟಕದ ಉದ್ಯಮ ಬೆಳವಣಿಗೆಗೂ ಮಹತ್ವದ ಕೊಡುಗೆ ನೀಡಲಿದೆ. ಇಂತಹ ಮಹತ್ವದ ಉದ್ದೇಶದ ಎಫ್‌ಎಂಸಿಜಿ ಕ್ಲಸ್ಟರ್‌ ಪ್ರಕ್ರಿಯೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿವಿಧ ಕಂಪೆನಿಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ಚಾಲನೆ ನೀಡಲಿದ್ದಾರೆ.

ಉದ್ಯಮ ದೃಷ್ಟಿಯಿಂದ ಗಮನಾರ್ಹ ರೀತಿಯಲ್ಲಿ ಹೆಜ್ಜೆ ಇರಿಸುತ್ತಿರುವ ಹುಬ್ಬಳ್ಳಿ-ಧಾರವಾಡ ಉದ್ಯಮ ನಗರವಾಗುವತ್ತ ಹಲವು ಯತ್ನಗಳಿಗೆ ಮುಂದಾಗಿದೆ. ಒಂದು ಕಾಲಕ್ಕೆ ಜವಳಿ ಸೇರಿದಂತೆ ಮಹತ್ವದ ಉದ್ಯಮಗಳನ್ನು ಹೊಂದಿದ್ದರೂ ಕಾಲಾನಂತರದಲ್ಲಿ ಉದ್ಯಮದಿಂದ ದೂರ ಸರಿಯತೆ ಎಂಬಂತಹ ಸ್ಥಿತಿ ನಿರ್ಮಾಣವಾಗಿತ್ತು.ಇದೀಗ ಮತ್ತೆ ಉದ್ಯಮ ವಲಯ ಪುನರುತ್ಥಾನಗೊಳ್ಳುತ್ತಿದೆ.

ಟಾಟಾ, ಏಕಸ್‌, ಇನ್ಫೋಸಿಸ್‌,ಯುಫ್ಲೆಕ್ಸ್‌, ಸಾಯಿ ಗಾರ್ಮೆಂಟ್ಸ್‌ನಂತಹ ಹಲವು ಕಂಪೆನಿಗಳು ನೆಲೆ ಕಂಡಿವೆ, ಆರಂಭಕ್ಕೆ ಮುಂದಾಗಿವೆ. ಇದೀಗ ಇವುಗಳ ಸಾಲಿಗೆ ಎಫ್‌ಎಂಸಿಜಿ ಕ್ಲಸ್ಟರ್‌ ಸೇರ³ಡೆ ಉದ್ಯಮ ವಲಯಕ್ಕೆ ಮಹತ್ವದ ಬಲ ತುಂಬುವುದಾಗಿದೆ.

ವಿಜನ್‌ಗ್ರುಪ್‌ ನೀಡಿದ ವರದಿ: ಹುಬ್ಬಳ್ಳಿ-ಧಾರವಾಡದಲ್ಲಿ ಎಂಎಫ್‌ಸಿಜಿ ಕ್ಲಸ್ಟರ್‌ ಮಾಡಬೇಕೆಂಬ ಚಿಂತನೆ ಮೊಳಕೆಯೊಡೆದಿತ್ತಲ್ಲದೆ 2019ರಲ್ಲಿ ಎಫ್‌ಎಂಸಿಜಿ ಕ್ಲಸ್ಟರ್‌ ಸ್ಥಾಪನೆ ಬೀಬ ಬಿತ್ತನೆ ಕಾರ್ಯವಾಗಿತ್ತು. ಅಂದಿನ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ಅವರ ಒತ್ತಾಸೆ ಮೇರೆಗೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌ .ಯಡಿಯೂರಪ್ಪ ಅವರು ಹುಬ್ಬಳ್ಳಿ-ಧಾರವಾಡದಲ್ಲಿ ಎಫ್‌ಎಂಸಿಜಿ ಕ್ಲಸ್ಟರ್‌ ಸ್ಥಾಪನೆ ಘೋಷಣೆಯೊಂದಿಗೆ ಇದಕ್ಕೆ ಪೂರಕವಾಗಿ ಉದ್ಯಮಿ ಉಲ್ಲಾಸ ಕಾಮತ್‌ ನೇತೃತ್ವದಲ್ಲಿ ವಿಜನ್‌ ಗ್ರುಪ್‌ ಸ್ಥಾಪಿಸಲಾಗಿತ್ತು. ಇದಕ್ಕೂ ಪೂರ್ವಭಾವಿಯಾಗಿ ಕೈಗಾರಿಕಾ ಸಚಿವ ಜಗದೀಶ ಅಸ್ಸಾಂನ ಗುವಾಹಟಿಗೆ ಹೋಗಿ ಅಲ್ಲಿನ ಎಫ್‌ಎಂಸಿಜಿ ಕ್ಲಸ್ಟರ್‌ ವೀಕ್ಷಣೆ ಮಾಡಿ ಬಂದಿದ್ದರು.

Advertisement

ನಂತರ ಉಲ್ಲಾಸ ಕಾಮತ್‌ ನೇತೃತ್ವದ ಸಮಿತಿ 2020ರ ಜೂನ್‌ನಲ್ಲಿ ಸರಕಾರಕ್ಕೆ ವರದಿ ಸಲ್ಲಿಸಿತ್ತು. ಅನಂತರದಲ್ಲಿ ಕೋವಿಡ್‌ ಹಿನ್ನೆಲೆ, ರಾಜಕೀಯದಲ್ಲಿ ಬದಲಾವಣೆ ಇನ್ನಿತರೆ ಕಾರಣಗಳಿಂದ ಎಫ್‌ಎಂಸಿಜಿ ಕ್ಲಸ್ಟರ್‌ ನಿರೀಕ್ಷಿತ ಬೆಳವಣಿಗೆ ಕಂಡಿದ್ದಿಲ್ಲ. ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶೇಷ ಆಸಕ್ತಿ ವಹಿಸಿದ್ದರು. ಉಲ್ಲಾಸ ಕಾಮತ್‌ ಅವರೊಂದಿಗೆ 2-3 ಬಾರಿ ಚರ್ಚಿಸಿದ್ದರು. ಎಫ್‌ಎಂಜಿಸಿ ಕ್ಲಸ್ಟರ್‌ನಲ್ಲಿ ಉದ್ಯಮ ಆರಂಭಕ್ಕೆ ಉದ್ಯಮಿಗಳ ಕೆಲ ಬೇಡಿಕೆ, ಆರ್ಥಿಕ ಇಲಾಖೆ ಒಪ್ಪಿಗೆ ನಡುವೆ ಒಂದಿಷ್ಟು ಹಗ್ಗ ಜಗ್ಗಾಟ ನಡೆದಿತ್ತಾದರೂ, ಮುಖ್ಯಮಂತ್ರಿಯವರು ಇದನ್ನು ಪರಿಹರಿಸುವ ಮೂಲಕ, ಎಫ್‌ಎಂಸಿಜಿ ಕ್ಲಸ್ಟರ್‌ ಚಾಲನೆಗೆ ಅನುಮೋದನೆ ನೀಡುವ ನಿಟ್ಟನಲ್ಲಿ ಕ್ರಮ ಕೈಗೊಂಡಿದ್ದಾರಲ್ಲದೆ ಇದೀಗ ವಿವಿಧ ಕಂಪೆನಿಗಳೊಂದಿಗೆ ಒಡಂಬಡಿಕೆ ಮೂಲಕ ಮತ್ತೂಂದು ಮಹತ್ವದ ಹೆಜ್ಜೆ ಇರಿಸುತ್ತಿದ್ದಾರೆ.

ಎಫ್‌ಎಂಸಿಜಿ ಕ್ಲಸ್ಟರ್‌ ಹುಬ್ಬಳ್ಳಿ-ಧಾರವಾಡದಲ್ಲಿ ಸ್ಥಾಪನೆಗೊಂಡರೆ ದಕ್ಷಿಣ ಭಾರತದಲ್ಲಿ ಮಹತ್ವದ ಕೇಂದ್ರವಾಗಲಿದೆ. ರಸ್ತೆ, ರೈಲು, ವಿಮಾನಯಾನದ ಉತ್ತಮ ಸಂಪರ್ಕ ಹೊಂದಿರುವ ಹುಬ್ಬಳ್ಳಿ-ಧಾರವಾಡ ಉದ್ಯಮಕ್ಕೆ ಪೂರಕವಾದ ವಾತಾವರಣ ಹೊಂದಿದೆ.

5 ಲಕ್ಷ ಉದ್ಯೋಗ ಸೃಷ್ಟಿ: ಹು-ಧಾದಲ್ಲಿ ಎಫ್‌ಎಂಸಿಜಿ ಕ್ಲಸ್ಟರ್‌ ಸ್ಥಾಪನೆಗೆಂದು ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಧಾರವಾಡದ ಮುಮ್ಮಿಗಟ್ಟಿ ಬಳಿ ಸುಮಾರು 200 ಎಕರೆ ಜಮೀನು ಕಾಯ್ದಿರಿಸಲಾಗಿದೆ. ಎಫ್‌ಎಂಸಿಜಿ ಉದ್ಯಮವಲಯ ಸುಮಾರು 500 ಎಕರೆಯಷ್ಟು ಭೂಮಿಯ ಬೇಡಿಕೆ ಸಲ್ಲಿಸದ್ದು, ಸರಕಾರ ಈಗಾಗಲೇ ಪಕ್ಕದಲ್ಲಿಯೇ ಸುಮಾರು 500ಎಕರೆ ಜಮೀನನ್ನು ಸಹ ಗುರುತಿಸಿದೆ. ಮುಮ್ಮಿಗಟ್ಟಿ ಕೈಗಾರಿಕಾ ವಲಯ ಪ್ರದೇಶದಲ್ಲಿ ಸ್ಥಾಪನೆಯಾಗುವ ಎಫ್‌ಎಂಸಿಜಿ ಕ್ಲಸ್ಟರ್‌ ಮೂರು ಹಂತದಲ್ಲಿ ಅನುಷ್ಠಾನಕ್ಕೆ ಯೋಜಿಸಲಾಗಿದ್ದು, ಇದು ಪೂರ್ಣಗೊಂಡರೆ ಸುಮಾರು 5ಲಕ್ಷ ಉದ್ಯೋಗ ಸೃಷ್ಟಿ, ಸುಮಾರು 50 ಕಂಪೆನಿಗಳಿಂದ ಅಂದಾಜು 25,000 ಕೋಟಿ ರೂ. ಬಂಡವಾಳ ಹೂಡಿಕೆ, 2035ರ ವೇಳೆಗೆ ಶೇ.35 ಈ ಭಾಗದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುವ ಮಹತ್ವಾಕಾಂಕ್ಷಿ ಹೊಂದಲಾಗಿದೆ. ಉದ್ಯೋಗದಲ್ಲಿ ಶೇ.50 ಮಹಿಳೆಯರಿಗೆ ನೀಡಲು ಯೋಜಿಸಲಾಗಿದೆ.

ಎಫ್‌ಎಂಸಿಜಿ ಉತ್ಪನ್ನಗಳ ಬಳಕೆ ಹಾಗೂ ಉತ್ಪಾದನೆ ಗಮನಿಸಿದರೆ ರಾಜ್ಯದಲ್ಲಿ ಒಟ್ಟು ಬಳಕೆಯ ಉತ್ಪನ್ನಗಳಲ್ಲಿ ಶೇ.15 ಮಾತ್ರ ನಮ್ಮಲ್ಲಿ ಉತ್ಪಾದನೆಯಾಗುತ್ತಿದ್ದು, ಉಳಿದ ಶೇ.85 ಬೇರೆ ಕಡೆಯಿಂದ ಬರುತ್ತಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಎಫ್‌ಎಂಸಿಜಿ ಕ್ಲಸ್ಟರ್‌ ಆರಂಭಗೊಂಡರೆ ಉತ್ಪಾದನೆ, ಉದ್ಯೋಗ, ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡಲಿದ್ದು, ದಕ್ಷಿಣ ಭಾರತದ ಎಫ್‌ಎಂಸಿಜಿ ಉತ್ಪನ್ನಗಳ ನೀಡಿಕೆಯ ತಾಣವಾಗಲಿದೆ. ವೇರ್‌ಹೌಸ್‌, ಸರಕು- ಸಾಗಣೆ ಕ್ಷೇತ್ರದ ಮಹತ್ವದ ಹಬ್‌ ಆಗುವ ಸಾಧ್ಯತೆ ಇದೆ. ಉತ್ತರ ಕರ್ನಾಟಕದಲ್ಲಿ ಉದ್ಯಮ ಬೆಳವಣಿಗೆ, ಉದ್ಯೋಗ ಸೃಷ್ಟಿ ದೃಷ್ಟಿಯಿಂದ ಮಹತ್ವದ ತಿರುವ ನೀಡುವ ಕ್ಲಸ್ಟರ್‌ ಇದಾಗಲಿದೆ ಎಂಬುದು ಸ್ಪಷ್ಟ.

15 ಕಂಪೆನಿಗಳಿಂದ ಸಾವಿರ ಕೋಟಿ ಹೂಡಿಕೆ ಒಡಂಬಡಿಕೆ?

ಹುಬ್ಬಳ್ಳಿ-ಧಾರವಾಡದಲ್ಲಿ ಎಫ್‌ಎಂಸಿಜಿ ಕ್ಲಸ್ಟರ್‌ ಸ್ಥಾಪನೆ ನಿಟ್ಟಿನಲ್ಲಿ ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಂಪೆನಿಗಳೊಂದಿಗೆ ಒಡಂಬಡಿಕೆಯೊಂದಿಗೆ ಚಾಲನೆ ನೀಡಲಿದ್ದಾರೆ. ಒಡಂಬಡಿಕೆಗೆ 25-30 ಕಂಪೆನಿಗಳು ಮುಂದಾಗಿದ್ದು, ಶುಕ್ರವಾರ ನಡೆಯುವ ಸಮಾರಂಭದಲ್ಲಿ ಈಗಾಗಲೇ ಅಂದಾಜು 15 ಕಂಪೆನಿಗಳು ತಮ್ಮ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿದ್ದು, ಅಂದಾಜು 1,000 ಕೋಟಿ ರೂ.ಗೂ. ಹೆಚ್ಚು ಹೂಡಿಕೆಯ ಒಡಂಬಡಿಕೆ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಎಫ್‌ಎಂಸಿಜಿ ಕ್ಲಸ್ಟರ್‌ನಿಂದ ಉತ್ತರ ಕರ್ನಾಟಕದ ಉದ್ಯಮ ಬೆಳವಣಿಗೆಗೆ ಮಹತ್ವದ ಸಹಕಾರಿ ಆಗಲಿದೆ. ಗ್ರಾಹಕ ಬಳಕೆ ಉತ್ಪನ್ನಗಳ ಉತ್ಪಾದನೆ ಜತೆಗೆ ಉದ್ಯೋಗ ಸೃಷ್ಟಿಗೆ ತನ್ನದೇ ಕೊಡುಗೆ ನೀಡಲಿದೆ. ದೇಶಿ ಉತ್ಪನ್ನಗಳಿಗೆ ಇದು ಪ್ರಮುಖ ವೇದಿಕೆ ಆಗಲಿದ್ದು, ರೈತರ ಕೃಷಿ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಸೃಷ್ಟಿಸುವ ಸಾಧ್ಯತೆ ಇದೆ. ಕೈಗಾರಿಕಾ ಇಲಾಖೆಯಿಂದ ಅಗತ್ಯ ಪ್ರೋತ್ಸಾಹ, ಸಹಕಾರ ನೀಡಲಾಗುವುದು. ಡಾ| ಮುರುಗೇಶ ನಿರಾಣಿ, ಕೈಗಾರಿಕಾ ಸಚಿವ

ಎಫ್‌ಎಂಸಿಜಿ ಕ್ಲಸ್ಟರ್‌ ಸ್ಥಾಪನೆಯಿಂದ ರಾಜ್ಯ- ಪ್ರಾದೇಶಿಕ ಆರ್ಥಿಕ ಬಲವರ್ಧನೆಯಾಗಲಿದೆ. ಕ್ಲಸ್ಟರ್‌ ಸ್ಥಾಪನೆ ಕುಂಠಿತವಾಗಿತ್ತಾದರೂ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿಶೇಷ ಆಸಕ್ತಿ ಹಾಗೂ ಮುತುವರ್ಜಿಯಿಂದಾಗಿ ಯೋಜನೆ ಸಕ್ರಿಯತೆ ಪಡೆದಿದ್ದು, ಉದ್ಯಮ ವಲಯದ ಬೇಡಿಕೆಗಳಿಗೆ ಸಿಎಂ ಅವರ ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಯೋಜನೆಗೆ ಅನುಮೋದನೆ ನೀಡಿದ್ದರಲ್ಲದೆ, ಇದೀಗ ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ಮತ್ತೂಂದು ಹಂತಕ್ಕೆ ಮುಂದಾಗಿದ್ದಾರೆ. ಯೋಜನೆಯ ಅನುಷ್ಠಾನ ನಿಟ್ಟಿನಲ್ಲಿ ನಿಗಾ ವಹಿಸುವಂತೆ ಸಿಎಂ ಸೂಚಿಸಿದ್ದರು. ಉದ್ಯಮಿಯಾಗಿ, ಶಾಸಕನಾಗಿ ನನ್ನ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿದ್ದೇನೆ. ಅರವಿಂದ ಬೆಲ್ಲದ, ಶಾಸಕ

ಎಫ್‌ಎಂಸಿಜಿ ಕ್ಲಸ್ಟರ್‌ ನನ್ನ ಕನಸಿನ ಕೂಸು. ಅಷ್ಟೇ ಅಲ್ಲ ಈ ಭಾಗದ ಗೇಮ್‌ ಚೇಂಜರ್‌ ಆಗಲಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಎಫ್‌ಎಂಸಿಜಿ ಕ್ಲಸ್ಟರ್‌ ಸ್ಥಾಪನೆ ನಿಟ್ಟಿನಲ್ಲಿ ಉಲ್ಲಾಸ ಕಾಮತ್‌ ನೇತೃತ್ವದಲ್ಲಿ ವಿಜನ್‌ ಗ್ರುಪ್‌ ಸ್ಥಾಪನೆಗೆ ಅಂದಿನ ಸಿಎಂ ಯಡಿಯೂರಪ್ಪ ಅವರನ್ನು ಮನವೊಲಿಸಿದ್ದೆ. ಸ್ವತಃ ನಾನೇ ಗುವಾಹಟಿಗೆ ಹೋಗಿ ಅಲ್ಲಿನ ಸಾಧನೆ ವೀಕ್ಷಿಸಿ ಬಂದಿದ್ದೆ. ಸಮಿತಿ ವರದಿ ಕೊಟ್ಟ ನಂತರ ಕೋವಿಡ್‌ ಇನ್ನಿತರೆ ಕಾರಣಗಳಿಂದ ಕ್ಲಸ್ಟರ್‌ ವಿಳಂಬವಾಗಿತ್ತು. ಸಿಎಂ ಬಸವರಾಜ ಬೊಮ್ಮಾಯಿ ಅವರು ಇದಕ್ಕೆ ಮತ್ತೆ ಚಾಲನೆ ನೀಡುವ ಮೂಲಕ ಇದೀಗ ಒಡಂಬಡಿಕೆಗೆ ಮುಂದಾಗಿರುವುದು ಸಂತಸ ಮೂಡಿಸಿದೆ.  –ಜಗದೀಶ ಶೆಟ್ಟರ, ಮಾಜಿ ಮುಖ್ಯಮಂತ್ರಿ.

ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next