Advertisement

‘ದೇವರ ಆಶೀರ್ವಾದ, ಚಿನ್ನ ಗೆದ್ದೆ’

03:29 PM Oct 15, 2018 | |

ಸುಬ್ರಹ್ಮಣ್ಯ: ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನ ಗೆದ್ದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರ ಸನ್ನಿಧಾನದಲ್ಲಿ ಉರುಳು ಸೇವೆ ಸಲ್ಲಿಸುತ್ತೇನೆ ಎಂದು ಹರಕೆ ಹೊತ್ತುಕೊಂಡಿದ್ದೆ. ಅದರಂತೆ ಏಷ್ಯನ್‌ ಗೇಮ್ಸ್‌ನ ರಿಲೇಯಲ್ಲಿ ಚಿನ್ನದ ಪದಕವನ್ನು ಭಾರತೀಯ ತಂಡ ಪಡೆದುಕೊಂಡಿದೆ. ಮಿಕ್ಸೆಡ್‌ ರಿಲೇಯಲ್ಲಿ ಬೆಳ್ಳಿ ಪದಕ ಪಡೆದಿದ್ದೇವೆ. ದೇವರಲ್ಲಿ ಹೇಳಿಕೊಂಡ ಹರಕೆ ಸಲ್ಲಿಸಲು ಇಲ್ಲಿಗೆ ಬಂದಿದ್ದೇನೆ. ಹರಕೆ ತೀರಿಸಿದ ಬಳಿಕ ಸಂತೃಪ್ತಿಗೊಂಡಿದ್ದೇನೆ ಎಂದು ಅಂತಾರಾಷ್ಟ್ರೀಯ ಆ್ಯತ್ಲೀಟ್‌ ಎಂ.ಆರ್‌. ಪೂವಮ್ಮ ಹೇಳಿದರು. ರವಿವಾರ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಹೊರಾಂಗಣದಲ್ಲಿ ಉರುಳು ಸೇವೆ ನಡೆಸಿದ ಅವರು, ಬಳಿಕ ಶ್ರೀ ದೇವರ ದರುಶನ ಪಡೆದು, ಶೇಷ ಸೇವೆ ನೆರವೇರಿಸಿದರು. ಬಳಿಕ ಶ್ರೀ ಆದಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿ, ದರ್ಶನ ಮಾಡಿದರು.

Advertisement

ಪತ್ರಕರ್ತರ ಜತೆ ಮಾತನಾಡಿದ ಪೂವಮ್ಮ, ನಾನು ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ಭಕ್ತೆ. ಪ್ರತೀ ವರ್ಷ ಶ್ರೀ ಕ್ಷೇತ್ರಕ್ಕೆ ಆಗಮಿಸುತ್ತೇನೆ. ಸ್ಪರ್ಧೆ ವೇಳೆ ಗಾಯಗಳು ಉಂಟಾಗದೆ ಚಿನ್ನ ಗೆಲ್ಲುವಂತಾದರೆ ಉರುಳು ಸೇವೆ ಮಾಡುತ್ತೇನೆ ಎಂದು ಹರಕೆ ಹೇಳಿಕೊಂಡಿದ್ದೆ. ದೇವರ ಆಶೀರ್ವಾದದಿಂದ ಚಿನ್ನ ಗೆಲ್ಲುವಂತಾಗಿದೆ‌ ಎಂದರು.

ಏಷ್ಯನ್‌ ಚಾಂಪಿಯನ್‌ಷಿಪ್‌ ಮತ್ತು ಜಾಗತಿಕ ಕ್ರೀಡಾಕೂಟ ಮುಂದೆ ನಡೆಯಲಿದೆ. ಅದಕ್ಕೆ ತರಬೇತಿ ಪಡೆಯುತ್ತಿದ್ದೇನೆ. ಮುಂದಿನ ತಿಂಗಳ 23ರಿಂದ ಪಟಿಯಾಲದಲ್ಲಿ ನಡೆಯುವ ತರಬೇತಿಗೆ ತೆರಳುತ್ತಿರುವೆ. ಈ ಬಾರಿ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತವು ಅತ್ಯುತ್ತಮ ಸಾಧನೆ ಮಾಡಿದೆ. ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನದ ಸಾಧನೆ ಮಾಡಿದ ನಂತರ ಸರಕಾರವು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಸರಕಾರ 40 ಲಕ್ಷ ರೂ. ನೀಡಿದೆ. ಮುಂದೆ ಈ ಮೊತ್ತವನ್ನು ಅಧಿಕಗೊಳಿಸಿ ನಿವೇಶನ ನೀಡುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ ಎಂದು ಹೇಳಿದರು.

ಪೂವಮ್ಮ ಅವರನ್ನು ದೇವಸ್ಥಾನದ ಶಿಷ್ಟಾಚಾರ ಅಧಿಕಾರಿ ಕೆ.ಎಂ. ಗೋಪಿನಾಥ್‌ ನಂಬೀಶ್‌, ಶಿಷ್ಟಾಚಾರ ವಿಭಾಗದ ಪ್ರಮೋದ್‌ ಕುಮಾರ್‌ ಎಸ್‌., ಹರೀಶ್‌ ಕೇನ್ಯ ಸ್ವಾಗತಿಸಿದರು. ರಾಷ್ಟ್ರೀಯ ಕಬಡ್ಡಿ ತೀರ್ಪುಗಾರ ಶಿವರಾಮ್‌ ಯೇನೆಕಲ್ಲು, ಪೂವಮ್ಮ ಅವರ ತಂದೆ ರಾಜು, ತಾಯಿ ಜಾಜಿ, ಸಹೋದರ ಮಂಜು, ಸಹೋದರಿ ನಿಖಿತಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next