ಧಾರವಾಡ: ರಾಜ್ಯದಲ್ಲಿನ ಐಟಿ ಕಂಪನಿಗಳು ಮತ್ತು ದೊಡ್ಡ ಕೈಗಾರಿಕಾ ಕಂಪನಿಗಳು ಕ್ರೀಡಾಪಟುಗಳನ್ನು ದತ್ತು ಪಡೆದು ಅವರಿಗೆ ಪ್ರೋತ್ಸಾಹ ನೀಡಿದರೆ ಸರ್ಕಾರ ಕಂಪನಿಗಳಿಗೆ ಅನುಕೂಲ ಮಾಡಿಕೊಡಲಿದೆ ಎಂದು ಗೃಹ ಸಚಿವ ಡಾ|ಜಿ.ಪರಮೇಶ್ವರ ಹೇಳಿದರು.
ಇಲ್ಲಿನ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವಿಶ್ವ ಒಲಿಂಪಿಕ್ ಮಟ್ಟದಲ್ಲಿ ದೇಶದ ಕೀರ್ತಿ ಬೆಳೆಸಲು ಕ್ರೀಡಾಪಟುಗಳು ಚೆನ್ನಾಗಿ ಸಿದ್ಧಗೊಳ್ಳಬೇಕು. ಅದಕ್ಕಾಗಿ ಶಾಲಾ ಹಂತದಲ್ಲೇ ವಿದ್ಯಾರ್ಥಿಗಳಲ್ಲಿನ ಕ್ರೀಡಾಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು.
ಅದಕ್ಕಾಗಿ ಪ್ರಾಥಮಿಕ ಶಿಕ್ಷಣದಲ್ಲಿ ದೈಹಿಕ ಶಿಕ್ಷಕರನ್ನು ನೇಮಕ ಮಾಡಬೇಕು. ಇನ್ನು ಒಮ್ಮೆ ಅವರು ಉತ್ತಮ ಕ್ರೀಡಾಪಟುಗಳಾದ ನಂತರ ಅವರನ್ನು ವಿಶ್ವ ಒಲಿಂಪಿಕ್‌ಗೆ ಸಜ್ಜುಗೊಳಿಸಲು ಬೇರೆ ಬೇರೆ ಕಂಪನಿಗಳು ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಬೇಕು. ಅದರಲ್ಲೂ ವಿಶೇಷವಾಗಿ ಐಟಿ ಮತ್ತು ಕೈಗಾರಿಕಾ ಕಂಪನಿಗಳು ಆಸಕ್ತಿ ತೋರಬೇಕು ಎಂದರು.
ಶೇ.5 ಮೀಸಲು: ರಾಜ್ಯಮಟ್ಟದಲ್ಲಿ ಉತ್ತಮ ಕ್ರೀಡಾಪಟುಗಳಾಗಿ ಹೊರ ಹೊಮ್ಮುವವರಿಗೆ ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ನಡೆಯುವಾಗ ಶೇ.5ರಷ್ಟು ಮೀಸಲು ನೀಡಬೇಕು ಎನ್ನುವ ಬೇಡಿಕೆ ಇದೆ. ಹೀಗಾಗಿ ಇನ್ಮುಂದೆ ಪೊಲೀಸ್ ಇಲಾಖೆಯಲ್ಲಿ ನಡೆಯುವ ಎಲ್ಲ ನೇಮಕಾತಿಯಲ್ಲೂ ಶೇ.5ರಷ್ಟು ಮೀಸಲಾತಿಯನ್ನು ಕ್ರೀಡಾಪಟುಗಳಿಗೆ ನಿಯೋಜಿಸಲಾಗುವುದು.
ಧಾರವಾಡದಲ್ಲಿ ಫೈರಿಂಗ್ ರೇಂಜ್ ಸ್ಥಾಪಿಸಲು ಶೀಘ್ರ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು. ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಮಾತನಾಡಿ, ಒಲಿಂಪಿಕ್ಸ್ ಮಾತ್ರವಲ್ಲ ಬೇರೆ ಎಲ್ಲ ವಿಚಾರದಲ್ಲೂ ಮುಂದಿನ ದಿನಗಳಲ್ಲಿ ಸರ್ಕಾರ ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು.
ಒಲಿಂಪಿಕ್ಸ್ ಕ್ರೀಡಾಕೂಟ ಶಸ್ವಿಗೊಳಿಸಿದ್ದಕ್ಕೆ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೆಒಎ ಕಾರ್ಯದರ್ಶಿ ಅನಂತರಾಜು ಸೇರಿದಂತೆ ಹಿರಿಯ ಅಧಿಕಾರಿಗಳು, ನಿಗಮ ಮಂಡಳಿ ಅಧ್ಯಕ್ಷರು ವೇದಿಕೆ ಮೇಲಿದ್ದರು. ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಸ್ವಾಗತಿಸಿದರು, ಸದಾಶಿವ ಮರ್ಜಿ ಕಾರ್ಯಕ್ರಮ ನಿರೂಪಿಸಿದರು.
ಪಥ ಸಂಚಲನ: ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಕ್ರೀಡಾಪಟುಗಳು ಸಾಂಪ್ರದಾಯಿಕವಾಗಿ ಪಥ ಸಂಚಲನ ನಡೆಸಿದರು. ಗೃಹ ಸಚಿವ ಡಾ| ಜಿ.ಪರಮೇಶ್ವರ ಸೇರಿದಂತೆ ವೇದಿಕೆ ಮೇಲಿದ್ದ ಎಲ್ಲ ಸಚಿವರು ಕ್ರೀಡಾಪಟುಗಳಿಂದ ಧ್ವಜ ವಂದನೆ ಸ್ವೀಕರಿಸಿದರು.