ಕಾಸರಗೋಡು: ಅನನ್ಯ ಭಕ್ತಿಭಾವಗಳೊಂದಿಗೆ ಭತ್ತದ ನೇಜಿಯನ್ನು ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ದೇವರಗುಡ್ಡೆ ಶ್ರೀಶೈಲ ಮಹಾದೇವ ಕ್ಷೇತ್ರದಲ್ಲಿ ನಡೆಯಲಿರುವ ಅತಿರುದ್ರ ಮಹಾಯಾಗಕ್ಕೆ ಯಾಗದ ಹವಿಸ್ಸು ಭತ್ತ ನಾಟಿ ಮಹೋತ್ಸವವು ಬೇಳ ಚೌಕ್ಕಾರು ಕರ್ಪಿತ್ತಿಲು ಅರಿಕ್ಕೆಲ್ ಮರಾಟಿಕೆರೆಯಲ್ಲಿ ರವಿವಾರ ಜರಗಿತು.
2020 ಫೆಬ್ರವರಿ 26ರಿಂದ ಮಾರ್ಚ್ 2ರ ತನಕ ಅತಿ ವಿಶಿಷ್ಟವಾದ ಅತಿರುದ್ರ ಮಹಾಯಾಗವು ನಡೆಯಲಿರುವುದು. ಯಾಗದ ಸಿದ್ಧತೆಗಳು ಈಗಾಗಲೇ ಆರಂಭಗೊಂಡಿದ್ದು, ಆಹುತಿ ಯನ್ನು ನೀಡಲಿರುವ ಹವಿಸ್ಸುಗಳೆಲ್ಲವನ್ನೂ ವಿಷಮುಕ್ತವಾಗಿ ಸಾವಯವ ಕೃಷಿಯ ಮೂಲಕ ನಡೆಸಲಾಗುವುದು.
ಸಿದ್ಧತೆಯ ಭಾಗವಾಗಿ ವಿವಿಧೆಡೆ ಈಗಾಗಲೇ ಸಮಿತಿಗಳನ್ನು ರೂಪಿಸಲಾಗಿದ್ದು, ನೀರ್ಚಾಲು ಸಮಿತಿಯ ನೇತೃತ್ವದಲ್ಲಿ ಚೌಕ್ಕಾರು ಕರ್ಪಿತ್ತಿಲು ನಾರಾಯಣ ರೈ ಹಾಗೂ ದೂಮಣ್ಣ ರೈಗಳ ಗದ್ದೆಯಲ್ಲಿ ನಡೆದ ಭತ್ತ ನಾಟಿ ಮಹೋತ್ಸವಕ್ಕೆ ಹರ ಹರ ಮಹಾದೇವ್ ದೇವನಾಮದೊಂದಿಗೆ ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯ ವಿಷ್ಣು ಆಸ್ರ ಭತ್ತದ ನೇಜಿಯನ್ನು ಭಕ್ತರಿಗೆ ಹಸ್ತಾಂತರಿಸಿ ಅನುಗ್ರಹಿಸಿದರು. ದೇವರ ನಾಮಸ್ಮರಣೆಯೊಂದಿಗೆ ನಮ್ಮ ಪಾಲಿಗೊದಗಿದ ದೇವರ ಸೇವೆಯನ್ನು ಕೈಗೊಳ್ಳಲು ನೂರಾರು ಭಕ್ತಾದಿಗಳು ಒಂದುಗೂಡಿದ್ದರು. ಪುಟ್ಟ ಮಕ್ಕಳು, ಮಾತೆಯರು, ಮಹನೀಯರು ಒಟ್ಟು ಸೇರಿ ಶೀಘ್ರದಲ್ಲಿ ನಾಟಿ ಕಾರ್ಯವನ್ನು ಮುಗಿಸಿದರು. ಈ ಸಂದರ್ಭದಲ್ಲಿ ಊರಪರವೂರ ಅನೇಕ ಮಂದಿ ಗಣ್ಯರು ಪಾಲ್ಗೊಂಡಿದ್ದರು.
ಕಾಸರಗೋಡು ಆ. 5: ಯಜ್ಞದಿಂದ ಪ್ರಕೃತಿ ಸಮೃದ್ಧವಾ ಗುತ್ತದೆ. ಭೂಮಿಗೆ ಮಳೆ ಬರಬೇಕಾದರೆ ಯಜ್ಞವನ್ನು ನಡೆಸಬೇಕು. ಮಳೆಯಿಂದ ನಮಗೆ ಬೆಳೆ ಲಭಿಸುತ್ತದೆ. ತನ್ಮೂಲಕ ಮನುಷ್ಯನಿಗೆ ಅತೀ ಅಗತ್ಯವಾದ ಆಹಾರ ಲಭಿಸುತ್ತದೆ. ಪ್ರಕೃತಿಯಲ್ಲಿ ಇವತ್ತು ನಮಗೆ ಧಾನ್ಯ ದೊರಕಬೇಕಾದರೆ ದೇವರ ಅನುಗ್ರಹವಿರಬೇಕು ಎಂದು ಬ್ರಹ್ಮಶ್ರೀ ಉಳಿಯ ವಿಷ್ಣು ಆಸ್ರ ತಿಳಿಸಿದರು.
ಬೇಳ ಗ್ರಾಮದ ಚೌಕ್ಕಾರು ಕರ್ಪಿತ್ತಿಲು ಅರಿಕ್ಕೆಲ್ ಮರಾಟಿಕೆರೆಯಲ್ಲಿ ದೇವರಗುಡ್ಡೆ ಶ್ರೀ ಶೈಲ ಮಹಾದೇವ ಕ್ಷೇತ್ರದಲ್ಲಿ 2020ರ ಫೆಬ್ರವರಿ 26ರಿಂದ ಮಾರ್ಚ್ 2ರ ತನಕ ನಡೆಯಲಿರುವ ಅತಿರುದ್ರ ಮಹಾಯಾಗಕ್ಕೆ ಹವಿಸ್ಸು ಭತ್ತ ಕೃಷಿ ನಾಟಿ ಮಹೋತ್ಸವದ ಸಭಾಕಾರ್ಯಕ್ರಮದಲ್ಲಿ ಅವರು ದೀಪಬೆಳಗಿಸಿ ಅನುಗ್ರಹ ಭಾಷಣ ಮಾಡಿದರು. ದೇವರೆನ್ನುವುದು ನಿಷೇಧಿಸಲು ಸಾಧ್ಯವಿಲ್ಲದಂತಹ ಪರಮಸತ್ಯವಾಗಿದೆ. ಸನಾತನ ಆಚಾರ ವಿಚಾರಗಳು ನಮ್ಮೆಲ್ಲರ ರಕ್ಷಣೆಗಿದೆ. ಕೃಷಿಯ ಮೂಲಕ ದೇವರ ಸೇವೆಯೆಂಬ ಪ್ರಯತ್ನ ಸಾರ್ಥಕ್ಯವನ್ನು ಪಡೆಯಲಿ. ಮನುಷ್ಯನ ಪ್ರಯತ್ನ ಎಂಬುದು ಶ್ರೇಷ್ಠವಾಗಿದೆ.