Advertisement

ನಿರ್ವಹಣೆ ಇಲ್ಲದೆ ಪಾಳು ಕೊಂಪೆಯಾದ ಅತ್ತಾವರ ಕಟ್ಟೆ ಉದ್ಯಾನವನ!

06:57 PM Jan 18, 2022 | Team Udayavani |

ಅತ್ತಾವರ: ನಗರದಲ್ಲಿ ಸ್ಮಾರ್ಟ್‌ ಸಿಟಿಯಡಿ ಉದ್ಯಾನವನಗಳು ವಿವಿಧ ಮಾದರಿಯಲ್ಲಿ ಅಭಿವೃದ್ಧಿ ಕಾಣುತ್ತಿದೆ; ಆದರೆ ಅತ್ತಾವರದ ಕಟ್ಟೆ ಉದ್ಯಾನವನ ಮಾತ್ರ ನಿರ್ವಹಣೆ ಇಲ್ಲದೆ ಪಾಳು ಕೊಂಪೆಯಾಗಿದೆ!

Advertisement

ಅತ್ತಾವರ ಶ್ರೀ ದೈವರಾಜ ಕೋಟೆದ ಬಬ್ಬುಸ್ವಾಮಿ ದೈವಸ್ಥಾನದ ಮುಂಭಾಗ ದಲ್ಲಿರುವ ಅತ್ತಾವರ ಕಟ್ಟೆ ಉದ್ಯಾನವನ ನಿರ್ವಹಣೆ ಇಲ್ಲದೆ ಸಾರ್ವಜನಿಕರಿಗೆ ಬಳಕೆಗೆ ಸೂಕ್ತವಾಗಿಲ್ಲ. ಮಹಾನಗರ ಪಾಲಿಕೆಗೆ ಒಳಪಟ್ಟ ಈ ಪಾರ್ಕ್‌ ಬಗ್ಗೆ ಪಾಲಿಕೆ ಅಧಿಕಾರಿಗಳು ನಿಗಾ ವಹಿಸದ ಹಿನ್ನೆಲೆಯಲ್ಲಿ ನಗರದ ಉದ್ಯಾನವನ ವೊಂದು ಪಾಳು ಕೊಂಪೆಯ ಸ್ವರೂಪಕ್ಕೆ ಬದಲಾಗಿದೆ. ಸುಮಾರು 4 ವರ್ಷಗಳ ಹಿಂದೆ ಖಾಲಿ ಜಾಗವಿದ್ದ ಸಣ್ಣ ಪ್ರದೇಶದಲ್ಲಿ ಉದ್ಯಾನವನ ನಿರ್ಮಾಣಕ್ಕೆ ಪಾಲಿಕೆ ಮನಸ್ಸು ಮಾಡಿತ್ತು. ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಉದ್ಯಾನವನ ಇಲ್ಲಿ ನಿರ್ಮಿಸಲಾಗಿತ್ತು. ಸಾರ್ವಜನಿಕರಿಗೆ ಉಪಯೋಗವಾಗುವ ನೆಲೆಯಲ್ಲಿ ಉದ್ಯಾನವನ ರೂಪಿಸಲಾಗಿತ್ತು. ಸುತ್ತಲೂ ಆವರಣ ಗೋಡೆ, ನೆಲಕ್ಕೆ ಗ್ರಾನೈಟ್‌, ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿತ್ತು. ಗಿಡಗಳನ್ನು ಕೂಡ ನೆಡಲಾಗಿತ್ತು. ಸ್ಥಳೀಯ ಕೆಲವರು ಈ ಉದ್ಯಾನವನದಲ್ಲಿ ಸಮಯ ಕಳೆಯುತ್ತಿದ್ದರು.

ಸಾರ್ವಜನಿಕರು ಆಕ್ಷೇಪ
ಸದ್ಯ ಉದ್ಯಾನವನದಲ್ಲಿ ಗಿಡಗಂಟಿ ಗಳು ಬೆಳೆದು ಸಾರ್ವಜನಿಕರು ಉದ್ಯಾನವನದೊಳಗೆ ಹೋಗಲು ಆಗದಂತಹ ಪರಿಸ್ಥಿತಿಯಿದೆ. ಆಸನದಲ್ಲಿ ಕುಳಿತುಕೊಳ್ಳಲು ಆಗುವುದಿಲ್ಲ. ಎದುರಿನ ಗೇಟ್‌ ತೆರೆಯಲು ಆಗದಷ್ಟು ತುಕ್ಕು ಹಿಡಿದಿದೆ. ಗಿಡ ಗಂಟಿಗಳೇ ವ್ಯಾಪಿಸಿ ಇದು ಉದ್ಯಾನವನ ಆಗಿತ್ತೇ? ಎಂದು ಪ್ರಶ್ನಿಸುವ ಮಾದರಿಯಲ್ಲಿದೆ. ಮುಖ್ಯರಸ್ತೆಗೆ ತಾಗಿಕೊಂಡೇ ಇರುವ ಉದ್ಯಾನವನ ನಿರ್ವಹಣೆ ಬಗ್ಗೆ ಪಾಲಿಕೆಯ ನಿರ್ಲಕ್ಷéದ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸ್ಥಳೀಯರಾದ ಕಿಶೋರ್‌ “ಸುದಿನ’ ಜತೆಗೆ ಮಾತನಾಡಿ, ನಮ್ಮ ಕಾಲಬುಡದಲ್ಲಿಯೇ ಇರುವ ಸಣ್ಣ ಸಣ್ಣ ಉದ್ಯಾನವನವನ್ನೂ ಅಭಿವೃದ್ಧಿ ಮಾಡಲು ಅಥವಾ ನಿರ್ವಹಣೆ ಮಾಡಲು ಸಾಧ್ಯವಾಗದಿದ್ದರೆ ಸ್ಮಾರ್ಟ್‌ ಸಿಟಿ ಎಂಬ ಹೆಸರನ್ನು ಯಾವ ಕಾರಣ ಕ್ಕಾಗಿ ನಾವು ಹೇಳಬೇಕು? ಅತ್ತಾವರ ಕಟ್ಟೆ ಉದ್ಯಾನವನವೇ ಇದಕ್ಕೆ ನೇರ ಸಾಕ್ಷಿ ಎಂದರು.

ಸೂಕ್ತ ಕ್ರಮಕ್ಕೆ ಸೂಚನೆ
ಅತ್ತಾವರದಲ್ಲಿರುವ ಸಣ್ಣ ಉದ್ಯಾನವನ ಅಭಿವೃದ್ಧಿಗೊಳಿಸಿದ ಅನಂತರ ನಿರ್ವಹಣೆ ಇಲ್ಲದೆ ಸಮಸ್ಯೆ ಎದುರಿಸುತ್ತಿತ್ತು. ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿ ಇದರ ನಿರ್ವಹಣೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ಪ್ರೇಮಾನಂದ ಶೆಟ್ಟಿ, ಮೇಯರ್‌, ಮಹಾನಗರ ಪಾಲಿಕೆ

-ದಿನೇಶ್‌ ಇರಾ

Advertisement
Advertisement

Udayavani is now on Telegram. Click here to join our channel and stay updated with the latest news.

Next