ಅಥಣಿ: “”ವೈದ್ಯೋ ನಾರಾಯಣೊ ಹರಿ” ಎಂಬ ಮಾತು ಈಗಲೂ ಪ್ರಚಲಿತದಲ್ಲಿದೆ. ಸಾಕಷ್ಟು ಪ್ರಸಂಗಗಳಲ್ಲಿ ವೈದ್ಯರು ಅನೇಕರಿಗೆ ಪುನರ್ಜನ್ಮ ನೀಡಿದ್ದಾರೆ. ಎಷ್ಟೋ ಜನರ ಕಷ್ಟಗಳಿಗೆ ಸ್ಪಂದಿಸಿದ್ದಾರೆ. ಆದರೆ ಅಥಣಿ ತಾಲೂಕು ಆಸ್ಪತ್ರೆಯಲ್ಲಿ ಇದಕ್ಕೆ ತದ್ವಿರುದ್ಧವಾಗಿ ವ್ಯವಸ್ಥೆ ಇದೆ.
ಕೋವಿಡ್ ಹಾವಳಿಯ ಈ ಸಂಕಷ್ಟ ಕಾಲದಲ್ಲಿ ಸರಕಾರಿ ಆಸ್ಪತ್ರೆಗಳನ್ನೇ ಅವಲಂಬಿಸಿರುವ ಪ್ರತಿಯೊಬ್ಬರಿಂದಲೂ ಚಿಕಿತ್ಸೆಗಾಗಿ ಹಣ ಪಡೆಯುತ್ತಿದ್ದಾರೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಅಥಣಿ ತಾಲೂಕಾ ಆಸ್ಪತ್ರೆಯಲ್ಲಿ ಹಣ ನೀಡದಿದ್ದರೆ ರೋಗಿಗಳನ್ನು ಮಾತನಾಡಿಸುವುದೇ ಇಲ್ಲ. ಇನ್ನು ಸಮರ್ಪಕ ಚಿಕಿತ್ಸೆ ಕನಸಿನ ಮಾತಾಗಿದೆ. ಒಳಗಡೆ ಹೋದರೆ ಸಾಕು, ಖಾಸಗಿ ಆಸ್ಪತ್ರೆಗಳಂತೆ ಇಲ್ಲಿಯೂ ಪ್ರತಿಯೊಂದು ಚಿಕಿತ್ಸೆಗೂ ಇಂತಿಷ್ಟು ಹಣ ನೀಡಬೇಕು ಎಂದು ದರ ನಿಗದಿ ಮಾಡಲಾಗಿದೆ. ದುಡ್ಡು ಕೊಟ್ಟರಷ್ಟೇ ಚಿಕಿತ್ಸೆ ಮಾಡಲಾಗುತ್ತಿದೆ ಎಂಬ ದೂರುಗಳು ಸಾಮಾನ್ಯವಾಗಿವೆ.
ಹೆರಿಗೆ ಸಮಯದಲ್ಲಿ ಸಿಜೇರಿಯನ್ ಮಾಡಿದರೆ ಸುಮಾರು 6ರಿಂದ 7 ಸಾವಿರ ರೂಪಾಯಿ ಕೊಡಬೇಕಾದ ಪರಿಸ್ಥಿತಿ ಇದೆ. ಸಾಮಾನ್ಯ ಹೆರಿಗೆಗೂ ಕೂಡ ಕನಿಷ್ಟ ಒಂದರಿಂದ ಎರಡು ಸಾವಿರ ರೂಪಾಯಿ ತೆರಬೇಕು. ಹಣ ಪಡೆಯದೇ ಯಾವುದೇ ಹೆರಿಗೆ ಸೇವೆ ಸಿಗುವುದಿಲ್ಲ. ಈ ಕುರಿತು ಮೇಲಾಧಿಕಾರಿಗಳಿಗೆ ಸಾಕಷ್ಟು ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಸಾರ್ವಜನಿಕರ ಆರೋಪ.
ವೈದ್ಯರು-ಸಿಬ್ಬಂದಿ ಜಗಳ: ಇಲ್ಲಿಯ ಸಿಬ್ಬಂದಿ ಮತ್ತು ವೈದ್ಯರ ನಡುವೆ ಸಮನ್ವಯತೆ ಇಲ್ಲ. ಇದರಿಂದ ನಿತ್ಯವೂ ಸಿಬ್ಬಂದಿ ಮತ್ತು ವೈದ್ಯರ ನಡುವೆ ಜಗಳಗಳು ನಡೆಯುತ್ತಲೇ ಇವೆ. ರೋಗಿಗಳ ವಾರ್ಡ್ ಬಳಿಯೇ ವೈದ್ಯರು ಮತ್ತು ಸಿಬ್ಬಂದಿ ಹಲವು ಬಾರಿ ಕಿತ್ತಾಡಿಕೊಂಡಿದ್ದಾರೆ. ವೈದ್ಯರು ಸರಿಯಾದ ಸಮಯಕ್ಕೆ ಬರದೇ ಇರುವುದನ್ನು ಪ್ರಶ್ನಿಸಿದ ಸಿಬ್ಬಂದಿಯೊಬ್ಬರಿಗೆ ಸಾರ್ವಜನಿಕರ ಎದುರೇ ವೈದ್ಯರು ಬೆದರಿಕೆ ಹಾಕಿದ್ದಲ್ಲದೆ ಕೈ ಕೈ ಮಿಲಾಯಿಸಿರುವ ಘಟನೆಯೂ ನಡೆದಿದೆ. ಇದರಿಂದ ತೊಂದರೆ ಅನುಭವಿಸುತ್ತಿರುವವರು ಆಸ್ಪತ್ರೆಗೆ ಬರುವ ರೋಗಿಗಳಾಗಿದ್ದಾರೆ. ಸರಕಾರಿ ಆಸ್ಪತ್ರೆಯ ದುರವಸ್ಥೆಗೆ ಬೇಸತ್ತ ಸ್ಥಳೀಯರು ಅನಾಮಧೇಯ ವ್ಯಕ್ತಿಯ ಹೆಸರಿನಲ್ಲಿ, ನಮಗೆ ಇಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ-ಸಿಗುವ ಭರವಸೆಯೂ ಇಲ್ಲ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆದರೆ ಇದುವರೆಗೆ ಯಾವುದೇ ಕ್ರಮ ಆಗಿಲ್ಲ. ಇನ್ನು 108 ಆಂಬುಲೆನ್ಸ್ ಸೇವೆಗೂ ಇಲ್ಲಿ ಹಣ ಕೊಡಬೇಕು. ಇಲ್ಲದಿದ್ದರೆ ರೋಗಿ ಮೃತಪಟ್ಟರೂ ಆಂಬುಲೆನ್ಸ್ ಬರುವುದಿಲ್ಲ. ಇದರಿಂದ ಬೇಸತ್ತು ಸ್ವಪ್ರೇರಣೆಯಿಂದ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಿ ಎಂದು ನೊಂದ ರೋಗಿಯೊಬ್ಬ ಪೊಲೀಸರಿಗೆ ನೀಡಿದ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆಗಳಿಗಾಗಿ ಹಣ ಪಡೆಯಲಾಗುತ್ತಿದೆ ಎಂಬ ವಿಷಯವಾಗಿ ಇದುವರೆಗೆ ತಮಗೆ ಯಾರೂ ಲಿಖೀತವಾಗಿ ದೂರು ನೀಡಿಲ್ಲ, ಹಣ ಕೊಟ್ಟವರು ಲಿಖೀತವಾಗಿ ದೂರು ನೀಡಿದರೆ ಅದರ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. –
ಡಾ| ಚನಗೌಡ ಪಾಟೀಲ ತಾಲೂಕು ವೈದ್ಯಾಧಿಕಾರಿ
ಇಲ್ಲಿ ಮಾನವೀಯತೆಗಿಂತ ಹಣಕ್ಕೆ ಹೆಚ್ಚು ಬೆಲೆ ಇದೆ. ಸ್ವತಃ ನನ್ನ ಸಹೋದರಿಯ ಹೆರಿಗೆಗಾಗಿ ನಾನೇ ಇಲ್ಲಿ ಮೂರು ಸಾವಿರ ರೂ. ಕೊಟ್ಟಿದ್ದೇನೆ. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ನನಗೇ ಬೆದರಿಕೆ ಹಾಕಿದ್ದಾರೆ. ಉಡಾಫೆಯ ಮಾತು ಆಡಿದ್ದಾರೆ. ಮೇಲಾಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. –
ಚಿದಾನಂದ ಶೇಗುಣಸಿ ಸಾಮಾಜಿಕ ಕಾರ್ಯಕರ್ತ, ಅಥಣಿ
–ಸಂತೋಷ ರಾ. ಬಡಕಂಬಿ