Advertisement
‘ನನಗೆ ಇಂಥ ವಾಯ್ಸ ಇದೆ ಅಂತ ಗೊತ್ತೇ ಇರಲಿಲ್ಲ. ಈ ಮೊದಲೇ ಗೊತ್ತಿದ್ದರೆ, ಆ್ಯಕ್ಟಿಂಗ್ ಮಾಡೋದು ಬಿಟ್ಟು ವಾಯ್ಸನ್ನೇ ದುಡಿಸಿಕೊಳ್ಳುತ್ತಿದ್ದೆ – ನಟ ಅಮಿತಾಭ್ ಬಚ್ಚನ್ ತನ್ನ ಹುಟ್ಟು ಹಬ್ಬದ ದಿನ ಹೀಗೆ ಹೇಳಿದಾಗ ಎಲ್ಲರೂ ಕಂಗಾಲು. ಅಮಿತಾಭ್‌ಗೆ ಆ್ಯಕ್ಟಿಂಗ್ ಮೇಲಿದ್ದ ಗಮನ ದನಿಯ ಕಡೆ ನೆಟ್ಟಿರಲಿಲ್ಲ. ತನ್ನಲ್ಲಿ ಇಂಥ ಅತ್ಯದ್ಭುತವಾದ ಚುಂಬಕ ದನಿಯೊಂದು ಇದೆ ಎಂಬುದೂ ಅವರಿಗೆ ತಿಳಿದಿರಲಿಲ್ಲ. ತಿಳಿಯುವ ಹೊತ್ತಿಗೆ ವಯಸ್ಸು 70 ದಾಟಿತ್ತು. ಈ ಮೊದಲೂ ಅವರು ತಿಳಿಯೋದಕ್ಕೊ ಹೋಗಿರಲಿಲ್ಲ. ನಿರ್ಮಾಪಕರು ಪಾತ್ರ ಕೊಡ್ತಾ ಇದ್ದರು. ಇವರು ಅದನ್ನು ಮಾಡ್ತಾ ಇದ್ದರು. ಪಾತ್ರ ಚೆನ್ನಾಗಿದೆಯಾ ಅಂತ ಮಾತ್ರ ನೋಡುತ್ತಿದ್ದರೇ ಹೊರತು, ತನ್ನೊಳಗಿನ ತುಡಿತವನ್ನು ಗಮನಿಸುತ್ತಿರಲಿಲ್ಲ.
Related Articles
ಇವರನ್ನೆಲ್ಲ ಬಿಡಿ, ನಮ್ಮನ್ನು ನಾವು ಯಾವತ್ತಾದರೂ ನೋಡಿಕೊಂಡಿದ್ದೇವಾ ಹೇಳಿ? ನಮ್ಮ ಮನಸ್ಸಿನ, ಬೇಕು ಬೇಡಗಳನ್ನು ಯಾವತ್ತಾದರೂ ಕುಂತು ಆಲಿಸಿದ್ದೇವೆಯೇ? ನಮಗೆ ಯಾವ ವಿಷಯದಲ್ಲಿ ಆಸಕ್ತಿ ಇದೆ ಅನ್ನೋದನ್ನು ತಿಳಿದಿದ್ದೇವೆಯೇ? ಬಿಲ್ಕುಲ್ ಇಲ್ಲ. ನಾವು ಏನು ಮಾಡುತ್ತಿದ್ದೇವೆ ಅಂದರೆ, ಪಕ್ಕದಮನೆ ಪದ್ಮ ಫಸ್ಟ್ ರ್‍ಯಾಂಕ್ ಬಂದಳು, ನಾನೂ ರ್‍ಯಾಂಕ್ ಬರಬೇಕು. ಮೂಲೆ ಮನೆ ಕೃಷ್ಣ ಬಾಕ್ಸಿಂಗ್‌ನಲ್ಲಿ ವಲ್ಡ್ರ್ ಫೇಮಸ್ ಆದ, ನಾನು ಕೂಡ ಅದನ್ನೇ ಮಾಡಬೇಕು.. ಹೀಗೆ, ಬೇರೆಯವರ ಬೇಕುಗಳನ್ನು ನೋಡುತ್ತಾ ನಾವು ಅದೇ ಆಗುತ್ತಿದ್ದೇವೆಯೇ ಹೊರತು, ನಮ್ಮೊಳಗಿನ ಇಷ್ಟಗಳಿಗೆ ಕ್ಯಾರೇ ಅನ್ನುತ್ತಿಲ್ಲ. ಯಾಕಂದರೆ, ನಾವು ಅಂತರಾತ್ಮದ ಮಾತನ್ನು ಯಾವತ್ತೂ ಕೇಳದೇ ಇರುವುದು. ಹಿಂದೆ ಹಿರಿಯರು, ‘ಮನಸ್ಸು ಹೇಳ್ದಂಗೆ ಕೇಳು, ಬುದ್ದಿ ಹೇಳ್ದಂಗೆ ಕೇಳಬೇಡ’ ಅನ್ನೋರು. ಅದರ ಅರ್ಥವೂ ಇದೇನೇ. ಮನಸ್ಸು ಹೇಳ್ದಂಗೆ ಕೇಳ್ಳೋದು ಒಂದು ರೀತಿ ಕಲೆ. ಇದನ್ನೇ ಜಗ್ಗಿ ವಾಸುದೇವ್ ಇನ್ನರ್ ಎಂಜಿನಿಯರಿಂಗ್ ಅಂತ ಕರೆದಿರುವುದು. ಇದು ಬೇಕು, ಅದು ಬೇಡ, ಅದು ಸರಿ, ಇದು ತಪ್ಪು, ನಮ್ಮ ತಾಕತ್ತು ಏನು, ಇಲ್ಲದ ತಾಕತ್ತು ಗಳಿಸಲು ಏನು ಮಾಡಬೇಕು, ಇರುವ ತಾಕತ್ತನ್ನು ಬಳಸಿಕೊಳ್ಳಲು ಏನು ಮಾಡಬೇಕು… ಹೀಗೆ, ನಮ್ಮೊಳಗೆ ನಾವು ಇಳಿದು ನಮ್ಮ ಸಾಮರ್ಥ್ಯಗಳನ್ನು ಗುರುತಿಸುವ ಪರಿ. ದುರಂತ ಎಂದರೆ, ಈ ಕಾಲಘಟ್ಟದಲ್ಲಿ ನಮ್ಮ ಬದುಕು ನಮ್ಮ ಸ್ವಂತ ಆಸೆ, ಅಗತ್ಯಗಳ ಮೇಲೆ ನಿಂತಿಲ್ಲ. ನೀವು, ಮನೆಕಟ್ಟಿದ್ದೀರಾದರೆ ಪಕ್ಕದ ಮನೆ ಅಥವಾ ಬೀದಿ ಅಂಚಿನಲ್ಲಿರೋ ಶ್ರೀಮಂತರ ಮನೆಯನ್ನು ನೋಡಿ, ಕುರುಬಿ ಅದೇ ಥರ ಇರುವುದೇ ನನಗೂ ಬೇಕು ಅಂತ ಕಟ್ಟಿರುತ್ತೀರಿ.
Advertisement
ಹಾಕಿಕೊಳ್ಳುವ ಬಟ್ಟೆಗಳಂತೂ ಕಾಲೇಜಿನ ಗರ್ಲ್ಫ್ರೆಂಡನ್ನು ಸೆಳೆಯಲೋ, ಎದುರು ಮನೆಯ ಲಕ್ಷ್ಮೀದೇವಿಯನ್ನು ಮೆಚ್ಚಿಸಲೋ, ಯಾರೂ ಇಲ್ಲವಾದರೆ ಪ್ರಪಂಚವೇ ನನ್ನ ಡ್ರೆಸ್ ನೋಡಿ ತಲೆದೂಗಬೇಕು ಅನ್ನೋದಕ್ಕಾಗಿಯೇ ಧರಿಸುತ್ತೀರಿ. ಹೋಗಲಿ, ಆ ಬಟ್ಟೆ ಬರೆಗಳನ್ನು ಕೊಳ್ಳುವುದು ತನ್ನಿಚ್ಛೆಯಂತೆಯೇ ಅಂದರೆ ಅದೂ ಇಲ್ಲ. ಬೇರೆಯವರು ಯಾವ ರೀತಿ ಬಟ್ಟೆ ಧರಿಸಿದ್ದಾರೆ, ಟೈ ಕಟ್ಟಿದ್ದಾರೆ ಅಂತ ನೋಡಿಯೇ ಕೊಳ್ಳುವುದು. ಎಷ್ಟೋ ಸಲ, ನಮ್ಮ ಮನೆಗೆ ಕಾರು ಬೇಕೋ ಬೇಡವೋ ಗೊತ್ತಿಲ್ಲ.ಆದರೆ, ಅವರು ಕೊಂಡಿದ್ದಾರೆ. ಅವರಿಗಿಂತ ನಾವೇನು ಕಮ್ಮಿ ಅಂತ ಯೋಚಿಸಿಯೇ ಕೊಂಡಿರುತ್ತೇವೆ. ಹೀಗೆ, ನಮ್ಮ ಬದುಕಿನ ನಿಜವಾದಆಸೆ, ನಿರೀಕ್ಷೆಗಳು ಬೇರೆಯವರ ಬದುಕಿನಿಂದ ಪ್ರೇರಿತವಾಗಿರುವುದೇ ಆಗಿರುತ್ತದೆ. ನಾವು ಪರರ ಬದುಕನ್ನು ನೋಡುತ್ತಲೇ ಬದುಕುವುದರಿಂದ ನಮ್ಮೊಳಗಿನ ತಾಕತ್ತು ನಮಗೆ ಕಾಣುವುದಾದರೂ ಹೇಗೆ?ಕೇಳದ ಮನಸಿನ ಕಳವಳ
ಮುಖ್ಯವಾಗಿ, ಇಂಥ ಹೋಲಿಕಾ ಮನೋಭಾವನೆ ನಮ್ಮೊಳಗೆ ಒಂದು ರೀತಿ ಕೀಳು ಮನೋಭಾವಉಂಟುಮಾಡುತ್ತದೆ. ನಮಗೆ ಏನೂ ಇಲ್ಲ, ಅವರಿಗೆ ಎಲ್ಲಾ ಇದೆ ಅನ್ನೋ ಖನ್ನತೆಗೆ ಕಾರಣವಾಗುತ್ತದೆ. ಅವಳು ಫಸ್ಟ್ ರ್‍ಯಾಂಕ್ ಬಂದಿದ್ದಾಳೆ. ನನಗೆ ಆ ಭಾಗ್ಯ ಸಿಗಲಿಲ್ಲ ಅಂತಲೇ ಕೀಳು ಮನೋಭಾವ ಮೂಡುತ್ತದೆ. ಹೀಗಾದಾಗ, ನಮ್ಮೊಳಗಿರುವ ನಮ್ಮ ತನವನ್ನು ನೋಡಿಕೊಳ್ಳುವುದಕ್ಕೆ ಆಗುವುದಿಲ್ಲ. ಈಗಿನ ತಲೆಮಾರಿನ ವಿದ್ಯಾರ್ಥಿಗಳ ಬದುಕನ್ನು ಇಣುಕಿ. ಅವರೂ ಕೂಡ ಪಕ್ಕದ ಮನೆಯ ಕನ್ನಡಿಯಲ್ಲಿಯೇ ಮುಖ ತೀಡುವುದು. ಅದಕ್ಕೇ ಎಂ.ಎಸ್. ಸಿ ಮಾಡಿದವ ಅಡುಗೆ ಕೆಲಸ ಮಾಡುತ್ತಿರುತ್ತಾನೆ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಪೂರೈಸಿದವ ಕಾಲ್ಸೆಂಟರ್‌ನಲ್ಲಿ ರಾತ್ರಿ ಪಾಳಿಯಲ್ಲಿ ದುಡಿಯುತ್ತಿರುತ್ತಾನೆ. ಹೀಗೆ, ಇವರು ಪಡೆದುಕೊಂಡ ಪದವಿಗೂ, ಮಾಡುವ ಕೆಲಸಕ್ಕೂ ಸಂಬಂಧವೇ ಇಲ್ಲ. ವರ್ಷಾನುಗಟ್ಟಲೆ, ಲಕ್ಷ ಲಕ್ಷ ಫೀಸು ತೆತ್ತು ವಿದ್ಯಾಭ್ಯಾಸ ಮಾಡಿ, ಆ ನಂತರ ಸಂಬಂಧ ಇಲ್ಲದ ಕೆಲಸದಲ್ಲಿ ತೊಡಗಿಕೊಳ್ಳುವುದೂ ಕೂಡ ನಮ್ಮೊಳಗಿನ ನಮ್ಮನ್ನು ನೋಡಿಕೊಳ್ಳದ ಒಂದು ಪರಿಣಾಮವೇ ಅಂತ ಹೇಳಬೇಕು.
ಎಷ್ಟೋ ಸಲ ನಮ್ಮೊಳಗೆ ಇಂಥ ಕಲೆ ಇದೇ ಅಂತ ತಿಳಿದು, ಅದೇ ಗುರಿಯಾಗುವುದು ಉಂಟು. ಇದಕ್ಕೆ ಉದಾಹರಣೆ ಸಚಿನ್. ಅವರಿಗೆ ಕ್ರಿಕೆಟ್‌ನಲ್ಲಿ ಏನಾದರೂ ಮಾಡಬೇಕು ಅನ್ನೋ ಹುಚ್ಚು ಬಾಲ್ಯದಲ್ಲೇ ಇತ್ತು. ಹಾಗಾಗಿ, ಬೇರೆ ಕಡೆ ಗಮನ ಹರಿಸದೆ ಸದಾ ಬ್ಯಾಟು-ಬಾಲ್ನೊಂದಿಗೆ ಬದುಕಲು ಶುರುಮಾಡಿದರು. ಇದನ್ನು ನೋಡಿದ ಅಣ್ಣ, ಗುರು ಆಚ್ರೇಕರ್ ಬಳಿ ಸೇರಿಸಿದರು. ಆಮೇಲಿನದು ಇತಿಹಾಸ. ಬರೀ ನಮ್ಮನ್ನು ನಾವು ನೋಡಿಕೊಂಡರೆ ಸಾಕೇ ಅನ್ನೋ ಪ್ರಶ್ನೆ ಕೂಡ ಇಲ್ಲಿ ಏಳುತ್ತದೆ. ಇದಕ್ಕೆ ಹೆತ್ತವರ ಪ್ರಯತ್ನವೂ ಬೇಕು.ಮಕ್ಕಳ ಪ್ಲಸ್, ಮೈನಸ್‌ಗಳನ್ನು ಗುರುತಿಸಿ, ಪ್ಲಸ್‌ಗಳಿಗೆ ನೀರು ಪೊರೆಯುವ ಕೆಲಸವನ್ನು ಅವರೂ, ಮಾಡಬೇಕಾಗುತ್ತದೆ. ಆದರೆ, ಇವತ್ತಿನ ಪರಿಸ್ಥಿತಿಯಲ್ಲಿ ಮಕ್ಕಳು ಅವರ ಆಸೆಗಿಂತ, ಹೆತ್ತವರ ಆಸೆಯ ಮೇಲೆ ಬದುಕಿನಬಂಡಿ ನಡೆಸಬೇಕಾದ ಸ್ಥಿತಿ ಇದೆ. ತಲೆಯ ಮೇಲಿರುವ ಆಕಾಶವನ್ನು ನೋಡಿಕೊಳ್ಳಲು ಆಗದವರು ಮನದ ಒಳಗನ್ನಡಿಯಲ್ಲಿ ಮುಖ ನೋಡಿಕೊಳ್ಳುವುದಾದರೂ ಹೇಗೆ?ಡಾ. ರಾಜ್ ಹೇಳಿದ್ದು ಇದೇ..
ವರನಟ ಡಾ. ರಾಜ್‌ಕುಮಾರ್, “ಮನಸ್ಸು ರಾಮನಂತೆ, ಬುದ್ಧಿ ರಾವಣನಂತೆ. ರಾವಣನಿಗೆ ರಾಮನೇ ಬುದ್ಧಿ ಕಲಿಸಬೇಕು’ ಅಂತ ಹೇಳುತ್ತಿದ್ದರು. ಅಂದರೆ, ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಂಡರೆ ರಾವಣನ (ಬುದ್ಧಿಯ) ಆರ್ಭಟ ನಡೆಯುವುದಿಲ್ಲ ಎನ್ನುವುದನ್ನು ರಾಜ್‌ಕುಮಾರ್ ರಾಮಾಯಣಕ್ಕೆ ಹೋಲಿಸಿ ಹೇಳಿದ್ದಾರೆ. ಇದರ ತಾತ್ಪರ್ಯ. ರಾಮನ ಮಾತು ಕೇಳುವುದು ಅಂದರೆ, ನಮ್ಮನ್ನು ನಾವು (ಮನಸ್ಸು) ನೋಡಿಕೊಳ್ಳುವುದು, ಅದರ ಬೇಕು ಬೇಡಗಳನ್ನು ಪಾಲಿಸುವುದು ಅಂತಲೇ ಅರ್ಥ. •ಕಟ್ಟೆ