Advertisement

ಅಜಾತಶತ್ರುವಿಗೆ ನುಡಿನಮನ

02:35 PM Aug 18, 2018 | Team Udayavani |

ಬೆಂಗಳೂರು: ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಚೇರಿಯಲ್ಲಿ ದುಃಖ ಮಡುಗಟ್ಟಿತ್ತು. ಕಚೇರಿ ಎದುರು ವಾಜಪೇಯಿ ಅವರ ಭಾವಚಿತ್ರ ಇರಿಸಿ, ಶ್ರದ್ಧಾಂಜಲಿ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು. ಬೆಳಗಿನಿಂದ ಸಂಜೆವರೆಗೆ ಪೊಲೀಸರು ಸೇರಿದಂತೆ ಸಾವಿರಾರು ಸಾರ್ವಜನಿಕರು ಧೀಮಂತ ನಾಯಕನಿಗೆ ಪುಷ್ಪ ನಮನ ಸಲ್ಲಿಸಿದರು.

Advertisement

ಈ ವೇಳೆ ಮಾತನಾಡಿದ ವಿಧಾನ ಪರಿಷತ್‌ ಮಾಜಿ ಸಭಾಪತಿ ಡಿ.ಎಚ್‌.ಶಂಕರಮೂರ್ತಿ, 1983ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ವಾಜಪೇಯಿ ಬಂದಿದ್ದರು. ಮೊದಲ ಬಾರಿ ಪಕ್ಷ 18 ಸ್ಥಾನಗಳಲ್ಲಿ ಗೆದ್ದಿತ್ತು. ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಿತ್ತು. ಆಗ ರಾಮಕೃಷ್ಣ ಹೆಗಡೆ ಸರ್ಕಾರಕ್ಕೆ ಬೇಷರತ್‌ ಬೆಂಬಲವನ್ನು ವಾಜಪೇಯಿ ಘೋಷಿಸಿದ್ದರು. ನಮಗ್ಯಾರಿಗೂ ಮಂತ್ರಿ ಸ್ಥಾನವೂ ಸಿಗಲಿಲ್ಲ.

ಆದರೆ, ಕಾಂಗ್ರೆಸ್‌ ಅಧಿಕಾರದಿಂದ ದೂರಾಗಿತ್ತು. ಒಡೆದು ಆಳುವ ನೀತಿಯಿಂದ ಅಧಿಕಾರಕ್ಕೆ ಬರುವ ಕಾಂಗ್ರೆಸ್‌ ತಂತ್ರ ಈಡೇರಿಲ್ಲ ಎಂದು ನಮ್ಮೊಂದಿಗೆ ವಾಜಪೇಯಿ ಹೇಳಿಕೊಂಡಿದ್ದರು ಎಂದು ವಿವರಿಸಿದರು. ವಾಜಪೇಯಿ ಪರಿಶ್ರಮದಿಂದ ಬಿಜೆಪಿ ಇಷ್ಟು ದೊಡ್ಡ ಪಕ್ಷವಾಗಿ ಬೆಳೆದಿದೆ. ಅವರು ರಾಜಕಾರಣಿ ಆಗದೇ ಇದ್ದಿದ್ದರೆ ರಾಷ್ಟ್ರದ ಶ್ರೇಷ್ಠ ಕವಿ ಅಥವಾ ಪತ್ರಕರ್ತ ಆಗುತ್ತಿದ್ದರು. ಆತ್ಮೀಯತೆ, ತನ್ಮಯತೆ, ಕಠೊರತೆ ಎಲ್ಲವೂ ಅವರಲ್ಲಿತ್ತು. ಅವರ ಜೀವನವೇ ಕಾರ್ಯಕರ್ತರಿಗೆ ದಾರಿದೀಪ ಎಂದರು.

ಬಿಜೆಪಿ ಹಿರಿಯ ಮುಖಂಡ ರಾಮಚಂದ್ರೇಗೌಡ ಮಾತನಾಡಿ, 1970ರ ಡಿಸೆಂಬರ್‌ 8ರಂದು ಮೊದಲು ಬಾರಿ ವಾಜಪೇಯಿ ಜತೆ ಮಾತನಾಡಿದ್ದೆ. ಜನಸಂಘದ ಕಾಲದಲ್ಲಿ ಕಾರ್ಪೊರೇಷನ್‌ ಚುನಾವಣೆ ಕುರಿತ ಸಭೆ ಅದಾಗಿತ್ತು. ನಾನು ಗೆಲ್ಲುತ್ತೇನೆ ಎಂದು ಅಂದು ವಾಜಪೇಯಿ ಹೇಳಿದ್ದರು. ಅದರಂತೆ ನಾನು ಗೆದ್ದೆ. ವಾಜಪೇಯಿಗೆ ವಾಜಪೇಯಿಯೇ ಸಾಟಿ. ಬೇರೆಯವರನ್ನು ಅವರೊಂದಿಗೆ ಹೋಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಕಲಬುರಗಿ ಚುನಾವಣೆ ವೇಳೆ ಪ್ರತಿ ತಾಲೂಕಿಗೂ ವಾಜಪೇಯಿ ಹೋಗಿದ್ದರು. 1979ರಲ್ಲಿ ಪಕ್ಷದಿಂದ ಕೇವಲ ಇಬ್ಬರು ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದರು. ಸ್ವತಃ ಪಾಜಪೇಯಿ ಸೋತಿದ್ದರು. ಆಗ ಭದ್ರಾವತಿಯಲ್ಲಿ ನಮ್ಮ ಕಾರ್ಯಕರ್ತ ಲಕ್ಷ್ಮೀನಾರಾಯಣ ಆತ್ಮಹತ್ಯೆ ಮಾಡಿಕೊಂಡಿದ್ದ. ಕಾರ್ಯಕರ್ತನ ಕುಟುಂಬಕ್ಕೆ ಸಾಂತ್ವನ ಹೇಳಲು ವಾಜಪೇಯಿ ಅವರು ದೆಹಲಿಯಿಂದ ಬಂದಿದ್ದರು ಎಂಬುದನ್ನು ನೆನಪಿಸಿಕೊಂಡರು.

Advertisement

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಮಾತನಾಡಿ, ವಾಜಪೇಯಿ ದೇಶಕ್ಕೆ ಮಾತ್ರವಲ್ಲ ವಿಶ್ವಕ್ಕೆ ರತ್ನವಾಗಿದ್ದರು. ಎಲ್ಲರ ಸ್ಪೂರ್ತಿ, ಪ್ರೇರಣೆ, ವೈಚಾರಿಕ ಸ್ತಂಬದಂತಿದ್ದ ದೀಪ ಆರಿಹೋಗಿದೆ. ಆದರೆ ಅವರು ಬಿಟ್ಟುಹೋಗಿರುವ ಕಾರ್ಯ ಅಜರಾಮರ. ವಾಜಪೇಯಿ ಕಟ್ಟಿದ ಪಕ್ಷದಲ್ಲಿ ನಾವು ಕಾರ್ಯಕರ್ತರಾಗಿದ್ದೇವೆ ಎನ್ನುವುದೇ ಪುಣ್ಯ. ಅವರ ಜೀವನ ಆದರ್ಶವನ್ನು ಪಾಲಿಸುವುದೇ ನಿಜವಾದ ಶ್ರದ್ಧಾಂಜಲಿ ಎಂದು ಕಾರ್ಯಕರ್ತರಿಗೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next