Advertisement

ಅಟಲ್‌ ಆದರ್ಶಗಳು ಕಾರ್ಯಕರ್ತರಿಗೆ ದಾರಿದೀಪ: ನಳಿನ್‌ ಕುಮಾರ್‌ ಕಟೀಲು

01:41 AM Dec 26, 2022 | Team Udayavani |

ಉಡುಪಿ: ಅಟಲ್‌ ಬಿಹಾರಿ ವಾಜಪೇಯಿ ಅವರು ಸಂಘಟನೆ ಮೂಲಕ ಪಕ್ಷವನ್ನು ಬೆಳೆಸಿದ್ದಾರೆ. ಪಕ್ಷದ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಅವರ ಆದರ್ಶಗಳು ಎಲ್ಲ ಕಾರ್ಯಕರ್ತರಿಗೆ ದಾರಿದೀಪವಾಗಬೇಕು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ರಾಜ್ಯದಲ್ಲಿ 150 ಸ್ಥಾನ ಸಿಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ಎಂಜಿಎಂ ಮೈದಾನದಲ್ಲಿ ಕೀರ್ತಿ ಶೇಷ ಡಾ| ವಿ.ಎಸ್‌. ಆಚಾರ್ಯ ವೇದಿಕೆಯಲ್ಲಿ ರವಿವಾರ ನಡೆದ ಬಿಜೆಪಿ ಬೂತ್‌ ಸಂಗಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸಂಘಟನ ಕಾರ್ಯದರ್ಶಿ ರಾಜೇಶ್‌ ಜಿ.ವಿ. ಮಾತನಾಡಿ, 2023ಕ್ಕೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೆ ತರುತ್ತೇವೆ. ಈ ದೇಶದಲ್ಲಿ ಎಲ್ಲರಿಗೂ ಸಮಾನ ಕಾಯ್ದೆಗಳಿರಬೇಕು. ಈ ಬಾರಿಯ ಚುನಾವಣೆ ಧರ್ಮ, ಅಧರ್ಮಗಳ ನಡುವಿನ ಯುದ್ಧ ಎಂದರು.

ಬಿಜೆಪಿ 2019ರಲ್ಲಿ ಬಿ.ಎಸ್‌. ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರಕಾರ ಮೋದಿಯವರ ಕಿಸಾನ್‌ ಸಮ್ಮಾನ್‌ ಯೋಜನೆಯನ್ನು 40 ಲಕ್ಷಕ್ಕೂ ಹೆಚ್ಚು ರೈತರಿಗೆ ತಲುಪುವಂತೆ ಮಾಡಿದ್ದಾರೆ. ಆದರೆ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯನವರ ಸರಕಾರ ಕಿಸಾನ್‌ ಸಮ್ಮಾನ್‌ ಯೋಜನೆಗೆ ರಾಜ್ಯದ ರೈತರ ಬಗ್ಗೆ ಕೇಂದ್ರಕ್ಕೆ ಸರಿಯಾಗಿ ಮಾಹಿತಿ ನೀಡದೆ ಕೇವಲ 17 ಜನರಿಗೆ ತಲುಪುವಂತೆ ಮಾಡಿ, ರಾಜ್ಯದ ರೈತರಿಗೆ ಮೋಸ ಮಾಡಿದ್ದಾರೆ ಎಂದರು.

ಬೂತ್‌ ಅಭಿಯಾನ
ರಾಜ್ಯಾದ್ಯಂತ ಜ. 2ರಿಂದ ಜ. 12ರ ವರೆಗೆ ಬೂತ್‌ ಅಭಿಯಾನ ನಡೆಯುತ್ತಿದ್ದು, ವಾಟ್ಸ್‌ಆ್ಯಪ್‌ ಗ್ರೂಪ್‌ ಮಾಡಬೇಕು. ಆ ಗ್ರೂಪ್‌ನಲ್ಲಿ ತಮ್ಮ ಬೂತ್‌ನಲ್ಲಿ ನಡೆಯುವ ಉತ್ತಮ ಕೆಲಸಗಳು, ಕೇಂದ್ರ ಹಾಗೂ ರಾಜ್ಯ ಸರಕಾರದ ಉತ್ತಮ ಕೆಲಸಗಳ ಮಾಹಿತಿ ಹಂಚಿಕೊಳ್ಳಬೇಕು. ಮನೆ ಮನೆಯಲ್ಲಿ ಭಾಜಪ ಧ್ವಜ ಹಾರಿಸಬೇಕು ಎಂದರು.

Advertisement

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಬಿಜೆಪಿ ಸಮಾಜ ರಕ್ಷಣೆಗಾಗಿ ತತ್ವಾದರ್ಶದ ವಿಚಾರದ ಅಡಿಯಲ್ಲಿ ಪಕ್ಷ ಸ್ಥಾಪನೆಯಾಗಿದೆ. ಈ ಬಾರಿ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ ಎಂದರು.

ಶಾಸಕ ಕೆ. ರಘುಪತಿ ಭಟ್‌, ಗ್ರಾಮಾಂತರ ಅಧ್ಯಕ್ಷೆ ವೀಣಾ ನಾಯ್ಕ್ , ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ನಿಕಟಪೂರ್ವ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ವಿಭಾಗ ಸಂಘಟನ ಕಾರ್ಯದರ್ಶಿ ಪ್ರಸಾದ್‌, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕಿದಿಯೂರು ಉದಯ್‌ ಕುಮಾರ್‌ ಶೆಟ್ಟಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್‌, ಉಪಾಧ್ಯಕ್ಷೆ ಲಕ್ಷ್ಮೀ ಮಂಜುಕೊಳ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ ಕಲ್ಮಾಡಿ, ರಾಜ್ಯ ಎಸ್‌ಸಿ ಮೋರ್ಚಾ ಪ್ರ.ಕಾರ್ಯದರ್ಶಿ ದಿನಕರ ಬಾಬು, ಎಸ್‌ಟಿ ಮೋರ್ಚಾ ರಾಜ್ಯ ಪ್ರ. ಕಾರ್ಯದರ್ಶಿ ಉಮೇಶ್‌ ನಾಯ್ಕ್ , ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ, ಸಂಚಾಲಕಿ ರಶ್ಮಿತಾ, ನಗರ ಯುವ ಮೋರ್ಚಾ ಅಧ್ಯಕ್ಷ ರೋಶನ್‌ ಶೆಟ್ಟಿ, ಜಿ.ಪ್ರ. ಕಾರ್ಯದರ್ಶಿ ಕುತ್ಯಾರು ನವೀನ್‌ ಶೆಟ್ಟಿ, ಕಾರ್ಯಕ್ರಮ ಸಂಚಾಲಕ ಗಿರೀಶ್‌ ಅಂಚನ್‌ ಉಪಸ್ಥಿತರಿದ್ದರು.

ನಗರ ಅಧ್ಯಕ್ಷ ಮಹೇಶ್‌ ಠಾಕೂರ್‌ ಸ್ವಾಗತಿಸಿ, ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ಪ್ರಸ್ತಾವನೆಗೈದರು. ಜಿಲ್ಲಾ ವಕ್ತಾರ ರಾಘವೇಂದ್ರ ಕಿಣಿ ನಿರೂಪಿಸಿದರು.

ಕೈಪಿಡಿ ಬಿಡುಗಡೆ
ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯಲಾಯಿತು. ಕೇಂದ್ರ ಮತ್ತು ರಾಜ್ಯ ಸರಕಾರದ ಕೃಷಿ ಸಾಧನೆಯ ಕೈಪಿಡಿಯನ್ನು ಸಚಿವೆ ಶೋಭಾ ಕರಂದ್ಲಾಜೆ ಬಿಡುಗಡೆಗೊಳಿಸಿದರು.

ಪ್ರಮೋದ್‌ ಶಹಬ್ಟಾಸ್‌ಗಿರಿ
ದೇಶದ ಪರಿಸ್ಥಿತಿಗೆ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದ ಅಗತ್ಯವಿದೆ. ಕೋವಿಡ್‌ ಸಂದರ್ಭ ತೆಗೆದುಕೊಂಡ ಅವರ ನಿರ್ಧಾರಗಳು ಶ್ಲಾಘನಾರ್ಹ. ನಾನು ಹಾಗೂ ರಘುಪತಿ ಭಟ್‌ ಅವರು ಕ್ಲಾಸ್‌ಮೇಟ್ಸ್‌. ನಾನು ರಾಜಕೀಯ ಮನೆತನದಿಂದ ಬಂದವನಾದರೂ ರಾಜಕಾರಣಕ್ಕೆ ಭಟ್ಟರಿಗಿಂತ ಮತ್ತೆ ಬಂದದ್ದು. ರಾಜಕಾರಣದ ಚಾಕಚಾಕತ್ಯತೆ ಅವರಲ್ಲಿದೆ. ನಾನು ಪಕ್ಷಕ್ಕೆ ಬಂದು ಬಿಜೆಪಿಗೆ ಶಕ್ತಿ ತುಂಬುವ ಕೆಲಸ ಮಾಡಲಿದ್ದೇನೆ ಎಂದು ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next