Advertisement

ವಾಜಪೇಯಿ ಸ್ಮೃತಿ ಸ್ಥಾಯಿ:  4 ಕಿ.ಮೀ. ಸಾಗಿದ ಯಾತ್ರೆ  

06:00 AM Aug 18, 2018 | |

ಹೊಸದಿಲ್ಲಿ: ಕೋಟ್ಯಂತರ ಜನರ ಹೃದಯ ಸಾಮ್ರಾಟನಾಗಿ ಮೆರೆದ, ಅಪ್ರತಿಮ ನಾಯಕ ಅಟಲ್‌ ಬಿಹಾರಿ ವಾಜಪೇಯಿ ಅವರ ದೇಹ ಪಂಚಭೂತಗಳಲ್ಲಿ ಲೀನವಾದರೂ ಅವರು ದೇಶವಾಸಿಗಳ “ಸ್ಮತಿ’ಯಲ್ಲಿ ಸ್ಥಾಯಿಯಾಗಿ ಉಳಿದರು. ಅಗಲಿದ ನಾಯಕನ ಅಂತಿಮ ದರ್ಶನಕ್ಕಾಗಿ ದಿಲ್ಲಿಗೆ ದೌಡಾಯಿಸಿದ್ದ ಸಾವಿರಾರು ಮಂದಿಯ ಅಶ್ರು ತರ್ಪಣದೊಂದಿಗೆ ಮಾಜಿ ಪ್ರಧಾನಿಯ ಅಂತ್ಯಕ್ರಿಯೆ ಹೊಸದಿಲ್ಲಿಯ ಸ್ಮತಿ ಸ್ಥಳದಲ್ಲಿ ಶುಕ್ರವಾರ ಸಕಲ ಸರಕಾರಿ ಗೌರವಗಳೊಂದಿಗೆ ನಡೆಯಿತು. ಸಾರ್ಥಕ ಬದುಕನ್ನು ಕಂಡ ಕವಿ ಹೃದಯಿಗೆ 21 ಕುಶಾಲು ತೋಪುಗಳನ್ನು ಗೌರವಾರ್ಥವಾಗಿ ಹಾರಿಸುವ ಮೂಲಕ ಅಂತಿಮ ವಿದಾಯ ಹೇಳಲಾಯಿತು.

Advertisement

ಮಹಾತ್ಮ ಗಾಂಧಿ, ಮಾಜಿ ಪ್ರಧಾನಿಗಳಾದ ಲಾಲ್‌ ಬಹದ್ದೂರ್‌ ಶಾಸ್ತ್ರಿ, ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ಸಮಾಧಿಯ ಪಕ್ಕದಲ್ಲೇ ಅಟಲ್‌ ಅವರ ಅಂತಿಮ ಸಂಸ್ಕಾರ ನಡೆಸಲಾಯಿತು. ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ. ಆಡ್ವಾಣಿ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಮಾಜಿ ಪ್ರಧಾನಿ ಡಾ| ಮನಮೋಹನ್‌ ಸಿಂಗ್‌, ಗುಲಾಂ ನಬಿ ಆಜಾದ್‌, ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸಹಿತ ಹಲವಾರು ಗಣ್ಯರು ಹಾಜರಿದ್ದು ಅಂತಿಮ ಗೌರವ ಸಲ್ಲಿಸಿದರು.

ನಾಲ್ಕು ಕಿ.ಮೀ. ಸಾಗಿ ಬಂದ ಯಾತ್ರೆ
ದಿಲ್ಲಿಯ ದೀನ್‌ ದಯಾಳ್‌ ಉಪಾಧ್ಯಾಯ ಮಾರ್ಗದಲ್ಲಿರುವ ಬಿಜೆಪಿ ಕಚೇರಿಯಿಂದ ಅಟಲ್‌ ಪಾರ್ಥಿವ ಶರೀರವನ್ನು ಹೊತ್ತ ತೆರೆದ ವಾಹನದ ಜತೆ ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅಂತ್ಯಕ್ರಿಯೆ ನಡೆದ ಸ್ಮತಿ ಸ್ಥಳದವರೆಗೆ 4 ಕಿ.ಮೀ. ದೂರ ನಡೆದುಕೊಂಡೇ ಬಂದರು. 

ಅಂತ್ಯಸಂಸ್ಕಾರಕ್ಕೆ ಬಂದ ಸಾರ್ಕ್‌ ನಾಯಕರು
“ನೀವು ಸ್ನೇಹಿತರನ್ನು ಬದಲಾಯಿ ಸಬಹುದು; ಆದರೆ ನೆರೆಹೊರೆಯ ವರನ್ನಲ್ಲ’ ಎಂದು 15 ವರ್ಷಗಳ ಹಿಂದೆ ವಾಜಪೇಯಿ ಹೇಳಿದ್ದರು. ಈ ಮಾತು ಬಹಳ ಜನಪ್ರಿಯ ಮತ್ತು ಮೆಚ್ಚುಗೆಯನ್ನೂ ಪಡೆದಿತ್ತು. ಆ ಮಾತನ್ನು ಮನ್ನಿಸಿಯೋ ಎಂಬಂತೆ ಪಾಕಿಸ್ಥಾನ ಸಹಿತ ಸಾರ್ಕ್‌ ರಾಷ್ಟ್ರಗಳ ನಾಯಕರು ಅಟಲ್‌ರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡರು. ಭೂತಾನ್‌ ರಾಜ ಜಿಗೆ ಖೇಸರ್‌ ನಾಮ್‌ಗೆàಲ್‌ ವಾಂಗ್‌ಚುಕ್‌, ಪಾಕಿಸ್ಥಾನದ ಕಾನೂನು ಸಚಿವ ಅಲಿ ಝಫ‌ರ್‌, ನೇಪಾಲದ ವಿದೇಶಾಂಗ ಸಚಿವ ಪ್ರದೀಪ್‌ ಕುಮಾರ್‌ ಗಯಾವಿ, ಶ್ರೀಲಂಕಾದ ವಿದೇಶಾಂಗ ಸಚಿವ ಲಕ್ಷ್ಮಣ ಕಿರಿಯೆಲ್ಲಾ ಭಾಗವಹಿಸಿದ್ದರು. ಅಫ್ಘಾನಿಸ್ಥಾನದ ಮಾಜಿ ಅಧ್ಯಕ್ಷ ಹಮೀದ್‌ ಕಜೈ ವಿಶೇಷವಾಗಿ ಭಾಗವಹಿಸಿದ್ದರು.

ಅಗ್ನಿಸ್ಪರ್ಶ ಮಾಡಿದ ದತ್ತುಪುತ್ರಿ ನಮಿತಾ
“ಅಟಲ್‌ ಬಿಹಾರಿ ವಾಜಪೇಯಿ ಅಮರ್‌ ರಹೇ’ ಎಂಬ ಅಭಿಮಾನಿಗಳ ಘೋಷಣೆ ನಡುವೆಯೇ ದತ್ತು ಪುತ್ರಿ ನಮಿತಾ ಭಟ್ಟಾಚಾರ್ಯ ಅವರು ಸಂಜೆ 5 ಗಂಟೆಗೆ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಈ ಮೂಲಕ ಅಂತ್ಯಕ್ರಿಯೆಯನ್ನು ಪುತ್ರರೇ ಮಾಡಬೇಕೆಂಬ ನಿಯಮ ಇಲ್ಲ ಎಂಬ ಸಂದೇಶವನ್ನೂ ಸಾರಿದರು. ಜತೆಗೆ ಚಿತೆಯ ಹೊರ ಭಾಗದಲ್ಲಿ ಕುಟುಂಬ ಸದಸ್ಯರ ಜತೆಗೆ ಪ್ರದಕ್ಷಿಣೆ ಬಂದರು. ಈ ಸಂದರ್ಭದಲ್ಲಿ ಅವರ ಮೊಮ್ಮಗಳು ನಿಹಾರಿಕಾ ದುಃಖ ತಡೆಯಲಾರದೆ ಕಣ್ಣೀರಾದರು. ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಅಂತಿಮ ಸಂಸ್ಕಾರದ ವಿಧಿವಿಧಾನಗಳು ನಡೆದವು. ಅಂತಿಮ ಸಂಸ್ಕಾರ ನಡೆಸುವ ಮೊದಲು ಪಾರ್ಥಿವ ಶರೀರಕ್ಕೆ ಹೊದಿಸಲಾಗಿದ್ದ ರಾಷ್ಟ್ರಧ್ವಜವನ್ನು ಸರಕಾರದ ವತಿಯಿಂದ ಮೊಮ್ಮಗಳು ನಿಹಾರಿಕಾರಿಗೆ ಹಸ್ತಾಂತರಿಸಲಾಯಿತು.

Advertisement

ಉತ್ತರ ಪ್ರದೇಶದ ಎಲ್ಲ ಜಿಲ್ಲೆಗಳ ನದಿಗಳಲ್ಲಿ ಚಿತಾಭಸ್ಮಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮವನ್ನು ಉತ್ತರ ಪ್ರದೇಶದ ಎಲ್ಲ  75 ಜಿಲ್ಲೆಗಳಲ್ಲಿರುವ ನದಿಗಳಲ್ಲಿ ವಿಸರ್ಜಿಸಲಾಗುತ್ತದೆ. ಈ ಬಗ್ಗೆ ಉತ್ತರ ಪ್ರದೇಶ ಸರಕಾರ ಶುಕ್ರವಾರ ಅಧಿಕೃತವಾಗಿ ಘೋಷಣೆ ಮಾಡಿದೆ. ಮಾಜಿ ಪ್ರಧಾನಿ ವಾಜಪೇಯಿ ಅವರ ಕರ್ಮಭೂಮಿ ಉತ್ತರ ಪ್ರದೇಶ ಆಗಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ. ರಾಜ್ಯದಿಂದ ಐದು ಬಾರಿ ಲೋಕಸಭೆಯನ್ನು ವಾಜಪೇಯಿ ಪ್ರತಿನಿಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next