Advertisement

ದೇಶಾಭಿವೃದ್ಧಿ ಅಟಲ್‌ಬಿಹಾರಿ ವಾಜಪೇಯಿ ಕನಸು

12:05 PM Dec 26, 2018 | |

ಬೆಂಗಳೂರು: ಮಾಜಿ ಪ್ರಧಾನಿ ದಿವಂಗತ ಅಟಲ್‌ ಬಿಹಾರಿ ವಾಜಪೇಯಿ ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಳಿತ ನಡೆಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

Advertisement

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ಮಂಗಳವಾರ ನಗರದ ಚಿಕ್ಕಲಾಲ್‌ಬಾಗ್‌ ಆಟದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಭಾರತವು ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಬೇಕು ಎಂಬ ಕನಸು ಕಂಡಿದ್ದ ವಾಜಪೇಯಿ ಅವರು 1999- 2004ರ ಅವಧಿಯಲ್ಲಿ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದರು. ಅಂದು ಪಕ್ಷಕ್ಕೆ ಉಂಟಾದ ಸೋಲಿನಿಂದಾಗಿ ದೇಶದ ಅಭಿವೃದ್ಧಿಗೆ ಮಾರಕವಾಯಿತು ಎಂದು ತಿಳಿಸಿದರು.

ಸೇನಾ ಸಾಮರ್ಥ: ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಗಡಿ ವಿವಾದ ಮುಂದಿಟ್ಟುಕೊಂಡು ಭಯೋತ್ಪಾದನೆ ಚಟುವಟಿಕೆ ನಡೆಸುತ್ತಿದ್ದ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ್ದರು. ಕಾರ್ಗಿಲ್‌ ಯುದ್ದ ಜಯಿಸುವ ಮೂಲಕ ಭಾರತ ಸೇನಾ ಸಾಮರ್ಥಯ ತೋರಿಸಿಕೊಟ್ಟ ಮಹಾನುಭಾವ ಅವರು. ವಾಜಪೇಯಿ ಅವರು ದೇಶ ಕಂಡ ಮಹಾನ್‌ ನಾಯಕ. ಪ್ರತಿಪಕ್ಷದವರನ್ನೂ ಸಹ ಗೌರವದಿಂದ ನಡೆಸಿಕೊಳ್ಳುತ್ತಿದ್ದ ಅವರ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಿಳಿಸಿದರು.

ಅಟಲ್‌ಜೀ ಅವರು ದೇಶದಲ್ಲಿ ರಸ್ತೆ ಕ್ರಾಂತಿ ಆರಂಭಿಸಿದರು. ಆದರೆ ನಂತರದ ಯುಪಿಎ ಸರ್ಕಾರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯವನ್ನು 10ವರ್ಷದಲ್ಲಿ ಪೂರ್ಣಗೊಳಿಸಲಿಲ್ಲ. ಇದೀಗ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು ಮತ್ತೂಂದು ಕ್ರಾಂತಿ ಆರಂಭಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶಿವಗಂಗೆಯ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ವಾಜಪೇಯಿ ಅವರು ಕೇವಲ ರಾಜಕಾರಣಿಯಾಗಿರದೆ ಮಹಾನ್‌ ವ್ಯಕ್ತಿಯಾಗಿದ್ದರು. ಕರ್ನಾಟಕದ ಬಗ್ಗೆ ಅವರಿಗೆ ಅಪಾರ ಪ್ರೀತಿ, ಗೌರವವಿತ್ತು. ರಾಜ್ಯಕ್ಕೆ ಭೇಟಿ ನೀಡಿದಾಗಲೆಲ್ಲಾ ಕರ್ನಾಟಕಕ್ಕೆ ಸರಸ್ವತಿ ಒಲಿದಿದ್ದಾಳೆ. ಇದು ಸರಸ್ವತಿಯ ಬೀಡು ಎಂದು ಬಣ್ಣಿಸುತ್ತಿದ್ದರು ಎಂದು ಸ್ಮರಿಸಿದರು.

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಚತುಷ್ಪಥ ರಸ್ತೆ ನಿರ್ಮಾಣ ಮಾಡಿದ ದೂರದೃಷ್ಟಿಯುಳ್ಳ ನಾಯಕರಾಗಿದ್ದರು. ಜಾತಿ, ಧರ್ಮಕ್ಕೆ ಸೀಮಿತವಾಗದೆ ಜಾತ್ಯಾತೀತ ತತ್ವದಲ್ಲಿ ನಂಬಿಕೆ ಇಟ್ಟು ದೇಶ ಮುನ್ನಡೆಸಿದ ಅಪರೂಪದ ರಾಜಕಾರಣಿ. ಅಬ್ದುಲ್‌ ಕಲಾಂರಂತಹ ಶ್ರೇಷ್ಠ ವಿಜ್ಞಾನಿಯನ್ನು ಗುರುತಿಸಿ ರಾಷ್ಟ್ರಪತಿಯನ್ನಾಗಿ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅಂತಹ ನಾಯಕರ ಅಗತ್ಯವಿದೆ ಎಂದು ಹೇಳಿದರು. ಪಾಲಿಕೆ ಮಾಜಿ ಸದಸ್ಯ ಎ.ಎಲ್‌.ಶಿವಕುಮಾರ್‌, ಬಿಜೆಪಿ ನಗರ ಅಧ್ಯಕ್ಷ ಪಿ.ಎನ್‌.ಸದಾಶಿವ, ಮುಖಂಡರಾದ ಸುಬ್ಬಣ್ಣ ಇತರರು ಉಪಸ್ಥಿತರಿದ್ದರು.

Advertisement

ನಾನಾ ಕಡೆ ಜನ್ಮ ದಿನ ಆಚರಣೆ: ಬಿಜೆಪಿ ರೈತ ಮೋರ್ಚಾ ನಗರ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ಬಿಜೆಪಿ ಕಚೇರಿಯಲ್ಲಿ ನಡೆದ ಅಟಲ್‌ ಬಿಹಾರಿ ವಾಜಪೇಯಿ ಅವರ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಕಾರ್ಯಾಲಯ ಕಾರ್ಯದರ್ಶಿ ಗಣೇಶ್‌ ಯಾಜಿ, ವಿಧಾನ ಪರಿಷತ್‌ ಸದಸ್ಯೆ ತೇಜಸ್ವಿನಿ ಗೌಡ, ಬಿಜೆಪಿ ನಗರ ಘಟಕದ ಅಧ್ಯಕ್ಷ ಪಿ.ಎನ್‌.ಸದಾಶಿವ, ರೈತ ಮೋರ್ಚಾ ನಗರ ಅಧ್ಯಕ್ಷ ದೊಡ್ಡಯ್ಯ ಇತರರು ಪಾಲ್ಗೊಂಡಿದ್ದರು. ಬಿಜೆಪಿ ನಗರ ಯುವ ಮೋರ್ಚಾ ಅಧ್ಯಕ್ಷ ಸಪ್ತಗಿರಿಗೌಡ ಮತ್ತು ಇತರರು ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ಬೌರಿಂಗ್‌ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next