Advertisement

ಅಟಲ್‌ ಭೂಜಲ ಯೋಜನೆ : ಕೇಂದ್ರದ ಮತ್ತೂಂದು ದೂರದೃಷ್ಟಿಯ ಹೆಜ್ಜೆ

11:22 PM Dec 25, 2019 | sudhir |

ಅಟಲ್‌ ಭೂಜಲ ಯೋಜನೆಯ ಅನುಷ್ಠಾನದಲ್ಲಿ ಜನರ ಸಹಭಾಗಿತ್ವ ಅತ್ಯಂತ ಅವಶ್ಯ. ಸರಕಾರಗಳೂ ಜನರನ್ನು ಯೋಜನೆಯ ಸಹಭಾಗಿಯಾಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಬೇಕು.

Advertisement

ಭೂ ಜಲ ಸಂರಕ್ಷಣೆಯ ಮಹತ್ತರ ಉದ್ದೇಶದೊಂದಿಗೆ ಕೇಂದ್ರ ಸರಕಾರ ಏಳು ರಾಜ್ಯಗಳಲ್ಲಿ “ಅಟಲ್‌ ಭೂಜಲ’ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಮಾಜಿ ಪ್ರಧಾನಿ ದಿ| ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮದಿನವಾದ ಡಿ.25ರಂದು, ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆಗೆ ಹೊಸದಿಲ್ಲಿಯಲ್ಲಿ ಚಾಲನೆ ನೀಡಿದ್ದಾರೆ. ಮಂಗಳವಾರವಷ್ಟೇ ಕೇಂದ್ರ ಸಚಿವ ಸಂಪುಟ ಈ ಯೋಜನೆಗೆ ಒಪ್ಪಿಗೆ ನೀಡಿತ್ತು.

ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್‌, ರಾಜಸ್ಥಾನ, ಹರಿಯಾಣ, ಉತ್ತರ ಪ್ರದೇಶ ರಾಜ್ಯಗಳಲ್ಲಿ 6,000 ಕೋ. ರೂ. ವೆಚ್ಚದಲ್ಲಿ 5 ವರ್ಷಗಳ ಅವಧಿಯಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ. ಒಟ್ಟಾರೆ ವೆಚ್ಚದಲ್ಲಿ ಶೇ.50ರಷ್ಟು ನೆರವನ್ನು ವಿಶ್ವಬ್ಯಾಂಕ್‌ ನೀಡಲಿದೆ. ಈ ರಾಜ್ಯಗಳ ಒಟ್ಟು 78 ಜಿಲ್ಲೆಗಳ 8,350 ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಯೋಜನೆ ಜಾರಿಯಾಗಲಿದೆ. ಕರ್ನಾಟಕದಲ್ಲಿ 14 ಜಿಲ್ಲೆಗಳ 1,199 ಗ್ರಾ.ಪಂ.ಗಳು ಒಳಗೊಂಡಿವೆ.

ಭೂಜಲ ಸಂಪನ್ಮೂಲ ಸಂರಕ್ಷಣೆ, ಅದರ ಸದ್ಬಳಕೆ ಮತ್ತು ಸಮರ್ಪಕ ನಿರ್ವಹಣೆಯ ಉದ್ದೇಶದೊಂದಿಗೆ ಪಂಚಾಯತ್‌ ಮಟ್ಟದಲ್ಲಿ ಸಮುದಾಯಗಳೊಡಗೂಡಿ ಯೋಜನೆಯನ್ನು ಜಾರಿಗೊಳಿಸುವುದು ಸರಕಾರದ ಲೆಕ್ಕಾಚಾರ. ಇದಕ್ಕಾಗಿ ಪಂಚಾಯತ್‌ಗಳಲ್ಲಿ ಜಲ ಬಳಕೆದಾರರ ಸಂಘಗಳ ರಚನೆ, ಅಂತರ್ಜಲ ದತ್ತಾಂಶಗಳ ಸಂಗ್ರಹ, ನಿರ್ವಹಣೆ, ಜನಜಾಗೃತಿ, ನೀರಿನ ಸದ್ಬಳಕೆ ಬಗೆಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಲಾಗುವುದು.

ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ರೈತರಿಗೆ ನೀಡಿದ ಸಲಹೆ ಗಮನಾರ್ಹ. ಕಡಿಮೆ ಪ್ರಮಾಣದ ನೀರು ಬಯಸುವ ಮತ್ತು ಹೆಚ್ಚಿನ ಪ್ರಮಾಣದಲ್ಲಿ ನೀರು ಪೋಲಾಗದ ನೀರಾವರಿ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಇಂದಿನ ಅಗತ್ಯವೂ ಹೌದು. ಅಂತರ್ಜಲ ಕೊರತೆ ದೇಶದ ಒಟ್ಟಾರೆ ಅಭಿವೃದ್ಧಿಯ ಮೇಲೆ ಪರಿಣಾಮ ಬೀರಲಿದೆ ಎಂಬುದನ್ನು ಗಂಭೀರವಾಗಿ ಪರಿಗಣಿಸುವಂತೆಯೂ ಹೇಳಿದ್ದಾರೆ ಮೋದಿ. ಬೃಹತ್‌ ನೀರಾವರಿ ಯೋಜನೆಗಳ ಬದಲಿಗೆ ಕಿರು ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡುವಂತೆ ನೀಡಿದ ಅವರ ಸಲಹೆಯನ್ನು , ಎಲ್ಲ ರಾಜ್ಯಗಳೂ ಪರಿಗಣಿಸಬೇಕಿದೆ.

Advertisement

2024ರ ವೇಳೆಗೆ ಪ್ರತಿ ಮನೆಗೂ ಪೈಪ್‌ಲೈನ್‌ ಮೂಲಕ ನೀರು ಒದಗಿಸುವ “ಜಲ್‌ಜೀವನ್‌ ಮಿಷನ್‌’ನ ಗುರಿ ಸಾಧಿಸಲು “ಅಟಲ್‌ ಭೂಜಲ’ ಯೋಜನೆ ನೆರವಾಗಲಿದೆ ಎಂಬ ಸದಾಶಯ ಕೇಂದ್ರ ಸರಕಾರದ್ದು. ಆದ ಕಾರಣಕ್ಕಾಗಿಯೇ ಮೊದಲ ಹಂತದಲ್ಲಿ ಅಂತರ್ಜಲದ ತೀವ್ರ ಕೊರತೆ ಎದುರಿಸುತ್ತಿರುವ ಪ್ರದೇಶಗಳಲ್ಲಿ “ಅಟಲ್‌ ಭೂಜಲ’ ಯೋಜನೆ ಜಾರಿಗೊಳ್ಳುತ್ತಿದೆ.

ಯೋಜನೆಯ ಉದ್ದೇಶ ಅತ್ಯಂತ ಮಹತ್ವಪೂರ್ಣವಾದುದಾದರೂ ಅನುಷ್ಠಾನದಲ್ಲಿ ಸರಕಾರ ಎಷ್ಟರ ಮಟ್ಟಿಗೆ ಯಶಸ್ಸು ಕಾಣಲಿದೆ ಎಂಬುದು ಸದ್ಯದ ಪ್ರಶ್ನೆ. ಕೆಲವು ದಶಕಗಳಿಂದೀಚೆಗೆ ಅಂತರ್ಜಲ ಕೊರತೆ, ಫ್ಲೋರೈಡ್‌ಯುಕ್ತ ನೀರು, ಬರಿದಾಗುತ್ತಿರುವ ಜಲಮೂಲಗಳ ಬಗ್ಗೆ ಚರ್ಚೆಗಳು ಸಾಕಷ್ಟು ನಡೆದಿವೆ. ಹಲವಾರು ನವನವೀನ ಯೋಜನೆಗಳನ್ನು ಜಾರಿಗೊಳಿಸುವ ಪ್ರಯತ್ನ ನಡೆದರೂ ಯಾವುವೂ ಶಾಶ್ವತ ಪರಿಹಾರವನ್ನು ಒದಗಿಸಿಲ್ಲ.

ರೈತರ ಬದುಕನ್ನು ಹಸನಾಗಿಸುವಲ್ಲಿ ನೀರಿನ ಪಾತ್ರ ಮಹತ್ತರ. ಆದರೆ ವರ್ಷಗಳು ಉರುಳಿದಂತೆಯೇ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಅನಾವೃಷ್ಟಿ ಎದುರಾದರಂತೂ ಇಡೀ ಆರ್ಥಿಕ ವ್ಯವಸ್ಥೆಯ ಬುನಾದಿಯೇ ಅಲುಗಾಡತೊಡಗುತ್ತದೆ. ಕೃಷಿ ಪ್ರಧಾನವಾದ ದೇಶದಲ್ಲಿ ರೈತರು ಸ್ವಾವಲಂಬಿ ಜೀವನವನ್ನು ನಡೆಸುವಂತಾಗಲು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲೇಬೇಕಿದೆ. ವರ್ಷ ಕಳೆದಂತೆ ಹವಾಮಾನ ಬದಲಾವಣೆ ಕಾರಣದಿಂದಾಗಿ ವಾರ್ಷಿಕವಾಗಿ ಸುರಿಯುವ ಮಳೆಯ ಪ್ರಮಾಣದಲ್ಲೂ ಏರುಪೇರಾಗುತ್ತಿದೆ. ಜತೆಗೆ ಮಳೆ ನೀರು ಇಂಗುವಿಕೆ ಪ್ರಮಾಣವೂ ಕುಸಿದಿದೆ. ಇವೆಲ್ಲವೂ ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸಿರುವುದು ಸ್ಪಷ್ಟ.

ಅಷ್ಟು ಮಾತ್ರವಲ್ಲದೆ ಹಲವು ರಾಜ್ಯಗಳಲ್ಲಿ ಜನರಿಗೆ ಶುದ್ಧ ಕುಡಿಯುವ ನೀರೂ ಲಭಿಸುತ್ತಿಲ್ಲ. ಇದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸರಕಾರಗಳು ಇನ್ನೂ ಪೂರ್ಣ ಯಶಸ್ಸು ಪಡೆದಿಲ್ಲ. ಇಂಥ ವಾಸ್ತವದ ಮಧ್ಯೆ ಕೇಂದ್ರ ಸರಕಾರ ಮುಂದಿನ ಐದು ವರ್ಷಗಳಲ್ಲಿ ಗ್ರಾಮೀಣ ಭಾಗದ 15 ಕೋಟಿ ಮನೆಗಳಿಗೆ ಪೈಪ್‌ಲೈನ್‌ ಮೂಲಕ ನೀರು ಪೂರೈಸುವ ಕನಸು ಕಂಡಿದೆ. ಇದು ಈಡೇರಬೇಕೆಂದರೆ ಅಟಲ್‌ ಭೂಜಲ ಯೋಜನೆಯ ಅನುಷ್ಠಾನದಲ್ಲಿ ಜನರ ಸಹಭಾಗಿತ್ವ ಅತ್ಯಂತ ಅವಶ್ಯ. ಸರಕಾರಗಳೂ ಜನರನ್ನು ಯೋಜನೆಯ ಸಹಭಾಗಿಯಾಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ಅಧಿಕಾರಿಗಳ ವಲಯದಲ್ಲಿ ಮತ್ತು ಕಡತಗಳ ಲೆಕ್ಕದಲ್ಲೇ ಯೋಜನೆ ಉಳಿದುಕೊಂಡರೆ ಯಾವುದೇ ಫ‌ಲ ಕೊಡದು. ಜನೋಪಯೋಗಿ ಯೋಜನೆಯ ಅನುಷ್ಠಾನ ಸಂದರ್ಭ ನಿಯಮಗಳ ಅಂಚುಪಟ್ಟಿ ಹಿಡಿದು ನಿಂತರಷ್ಟೇ ಸಾಲದು, ಉದ್ದೇಶಿತ ಗುರಿ ಸಾಧಿಸಲು ಬೇಕಾದ ಹೊಂದಾಣಿಕೆಯೂ ಅಗತ್ಯ. ಇವೆಲ್ಲದರ ಜತೆಗೆ ಪ್ರಯತ್ನಿಸಿದರೆ ಜನರೂ ಇದರೊಳಗೆ ಭಾಗಿಯಾದಾರು. ಜನರಿಗೆ ಸಮಸ್ಯೆಯ ಗಂಭೀರತೆ ತಿಳಿದು ಪರಿಹಾರೋಪಾಯಗಳತ್ತ ಸಾಗಲು ಸಾಧ್ಯವಾದೀತು. ಇದರೊಂದಿಗೆ ಜನತೆ ಸಕ್ರಿಯವಾಗಿ ಕೈಜೋಡಿಸಿದ್ದೇ ಆದಲ್ಲಿ ಸರಕಾರದ ಉದ್ದೇಶ ಈಡೇರುವುದರಲ್ಲಿ ಸಂಶಯವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next