ಶಿವಮೊಗ್ಗ: ಯಾವುದೇ ವಿಷಯವನ್ನಾದರೂ ಅತ್ಯಂತ ಸರಳವಾಗಿ ಮನದಟ್ಟು ಮಾಡುವ ಮೂಲಕ ರಾಜಕೀಯದಲ್ಲಿ ಅತ್ಯುನ್ನತ ತಂತ್ರಗಾರಿಕೆ ಹೊಂದಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕಾಂಗ್ರೆಸ್‌ಗೆ ಪರ್ಯಾಯ
ಪಕ್ಷದ ಆರಂಭಕ್ಕೆ ಭದ್ರ ಅಡಿಪಾಯ ಹಾಕಿದ್ದರು ಎಂದು ಹಿರಿಯ ಪತ್ರಕರ್ತ ಈಶ್ವರ ದೈತೋಟ ಅಭಿಪ್ರಾಯ ಪಟ್ಟರು.
ನಗರದಲ್ಲಿ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ಹಾಗೂ ಪ್ರಸ್ ಟ್ರಸ್ಟ್ ಸಹಯೋಗದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ನುಡಿ ನಮನ ಸಲ್ಲಿಸಿ ಅವರು ಮಾತನಾಡಿದರು.
ಮಾಧ್ಯಮಗಳು ರಾಜಕೀಯ ನಾಯಕರನ್ನು ಟೀಕಿಸುವುದು ಸಾಮಾನ್ಯವಾಗಿದೆ. ಆದರೆ ವಾಜಪೇಯಿ ಅವರ ಜೀವಿತದ ಅವಧಿಯಲ್ಲಿ ಯಾವೊಂದು ಮಾಧ್ಯಮ ಕೂಡ ಅವರ ಬಗ್ಗೆ ಟೀಕೆ ಮಾಡಲಿಲ್ಲ. ಇದು ಅವರ ಸರಳ, ಸಜ್ಜನಿಕೆ ವ್ಯಕ್ತಿತ್ವಕ್ಕೆ ನಿದರ್ಶನವಾಗಿತ್ತು ಎಂದರು.
ಐದು ವರ್ಷ ಪ್ರಧಾನಿ ಆಗಿದ್ದಾಗ ಹಲವು ದೃಢ ಮತ್ತು ಕಠಿಣ ನಿರ್ಧಾರಗಳನ್ನು ಕೈಗೊಂಡರು. ಪಾಕಿಸ್ತಾನ ಜತೆ ಹೊಸ ಸಂಬಂಧ ಬೆಳೆಸಲು ಯತ್ನಿಸಿದರು. ಲಾಹೋರ್‌ಗೆ ಬಸ್ ವ್ಯವಸ್ಥೆ ಕಲ್ಪಿಸಿ ಭದ್ರತೆ ಇಲ್ಲದೆ ಪ್ರಯಾಣ ಬೆಳೆಸಿದರು. ಸಮಾಜದ ಬಗ್ಗೆ ಕಳಕಳಿ ಹೊಂದಿದ್ದಲ್ಲದೆ ದೇಶದ ಅಭಿವೃದ್ಧಿ ಕಲ್ಪನೆಯನ್ನು ಒಳಗೊಂಡಿದ್ದರು. ಅದೇ ಕಾರಣಕ್ಕೆ ಇಂದಿಗೂ ಪಾಕಿಸ್ತಾನದಲ್ಲೂ ವಾಜಪೇಯಿ ಅವರಿಗೆ ರಾಜಕೀಯ ಮತ್ತು ಮಾಧ್ಯಮಗಳಲ್ಲಿ ಅಭಿಮಾನಿಗಳಿದ್ದಾರೆ ಎಂದರು.
ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಮಾತನಾಡಿ, ಮಾಜಿ ಪ್ರಧಾನಿ ವಾಜಪೇಯಿ ದೇಶದ ರಾಜಕೀಯಕ್ಕೆ ಹೊಸ ದಿಕ್ಕನೇ ತೋರಿಸಿದ ಮಹಾನ್ ಮುತ್ಸದ್ಧಿ. ರಾಜಕೀಯಕ್ಕೆ ಬಾರದಿದ್ದರೆ ದೇಶ ಕಂಡ ಧೀಮಂತ ಪತ್ರಕರ್ತ ಅಥವಾ ಕವಿಯೋ ಸಂಗೀತಗಾರರೋ ಆಗುತ್ತಿದ್ದರು. ಜನ್ಮದಿನಕ್ಕೆ ಶುಭಾಶಯ ಕೋರಲು ದೆಹಲಿಗೆ ತೆರಳಿದ್ದ ವೇಳೆ ಅಲ್ಲಿನ ಸಿಬ್ಬಂದಿ ಅನಾರೋಗ್ಯ ನಿಮಿತ್ತ ಭೇಟಿ ಮಾಡಲು ಯಾರೊಂದಿಗೂ ಮಾತನಾಡುವ ಸ್ಥಿತಿಯಲ್ಲಿಲ್ಲ ಎಂದು ನಿರಾಕರಿಸಿದ್ದರು. ಈ ವಿಚಾರ ತಿಳಿದು ಮನಸ್ಸಿಗೆ ನೋವಾಯಿತು ಎಂದರು.
ನೌಕರರ ಸಂಘದ ಕೋಶಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ರಮೇಶ್, ಬ್ರಿಜೇಶ್, ವರ್ಗಿಸ್, ಎಚ್. ಎಲ್. ರಘು, ಶಾಂತರಾಜು ಇತರರಿದ್ದರು.