Advertisement

`ಆಟಕ್ಕುಂಟು ಲೆಕ್ಕಕ್ಕಿಲ್ಲ’ದವರ ಬೆಚ್ಚಿ ಬೀಳಿಸೋ ಮನೋಲೋಕ!

10:55 AM Sep 17, 2019 | Naveen |

ಪ್ರತೀ ಕ್ರೈಂ ನಡೆದಾಗಲೂ ಅದರ ಹಿಂದೆ ಹಲವು ರೀತಿಯ ಕಾರಣಗಳಿರುತ್ತವೆ. ಅವುಗಳು ಗಂಭೀರವಾಗಿಯೂ ಇರುತ್ತವೆ. ಸಿಲ್ಲಿ ಅನ್ನಿಸುವಂತೆಯೂ ಇರುತ್ತವೆ. ಆದರೆ ಇಂಥಾ ಪ್ರತೀ ಕ್ರೈಂ ಗಳ ಹಿಂದೆಯೂ ಮನಸಿಗೆ ಸಂಬಂಧಿಸಿದ ಕಾರಣಗಳಿವೆ ಅನ್ನೋದು ಸೈಕಾಲಜಿಯ ಪ್ರತಿಪಾದನೆ. ಇದು ಸತ್ಯವೂ ಹೌದು. ತೀರಾ ನಾರ್ಮಲ್ ಆಗಿರುವ ಯಾರೇ ಆದರೂ ಕೊಲೆಯಂಥಾ ಬೀಭತ್ಸ ಕೃತ್ಯಗಳಿಗೆ ಕೈ ಹಾಕಲು ಸಾಧ್ಯವೇ ಇಲ್ಲ. ಅಂಥಾದ್ದನ್ನು ಮಾಡುವವರ ಮನಸ್ಥಿತಿಯೇ ಪ್ರತಿಕೂಲವಾಗಿರುತ್ತೆ ಅನ್ನೋದರ ಸುತ್ತಾ ಬಿಚ್ಚಿಕೊಳ್ಳೊವ ಕಥೆ ಹೊಂದಿರುವ ಚಿತ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ.

Advertisement

ರಾಮಚಂದ್ರ ನಿರ್ದೇಶನ ಮಾಡಿರೋ ಈ ಚಿತ್ರ ಈಗಾಗಲೇ ಹಲವಾರು ರೀತಿಯಲ್ಲಿ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಯಶ ಕಂಡಿದೆ. ಕನ್ನಡದಲ್ಲಿ ಈವರೆಗೂ ಸೈಕಾಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಜಾನರಿನ ಒಂದಷ್ಟು ಚಿತ್ರಗಳು ತೆರೆ ಕಂಡಿವೆ. ಆದರೆ ಈ ಮಾದರಿಯ ಸಿನಿಮಾ ಇದೇ ಮೊದಲೆಂಬುದು ಚಿತ್ರತಂಡದ ಭರವಸೆ. ಯಾಕೆಂದರೆ ನಿರ್ದೇಶಕ ರಾಮಚಂದ್ರ ಮನೋವೈಜ್ಞಾನಿಕ ಲೋಕದೊಳಗೆ ಪಾತಾಳಗರಡಿ ಹಾಕಿ ಈ ಕಥೆಯನ್ನು ಸಿದ್ಧಗೊಳಿಸಿದ್ದಾರಂತೆ. ಇಲ್ಲಿನ ಪಾತ್ರಗಳು ಮತ್ತು ಕಥೆ ನಮ್ಮೊಳಗನ್ನು ನಾವೇ ತಡವಿ ನೋಡಿಕೊಳ್ಳುವಂತೆ, ನಾವು ಹೇಳಿಕೊಳ್ಳಲಾರದ ತಳಮಳಗಳು ಪಾತ್ರಗಳಾದಂಥಾ ಭಾವನೆ ಹುಟ್ಟಿಸುವಷ್ಟು ಈ ಸಿನಿಮಾ ಪರಿಣಾಮಕಾರಿಯಾಗಿ ಮೂಡಿ ಬಂದಿದೆಯಂತೆ.

ಸಾಮಾನ್ಯವಾಗಿ ಅದೆಷ್ಟೇ ಆರೋಗ್ಯವಂತರಾಗಿರೋ ಮನುಷ್ಟುರಲ್ಲಿಯೂ ಒಂದಷ್ಟು ಮಾನಸಿಕ ಸಮಸ್ಯೆಗಳು ಇದ್ದೇ ಇರುತ್ತವೆ. ಆ ಪರ್ಸೆಂಟೇಜು ಕೊಂಚ ಹೆಚ್ಚಿರುವವರೂ ಕೂಡಾ ನಮ್ಮೊಡನೆ ನಮ್ಮಂತೆಯೇ ಬದುಕುತ್ತಿರಲೂ ಬಹುದು. ಆದರೆ ಅಂಥವರ ಮಾನಸಿಕ ಸ್ಥಿತಿಯ ಅನಾವರಣವಾಗೋದು ಚಿತ್ರವಿಚಿತ್ರವಾದ ಕ್ರೈಂಗಳು ನಡೆದಾಗಲೇ. ಆ ಕ್ರೈಂಗಳಾದರೂ ಚಿತ್ರವಿಚಿತ್ರವಾಗಿರುತ್ತವೆ. ಎಂಥವರನ್ನಾದರೂ ಬೆಚ್ಚಿಬೀಳಿಸುವಂತಿರುತ್ತವೆ. ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರ ಅಡಿಗಡಿಗೂ ಬೆಚ್ಚಿಬೀಳಿಸುವಂಥಾ ರೋಚಕ ಕಥೆಯನ್ನೊಳಗೊಂಡಿದೆ. ಅದು ಶೀಘ್ರದಲ್ಲಿಯೇ ನಿಮ್ಮೆದುರು ಬಿಚ್ಚಿಕೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next