ನವದೆಹಲಿ: ಕಳೆದ ಆರೇಳು ದಶಕಗಳ ಕಾಲ ಕಾಂಗ್ರೆಸ್ ಪಕ್ಷ ದೇಶದ ಯೋಧರನ್ನು ನಿರ್ಲಕ್ಷಿಸಿತ್ತು. ಆ ಸಂದರ್ಭದಲ್ಲಿ ಮಾಡಿದ್ದ ತಪ್ಪುಗಳನ್ನು ಸರಿಪಡಿಸಲು ತಮ್ಮ ಸರ್ಕಾರ ಅವಿರತವಾಗಿ ಕಾರ್ಯನಿರ್ವಹಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ನವದೆಹಲಿ ಇಂಡಿಯಾ ಗೇಟ್ ಸಮೀಪ ನಿರ್ಮಾಣಗೊಂಡ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಇಂಡಿಯಾ ಗೇಟ್ ಸಮೀಪದಲ್ಲಿ ಸುಮಾರು 40 ಎಕರೆ ಜಾಗದಲ್ಲಿ ಈ ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಾಣಗೊಂಡಿದ್ದು, ದೇಶದ ಮೊದಲ ರಾಷ್ಟ್ರೀಯ ಯುದ್ಧ ಸ್ಮಾರಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಧಾನಿ ಮೋದಿ ಅವರು ದೀಪ ಬೆಳಗಿಸುವ ಮೂಲಕ ಸ್ಮಾರಕವನ್ನು ಉದ್ಘಾಟಿಸಿದರು.
ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರ ನೆನಪಿಗಾಗಿ ಈ ಸ್ಮಾರಕವನ್ನು 176 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. 15 ಅಡಿ ಸ್ತಂಭದ ಮೇಲೆ ಜ್ಯೋತಿಯನ್ನು ಇಡಲಾಗಿದೆ. ಈ ಸ್ಮಾರಕದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧರ ಮಾಹಿತಿ, ಸ್ಮಾರಕ ಇಲ್ಲಿದೆ.
ದೇಶ ಮೊದಲಾ, ಕುಟುಂಬ ಮೊದಲಾ ನೀವೇ ನಿರ್ಧರಿಸಿ; ಮೋದಿ
ರಾಷ್ಟ್ರೀಯ ಯುದ್ಧ ಸ್ಮಾರಕ ಉದ್ಘಾಟನೆ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಮೊದಲು ದೇಶದ ಸೈನಿಕರನ್ನು ಹೇಗೆ ನಡೆಸಿಕೊಳ್ಳಲಾಗಿತ್ತು. ನಿಮಗೆ ಗೊತ್ತಿದೆ..ನಿಮಗಿಂತ ಚೆನ್ನಾಗಿ ನಾನು ಸೈನಿಕರ ಪರ ಕೆಲಸ ಮಾಡಿದ್ದೇನೆ. ಬೋಫೋರ್ಸ್ ನಿಂದ ಹಿಡಿದು ಹೆಲಿಕಾಪ್ಟರ್ ವರೆಗೆ ಎಲ್ಲಾ ತನಿಖೆಗಳನ್ನು ಒಂದೇ ಕುಟುಂಬ ತನಗೆ ಬೇಕಾದಂತೆ ಅಂತ್ಯಗೊಳಿಸಿತ್ತು. ರಫೇಲ್ ಯುದ್ಧ ವಿಮಾನ ಭಾರತಕ್ಕೆ ಬರದಂತೆ ತಡೆಯಲು ಕಾಂಗ್ರೆಸ್ ಹರಸಾಹಸ ಪಟ್ಟಿತ್ತು ಎಂದು ಕಿಡಿಕಾರಿದರು.
ಯಾವಾಗ ದೇಶದ ಆಕಾಶದಲ್ಲಿ ಮೊತ್ತ ಮೊದಲ ರಫೇಲ್ ಯುದ್ಧ ವಿಮಾನ ಹಾರಾಟ ನಡೆಸಿತೋ ಆಗ ಎಲ್ಲರ ಸಂಚು ಕೊನೆಗೊಂಡಿತ್ತು.
ದೇಶ ಮೊದಲಾ, ಕುಟುಂಬ ಮೊದಲಾ ನೀವೇ ನಿರ್ಧರಿಸಿ ಎಂದು ಮೋದಿ ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದಾರೆ.