ನವದೆಹಲಿ: “ಇಡೀ ಜಗತ್ತೇ ಈಗ ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿದೆ. ಈ ಅಸ್ಥಿರತೆಯು ಎಷ್ಟು ಸಮಯ ಮುಂದುವರಿಯಬಹುದು ಎಂದು ಊಹಿಸುವುದು ಕಷ್ಟ. ಹಾಗಾಗಿ, ವ್ಯವಸ್ಥೆಗಳು ಹಾಗೂ ಸನ್ನಿವೇಶಗಳ ಮೇಲಿನ ಅವಲಂಬನೆಯ ವ್ಯೂಹದಿಂದ ಜಾಗತಿಕ ದಕ್ಷಿಣ ರಾಷ್ಟ್ರಗಳು ಪಾರಾಗಬೇಕಾದ ಅಗತ್ಯವಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ವಾಯ್ಸ ಆಫ್ ಗ್ಲೋಬಲ್ ಸೌತ್ (ಜಾಗತಿಕ ದಕ್ಷಿಣ ರಾಷ್ಟ್ರಗಳ) ಶೃಂಗಸಭೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ವರ್ಚುವಲ್ ಆಗಿ ಮಾತನಾಡಿದ ಪ್ರಧಾನಿ ಮೋದಿ, ಆಹಾರ, ಇಂಧನ, ರಸಗೊಬ್ಬರಗಳ ದರ ಏರಿಕೆ ಕುರಿತು ಕಳವಳ ವ್ಯಕ್ತಪಡಿಸಿದರು.
“ಹೊಸ ವರ್ಷದ ಬೆಳಕಿನೊಂದಿಗೆ, ಹೊಸ ಭರವಸೆ, ಹೊಸ ಶಕ್ತಿ ಮೂಡುತ್ತಿರುವಂತೆಯೇ ನಾವಿಂದು ಇಲ್ಲಿ ಸೇರಿದ್ದೇವೆ. ಯುದ್ಧ, ಸಂಘರ್ಷ, ಉಗ್ರವಾದ, ಅಗತ್ಯ ವಸ್ತುಗಳ ದರ ಏರಿಕೆಯನ್ನು ಕಂಡ ಕಷ್ಟಕರ ವರ್ಷವನ್ನು ದಾಟಿ ಬಂದಿದ್ದೇವೆ. ಒಟ್ಟಿನಲ್ಲಿ ಇಡೀ ಜಗತ್ತೇ ಬಿಕ್ಕಟ್ಟಿನಲ್ಲಿದೆ. ಈ ಅಸ್ಥಿರತೆ ಎಲ್ಲಿಯವರೆಗೆ ಇರುತ್ತದೋ ಗೊತ್ತಿಲ್ಲ. ಹಾಗಾಗಿ ಸಮಾಜವನ್ನು ಮತ್ತು ಆರ್ಥಿಕತೆಗಳನ್ನು ಬದಲಾಯಿಸುವಂಥ ಸರಳ ಮತ್ತು ಸುಸ್ಥಿರವಾದ ಪರಿಹಾರಗಳನ್ನು ಕಂಡುಕೊಳ್ಳಬೇಕಾದ್ದು ಅಗತ್ಯವಾಗಿದೆ’ ಎಂದೂ ಮೋದಿ ಹೇಳಿದರು.
ಸವಾಲು ಎದುರಿಸಲು “4 ಆರ್’ ಮಂತ್ರ:
ಭವಿಷ್ಯದಲ್ಲಿ ಜಾಗತಿಕ ದಕ್ಷಿಣ ರಾಷ್ಟ್ರಗಳಾದ ನಮ್ಮ ಪಾಲು ದೊಡ್ಡದಿದೆ. ಬಹುತೇಕ ಜಾಗತಿಕ ಸವಾಲುಗಳನ್ನು ಸೃಷ್ಟಿಸಿದ್ದು ನಾವಲ್ಲ, ಆದರೆ ಅದರ ಪರಿಣಾಮ ಮಾತ್ರ ನಮ್ಮ ಮೇಲೆಯೇ ಹೆಚ್ಚಾಗಿ ಬೀಳುತ್ತಿದೆ. ಈ ಎಲ್ಲ ಸವಾಲುಗಳನ್ನು ಎದುರಿಸಲು ನಾವು ಅನುಸರಿಸಬೇಕಾದ ಮಂತ್ರವೊಂದೇ. ಅದು- ರೆಸ್ಪಾಂಡ್ (ಸ್ಪಂದನೆ), ರೆಕಗ್ನೈಸ್(ಗುರುತಿಸುವಿಕೆ), ರೆಸ್ಪೆಕ್ಟ್ (ಗೌರವ) ಮತ್ತು ರೀಫಾರ್ಮ್ (ಸುಧಾರಣೆ). ಇದರ ಮೂಲಕ ನಾವು ವಿಶ್ವಕ್ಕೆ ಹೊಸ ಶಕ್ತಿ ತುಂಬಬಹುದು ಎಂದೂ ಮೋದಿ ಹೇಳಿದರು.