ನವದೆಹಲಿ: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರಿಗೆ ವಿಶ್ವಸಂಸ್ಥೆಯನ್ನು ಉದ್ದೇಶಿಸಿ ವರ್ಚುವಲ್ ಆಗಿ ಮಾತನಾಡಲು ಅವಕಾಶ ಕಲ್ಪಿಸುವ ವಿಚಾರದಲ್ಲಿ ಭಾರತವು ಉಕ್ರೇನ್ ಪರ ಮತ ಚಲಾಯಿಸಿದೆ.
ಯುದ್ಧ ಆರಂಭವಾದಾಗಿನಿಂದಲೂ ರಷ್ಯಾ ಪರ ಮೃದುಧೋರಣೆ ವ್ಯಕ್ತಪಡಿಸುತ್ತಾ ಬಂದಿರುವ ಭಾರತವು, ಉಕ್ರೇನ್ ಪರ ಮತ ಚಲಾಯಿಸುತ್ತಿರುವುದು ಕಳೆದ 2 ತಿಂಗಳಲ್ಲಿ ಇದು ಎರಡನೇ ಬಾರಿ.
ಕಳೆದ ತಿಂಗಳು ಕೂಡ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯನ್ನು ಉದ್ದೇಶಿಸಿ ಮಾತನಾಡಲು ಬಯಸಿದ್ದ ಝೆಲೆನ್‌ಸ್ಕಿ ಅವರಿಗೆ ಭಾರತ ಬೆಂಬಲ ಘೋಷಿಸಿತ್ತು.
ಭಾನುವಾರ ನಡೆದ ಮತದಾನದಲ್ಲಿ 100ಕ್ಕೂ ಅಧಿಕ ರಾಷ್ಟ್ರಗಳು ಉಕ್ರೇನ್ ಪರವಾಗಿ ನಿಂತಿವೆ. ಅದರಂತೆ, ಮುಂದಿನ ವಾರ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಝೆಲೆನ್‌ಸ್ಕಿ ಅವರು ಯುದ್ಧಕ್ಕೆ ಸಂಬಂಧಿಸಿದಂತೆ ಭಾಷಣ ಮಾಡಲಿದ್ದಾರೆ.
ವಿಶೇಷವೆಂದರೆ, ಇದರಲ್ಲಿ ಭಾರತವು ಉಕ್ರೇನ್ ಪರ ಮತ ಚಲಾಯಿಸಿದ್ದರೆ, ಚೀನವು 2 ಬಾರಿಯೂ ಮತದಾನದಿಂದ ದೂರ ಉಳಿದಿತ್ತು.