ಜೀವನದಲ್ಲಿ ಎಲ್ಲರಿಗೂ ತಮ್ಮದೇ ಆದ ಕನಸುಗಳಿರುತ್ತವೆ. ತಾನು ಒಳ್ಳೆ ಮಾಡಿ ಓದಬೇಕು.ಒಂದೊಳ್ಳೆ ಕೆಲಸದಿಂದ ಭವಿಷ್ಯ ರೂಪಿಸಿಕೊಳ್ಳಬೇಕು. ಹೀಗೆ ಕನಸುಗಳಿಗೆ ಬಣ್ಣ ತುಂಬುತ್ತಾ ಅದಕ್ಕೆ ತಕ್ಕ ಹಾಗೆ ಶಿಕ್ಷಣವನ್ನು ಪಡೆಯಲು ಎಲ್ಲರಿಗೂ ಸಾಧ್ಯವಾಗಲ್ಲ. ಮಾನಸಿಕವಾಗಿ ಆತ್ಮವಿಶ್ವಾಸದಲ್ಲಿದ್ದರೂ,ದೈಹಿಕವಾಗಿ ದೌರ್ಬಲ್ಯವಾಗಿರುವ ಕೆಲ ಜನರಲ್ಲಿ ಆತ್ಮವಿಶ್ವಾಸದ ಕೊರತೆಯಿರುತ್ತದೆ. ಅಂಥವವರಲ್ಲೂ ಏನಾದರೂ ಸಾಧಿಸಬೇಕೆನ್ನುವ ತುಡಿತ ಇರುತ್ತದೆ. ಆದರೆ ಅವರ ಅಕ್ಕಪಕ್ಕ ಅಂಥ ವಾತಾವರಣ ಇರುವುದಿಲ್ಲ.
ಇಂದು ಎಲ್ಲಾ ರಂಗದಲ್ಲೂ ದೈಹಿಕವಾಗಿ ದೌರ್ಬಲ್ಯವಾಗಿರುವ ವಿಶೇಷಚೇತನರು ತಾವು ಸಮರ್ಥರು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ತಮ್ಮಿಂದ ಎಲ್ಲವೂ ಸಾಧ್ಯವೆಂದು ಸಮಾಜದ ಜನರ ಸವಾಲನ್ನು ಎದುರಿಸಿ ಗೆದ್ದು ತೋರಿಸಿ ಸಾಧಕರಾಗಿದ್ದಾರೆ. ಜಾರ್ಖಂಡ್ ನ ಜಮ್ಶೆಡ್ಪುರದ ‘ಕೆಫೆ ಲಾ ಗ್ರಾವಿಟಿಯಾ’ ಎನ್ನುವ ವಿಶೇಷ ಕೆಫೆಯೊಂದು ಶುರುವಾದ ಕಥೆಯಿದು.
ಆಶಿಶ್ ದುಗ್ಗರ್. ಸ್ಟೀಲ್ ಕಂಪೆನಿಯೊಂದರಲ್ಲಿ ಉನ್ನತ ಸ್ಥಾನದ ಹುದ್ದೆಯನ್ನು ಬಿಟ್ಟು ರಸ್ತೆ ಬದಿಯ ಟೀ ಸ್ಟಾಲ್ ವೊಂದನ್ನು ಹಾಕುತ್ತಾರೆ. ಅದೊಂದು ದಿನ ವ್ಯಕ್ತಿಯೊಬ್ಬ ತನ್ನ ತಂಗಿಯೊಂದಿಗೆ ಟೀ ಸ್ಟಾಲ್ ಗೆ ಬರುತ್ತಾನೆ. ಚಹಾ ಕುಡಿಯುತ್ತಾ ವ್ಯಕ್ತಿ ತನ್ನ ತಂಗಿಗೆ ಕೆಲಸ ಸಿಗುವುದಿಲ್ಲ. ಅವಳಿಗೆ ಕಿವಿ ಕೇಳುವುದಿಲ್ಲ. ಚೆನ್ನಾಗಿ ಕಲಿತ್ತಿದ್ದಾಳೆ. ಆದರೆ ಅವಳ ಕಿವುಡುತನದಿಂದ ಅವಳಿಗೆ ಕೆಲಸ ಕೊಡಲು ಎಲ್ಲರೂ ಹಿಂಜರಿಯುತ್ತಾರೆ ಎಂದು ಮಾತಾನಾಡುತ್ತಾ ಚಹಾವನ್ನು ಹೀರುತ್ತಾ ತನ್ನ ವ್ಯಥೆಯನ್ನು ಚಹಾದಂಗಡಿಯ ಮಾಲೀಕ ಆಶಿಶ್ ದುಗ್ಗರ್ ಬಳಿ ಹೇಳುತ್ತಾನೆ.
ವ್ಯಕ್ತಿಯ ಕಥೆ ಕೇಳಿದ ಆಶಿಶ್ ಗೆ ಮನಸ್ಸಿಗೆ ತುಂಬಾ ಬೇಜಾರು ಆಗುತ್ತದೆ. ಮೊದಲೇ ತಾನು ಏನಾದರೂ ಮಾಡಬೇಕೆನ್ನುವ ಆಸಕ್ತಿಯಲ್ಲಿ ಆಶಿಶ್ ಆ ವ್ಯಕ್ತಿಯ ತಂಗಿಯ ಪಾಡು ಕೇಳಿ, ಮನಸಿನೊಳಗಿದ್ದ, ಏನಾದರೂ ಮಾಡುವ ಹುಳ ನಿದ್ದೆಯಲ್ಲೂ ಕಾಡಲು ಶುರುವಾಗುತ್ತದೆ. ಹೀಗೆ ಯೋಚನೆ ಮಾಡುವಾಗ ಆಶಿಶ್ ಗೆ ತಾನು ಒಂದು ಕೆಫೆಯನ್ನು ಶುರು ಮಾಡಬೇಕು ಅಲ್ಲಿನ ಎಲ್ಲಾ ಉದ್ಯೋಗಿಗಳು, ಶ್ರವಣ ದೋಷವಿರುವವರು ಆಗಿರಬೇಕು. ಅಂಥವವರಿಗಾಗಿ ತಾನು ಕೆಫೆಯನ್ನು ಶುರು ಮಾಡಬೇಕೆಂದು ಯೋಚಿಸ ತೊಡಗುತ್ತಾರೆ. ಬಹಳ ಸಮಯ ಈ ಬಗ್ಗೆ ಯೋಚಿಸಿದ ಆಶಿಶ್ ಗೆ, ಕೆಫೆಯ ಕಲ್ಪನೆಗೆ ಒಂದು ರೂಪ ಕೊಟ್ಟು ಕೆಫೆಯ ಕೆಲಸವನ್ನು ಪ್ರಾರಂಭಿಸುತ್ತಾರೆ.
ಆಶಿಶ್ ತಾವಂದುಕೊಂಡಂತೆ ಕೆಫೆಯನ್ನು ತೆರೆಯುತ್ತಾರೆ. ಅದಕ್ಕೆ ‘ಕೆಫೆ ಲಾ ಗ್ರಾವಿಟಿಯಾ’ ಎನ್ನುವ ಹೆಸರನ್ನು ಇಡುತ್ತಾರೆ. ಶ್ರವಣ ದೋಷವಿರುವ ಜನರನ್ನು ತನ್ನ ಕೆಫೆಯ ಉದ್ಯೋಗಿಗಳನ್ನಾಗಿ ಮಾಡಿಕೊಳ್ಳುತ್ತಾರೆ. ವಿನೂತನ ಪ್ರಯೋಗ ನಿಧಾನವಾಗಿ ಯಶಸ್ಸಾಗುತ್ತದೆ. ಆದರೆ ಪ್ರಾರಂಭದಲ್ಲಿ ಆಶಿಶ್ ಅವರಿಗೆ ತನ್ನ ಉದ್ಯೋಗಿಗಳೊಂದಿಗೆ ಸಂವಹನಿಸಲು ತೊಂದರೆಯಾಗುತ್ತದೆ. ಆರು ತಿಂಗಳು ಆಶಿಶ್ ನಿರಂತರವಾಗಿ ಕಿವುಡರ ಸಂಕೇತ ಭಾಷೆಯನ್ನು ಕರಗತ ಮಾಡಿಕೊಂಡು ಅವರೊಂದಿಗೆ ಸರಾಗವಾಗಿ ಮಾತಾನಾಡುತ್ತಾರೆ.
ಅಷ್ಟು ಮಾತ್ರವಲ್ಲದೆ, ತನ್ನ ಉದ್ಯೋಗಿಗಳಿಗೆ ಕೆಫೆಯ ಕೆಲಸ, ಅಲ್ಲಿನ ನಿಯಮ, ಮತ್ತು ಗ್ರಾಹಕರೊಂದಿಗೆ ಹೇಗೆ ವರ್ತಿಸಬೇಕೆನ್ನುವುದನ್ನು ಬಹಳ ಪ್ರೀತಿಯಿಂದಲೇ ಹೇಳಿ ಕೊಡುತ್ತಾರೆ. ‘ಕೆಫೆ ಲಾ ಗ್ರಾವಿಟಿಯಾ’ ಖ್ಯಾತಿಗಳಿಸಲು ಶುರುವಾಗುತ್ತದೆ. ಇಲ್ಲಿನ ಸಿಬ್ಬಂದಿಗಳ ಕಾರ್ಯವೈಖರಿಯನ್ನು ಜನ ಮೆಚ್ಚಿಕೊಳ್ಳುತ್ತಾರೆ. ಜನಸಾಮಾನ್ಯರು ಮಾತ್ರವಲ್ಲದೆ ಜಿಲ್ಲಾಧಿಕಾರಿಯೂ ಕೆಫೆಗೆ ಭೇಟಿ ನೀಡಿ, ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು.
‘ಕೆಫೆ ಲಾ ಗ್ರಾವಿಟಿಯಾ’ ಚಹಾ, ಕಾಫಿ ಮಾತ್ರವಲ್ಲದೆ ಹಲವು ಅಂತರಾಷ್ಟ್ರೀಯ ಬಗೆಯ ತಿಂಡಿ ತಿನಸುಗಳನ್ನು ತಯಾರಿಸಲು ಶ್ರವಣ ದೋಷವಿರುವ ಉದ್ಯೋಗಿಗಳನ್ನೇ ಬಳಸುತ್ತದೆ. ಮಾಲಕ ಆಶಿಶ್ ಅವರೊಂದಿಗೆ ಒಂದಾಗಿ ತನ್ನ ವ್ಯಾಪಾರವನ್ನು ನೋಡಿಕೊಳ್ಳುತ್ತಾರೆ.
ಕೆಫೆಯ ವಿಶೇಷ ಉದ್ಯೋಗಿಗಳಿಂದ ವಿವಿಧ ಪತ್ರಿಕೆ, ಜಾಲತಾಣದಲ್ಲಿ ಸುದ್ದಿ ಆಗುತ್ತದೆ. ಕೆಫೆಯಲ್ಲಿ ಒಟ್ಟು 12 ಮಂದಿ ಇದ್ದಾರೆ ಇದರಲ್ಲಿ 11 ಮಂದಿ ಕಿವುಡರು. ಇದುವರೆಗೆ, ಕೆಫೆಗೆ ಆಗಲಿ, ಉದ್ಯೋಗಿಗಳಿಗಾಗಲಿ ಯಾವ ಸಮಸ್ಯೆಯೂ ಆಗಿಲ್ಲ. ಕೆಫೆಗೆ ದಿನನಿತ್ಯ ನೂರಾರು ಜನ ಆಗಮಿಸುತ್ತಾರೆ. ಯಾರೂ ಕೂಡ ಇಲ್ಲಿ ಕಿವುಡರು ಕೆಲಸ ಮಾಡುತ್ತಾರೆ ಎಂದು ಭಾವಿಸಿಲ್ಲ. ಸಾಮಾನ್ಯ ಗ್ರಾಹಕರಂತೆ ಬಂದು ಖುಷಿಯಾಗಿಯೇ ಹೋಗುತ್ತಾರೆ.
ಇತ್ತೀಚೆಗೆ ಕೆಫೆಯ ಉದ್ಯೋಗಿಗೆಳೆಲ್ಲರೂ ಕೋವಿಡ್ ಲಸಿಕೆಯನ್ನು ಪಡೆದಿದ್ದಾರೆ. ಕೋವಿಡ್ ಕುರಿತು ಜಾಗೃತಿಯನ್ನು ಮೂಡಿಸಿದ್ದಾರೆ. ಕೆಫೆಯ ಉದ್ಯೋಗಿಗಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸುತ್ತಾರೆ ಮಾಲೀಕ ಆಶಿಶ್. ಸಾಮಾನ್ಯನಿರಲಿ , ದೌರ್ಬಲ್ಯನಿರಲಿ ಎಲ್ಲರಿಗೂ ದೇವರು ಒಂದೊಮದು ಬದುಕನ್ನು, ಭವಿಷ್ಯವನ್ನು ಸೃಷ್ಟಿಸಿರುತ್ತಾನೆ. ನಮ್ಮ ಬಗ್ಗೆ ನಾವು ನಂಬಿಕೆಯೊಂದನ್ನು ಇಟ್ಟಕೊಂಡಿರಬೇಕು ಅಷ್ಟೇ.
-ಸುಹಾನ್ ಶೇಕ್