ಬಜಪೆ : ಸಾಮಾನ್ಯವಾಗಿ ಫೆಬ್ರವರಿ ತಿಂಗಳಲ್ಲೇ ಮಾರುಕಟ್ಟೆಯಲ್ಲಿ ಕಾಣಸಿಗುವ ಆಂಧ್ರದಿಂದ ಬರುವ ಮಾವು ಈ ಬಾರಿ ಒಂದು ತಿಂಗಳು ತಡವಾಗಿ ಆಗಮಿಸಿದೆ. ಜಿಲ್ಲೆಯ ಮಾವಿನ ಮಿಡಿಗಳು, ಮಾವು ಕೂಡ ಈಗ ಲಭ್ಯ ಇವೆಯಾದರೂ ಅಷ್ಟು ಪ್ರಮಾಣದಲ್ಲಿ ಸಿಗುತ್ತಿಲ್ಲ. ಇದರಿಂದಾಗಿ ಮದುವೆ ಸಮಾರಂಭಗಳಲ್ಲಿ ಮಾವಿನ ಮೆಣಸಿನಕಾಯಿ, ರಸಾಯನ ಹಾಗೂ ಜ್ಯೂಸ್‌ಗೂ ಬರ ತಟ್ಟಿದೆ.
ಮಾರುಕಟ್ಟೆಗೆ ಈಗಾಗಲೇ ಆಂಧ್ರ, ಕೇರಳದ ಮಾವು ಲಗ್ಗೆ ಇಟ್ಟಿವೆಯಾದರೂ ದರ ಮಾತ್ರ ಅಧಿಕವಾಗಿದೆ. ಕಳೆದ ಬಾರಿ ಜನವರಿಯಲ್ಲಿ ಕೇರಳದ ಬಾದಾಮಿ, ನೀಲಂ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಬಂದಿತ್ತು. ತಮಿಳುನಾಡಿನಿಂದ ತೋತಾಪುರಿ, ಆಂಧ್ರದ ತೋತಾಪುರಿ, ಬಾದಾಮಿ, ಬೆಂಗ್ಯಾನ್ ಪಲ್ಲಿ ಮಾವಿನ ಹಣ್ಣು ಮಾರುಕಟ್ಟೆಯಲ್ಲಿತ್ತು. ಆಂಧ್ರದಿಂದ ಬಂದ ಮಾವಿನ ಹಣ್ಣಿನ ದರ ಕೆ.ಜಿ.ಗೆ 50ರಿಂದ 80 ರೂ.ಇತ್ತು. ಸಕತ್ ಮಾವು ಅಲ್ಲಿಲ್ಲಿ ಮಾರಾಟವಾಗುತ್ತಿತ್ತು.
ಈ ಬಾರಿ ಆಂಧ್ರದ ಬಾದಾಮಿ ಮಾವು ಕೆ.ಜಿ.ಗೆ 180ರೂ., ಕೇರಳದ ಕಣ್ಣಪೂರ್ ಕೆ.ಜಿ.ಗೆ120 ರೂ., ಜಿಲ್ಲೆಯ ಮುಂಡಪ್ಪ ಕೆ.ಜಿ.ಗೆ 200 ರೂ., ಮಿಡಿ ತೋತಾಪುರಿ ಕೆ.ಜಿ.ಗೆ 100 ರೂ., ಇತರ ಮಿಡಿ ಕೆ.ಜಿ.ಗೆ 80 ರೂ.ಇದೆ. ಇನ್ನು ಮಾವಿನ ಮಿಡಿಗಳ ದರ ಕೆ.ಜಿ.ಗೆ 80ರಿಂದ 100 ರೂ.ಗಳು. ಕಳೆದ ಬಾರಿ ಇದು ಕೆ.ಜಿ.ಗೆ 125ರಿಂದ 150 ರೂ. ಇತ್ತು.
ಈ ಬಾರಿ ಇದರ ದರ ಕಡಿಮೆ. ಮಾರುಕಟ್ಟೆಯಲ್ಲಿ ಹಲವಾರು ವರ್ಷಗಳಿಂದ ಆಂಧ್ರ, ತಮಿಳುನಾಡು, ಕೇರಳದ ಮಾವು ವರ್ಷವಿಡೀ ಸಿಗುವ ಕಾರಣ ಸ್ಥಳೀಯ ಮಾವುಗಳ ಪ್ರಮಾಣವೂ ಕಡಿಮೆಯಾಗುತ್ತಿದೆ.
ಹವಾಮಾನ ವೈಪರೀತ್ಯ ಕಾರಣ
ಈ ಬಾರಿ ಮಳೆ ಹಾಗೂ ಹವಾಮಾನ ಬದಲಾವಣೆಯಿಂದ ಮಾವು ತಡವಾಗಿ ಆಗಮಿಸಿದೆ. ದರವೂ ಅಧಿಕ. ಹೆಚ್ಚಿನ ಶ್ರೀಮಂತರು ಮಾತ್ರ ಈಗ ಕೊಂಡೊಯ್ಯುತ್ತಾರೆ. ಕ್ಯಾಟರಿಂಗ್‌ನವರು ಈಗ ಯಾರೂ ಬಂದಿಲ್ಲ. ಇದರ ಜ್ಯೂಸನ್ನು ಗ್ಲಾಸೊಂದಕ್ಕೆ 60ರಿಂದ 80 ರೂ.ತನಕ ಮಾರಬೇಕಾಗುತ್ತದೆ.
– ಫಾರೂಕ್, ವ್ಯಾಪಾರಿ