Advertisement

4 ವರ್ಷ ಬಳಿಕ ಭರ್ತಿಯಾಗುವ ಹಂತದಲ್ಲಿ ಲಿಂಗನಮಕ್ಕಿ; ತುಂಬಿ ತುಳುಕುತ್ತಿವೆ ರಾಜ್ಯದ ಜಲಾಶಯಗಳು

03:24 PM Aug 02, 2024 | Team Udayavani |

ಬೆಂಗಳೂರು/ಹುಬ್ಬಳ್ಳಿ: ರಾಜ್ಯದ ಅತಿದೊಡ್ಡ ಹಾಗೂ ಅತಿ ಕಡಿಮೆ ದರದಲ್ಲಿ ರಾಜ್ಯಕ್ಕೆ ವಿದ್ಯುತ್‌ ನೀಡುವ ಶಿವಮೊಗ್ಗ ಜಿಲ್ಲೆಯಲ್ಲಿರುವ ಲಿಂಗನಮಕ್ಕಿ ಜಲಾಶಯ 4 ವರ್ಷಗಳ ಬಳಿಕ ಭರ್ತಿ ಹಂತ ತಲುಪಿದ್ದರಿಂದ ಗುರುವಾರ 3 ಕ್ರಸ್ಟ್‌ಗೇಟ್‌ ತೆರೆದು ಶರಾವತಿ ನದಿಗೆ 10 ಸಾವಿರ ಕ್ಯುಸೆಕ್‌ ನೀರು ಬಿಡಲಾಗಿದೆ.

Advertisement

1,819 ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 1814.1 ಅಡಿ ನೀರು ಸಂಗ್ರಹವಾಗಿದ್ದು 47,500 ಕ್ಯುಸೆಕ್‌ ಒಳ ಹರಿವು ಇದೆ. ನೀರಿನ ಒಳಹರಿವು ನೋಡಿಕೊಂಡು ಹಂತ ಹಂತವಾಗಿ ನೀರು ಬಿಡುವ ಪ್ರಮಾಣ ಹೆಚ್ಚಿಸಲು ನಿರ್ಧರಿಸಲಾಗಿದೆ. ಸತತ 10 ಸಾವಿರ ಕ್ಯುಸೆಕ್‌ ನೀರು ಹೊರಬಿಟ್ಟರೂ 25ರಿಂದ 30 ದಿನಗಳಲ್ಲಿ ಜಲಾಶಯ ಪೂರ್ಣ ಭರ್ತಿಯಾಗುವ ಸಾಧ್ಯತೆ ಇದೆ.

1964ರಲ್ಲಿ ನಿರ್ಮಾಣವಾದ ಲಿಂಗನಮಕ್ಕಿ ಈವರೆಗೆ 17 ಬಾರಿ ಮಾತ್ರ ಸಂಪೂರ್ಣ ಭರ್ತಿಯಾಗಿದೆ. ಒಂದೇ ಬಾರಿಗೆ 50 ಸಾವಿರ ಕ್ಯುಸೆಕ್‌ ನೀರು ಬಿಟ್ಟರೆ ಗೇರುಸೊಪ್ಪ-ಹೊನ್ನಾವರದ ಶರಾವತಿ ನದಿ ತೀರದ ಎಡದಂಡೆ ಮತ್ತು ಬಲದಂಡೆಯ 450 ಮನೆಗಳು ಮುಳುಗಡೆಯಾಗುತ್ತವೆ. 1 ಲಕ್ಷ ಕ್ಯುಸೆಕ್‌ ನೀರು ಹೊರ ಬಿಟ್ಟರೆ 2,200ಕ್ಕೂ ಅಧಿಕ ಮನೆಗಳು ಮುಳುಗಡೆಯಾಗುತ್ತವೆ.

ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಶರಾವತಿ ನದಿ ತೀರದ ನಿವಾಸಿಗಳಿಗೆ ತೊಂದರೆ ಆಗದಂತೆ ಹಂತ ಹಂತವಾಗಿ ನೀರು ಹರಿಸಲಾಗುತ್ತದೆ ಎಂದು ಕೆಪಿಸಿ ಕಾರ್ಯನಿರ್ವಾಹಕ ಎಂಜಿನಿಯರ್‌ ಆರ್‌. ಶಿವಕುಮಾರ್‌ ತಿಳಿಸಿದ್ದಾರೆ.

ಇನ್ನೊಂದೆಡೆ ಮಲೆನಾಡಿನಲ್ಲಿ ಮತ್ತೆ ಮಳೆ ಹೆಚ್ಚಾಗಿದ್ದರಿಂದ ಹೊಸಪೇಟೆಯ ತುಂಗಭದ್ರಾ ಜಲಾಶಯಕ್ಕೆ 1.96 ಲಕ್ಷ ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು, 2 ಲಕ್ಷ ಕ್ಯುಸೆಕ್‌ಗೂ ಹೆಚ್ಚು ನೀರನ್ನು ನದಿಗೆ ಹರಿಸಲಾಗುತ್ತಿದೆ. ಕೃಷ್ಣಾ ನದಿಯಿಂದ ಆಲಮಟ್ಟಿಗೆ 3.41 ಲಕ್ಷ ಕ್ಯುಸೆಕ್‌ ಒಳಹರಿವಿದ್ದು, 3.50 ಲಕ್ಷ ಕ್ಯುಸೆಕ್‌ ಹೊರ ಬಿಡಲಾಗುತ್ತಿದೆ. ನಾರಾಯಣಪುರ ಜಲಾಶಯಕ್ಕೆ 3.30 ಲಕ್ಷ ಒಳಹರಿವಿದ್ದಿದ್ದರಿಂದ 3.25 ಲಕ್ಷ ಕ್ಯುಸೆಕ್‌ ನೀರು ಹೊರಬಿಡಲಾಗುತ್ತಿದೆ.

Advertisement

ಖಾನಾಪುರ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಮಲಪ್ರಭಾ ಅಣೆಕಟ್ಟಿನಿಂದ 14,968 ಕ್ಯುಸೆಕ್‌ ನೀರು ಹರಿದುಬರುತ್ತಿದ್ದು, 15 ಸಾವಿರ ಕ್ಯುಸೆಕ್‌ ನೀರು ಬಿಡಲಾಗುವುದು ಎಂದು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಉಕ್ಕಿ ಹರಿಯುತ್ತಿರುವ ಕಾವೇರಿ
ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯದಿಂದ ಕಾವೇರಿ ನದಿಗೆ 1 ಲಕ್ಷಕ್ಕೂ ಹೆಚ್ಚು ಕ್ಯುಸೆಕ್‌ ನೀರು ಹರಿಸಿದ ಪರಿಣಾಮ ಕಾವೇರಿ ನದಿಯು ಉಕ್ಕಿ ಹರಿದಿದ್ದು, ಪ್ರವಾಹ ಉಂಟಾಗಿದೆ. ಬುಧವಾರ ಸಂಜೆಯಿಂದ ಜಲಾಶಯದಿಂದ ನದಿಗೆ 1.72 ಲಕ್ಷ ಕ್ಯುಸೆಕ್‌ ನೀರು ಹರಿಸಲಾಗಿತ್ತು. ಇದರಿಂದ ನದಿ ಪಾತ್ರಗಳಲ್ಲಿ ಪ್ರವಾಹ ಉಂಟಾಗಿತ್ತು. ಇದರಿಂದ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.

ತುಂಬಿ ಹರಿಯುತ್ತಿರುವ ತ್ರಿವೇಣಿ ಸಂಗಮ
ತಿ. ನರಸೀಪುರ: ಕಬಿನಿ, ಕೆಆರ್‌ಎಸ್‌ ಜಲಾಶಯದಿಂದ ಭಾರೀ ಪ್ರಮಾಣದ ನೀರು ಹೊರ ಬಂದಿರುವ ಹಿನ್ನೆಲೆಯಲ್ಲಿ ಪಟ್ಟಣದ ಕಪಿಲಾ, ಕಾವೇರಿ ನದಿಗಳ ತ್ರಿವೇಣಿ ಸಂಗಮ ತುಂಬಿ ಹರಿಯುತ್ತಿದ್ದು, ನದಿ ಪಾತ್ರದುದ್ದಕ್ಕೂ ಸಮೀಪದ ಜಮೀನುಗಳು ಜಲಾವೃತಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next