Advertisement

UV Fusion: ಕೊಡಚಾದ್ರಿಯ ತಪ್ಪಲಿನಲ್ಲಿ…

11:30 AM Oct 03, 2023 | Team Udayavani |

ಪಶ್ಚಿಮ ಘಟ್ಟದ ಚಾರಣ ಸ್ನೇಹಿ ಬೆಟ್ಟಗಳೆಂದರೆ ನೋಡುಗರಿಗೆ ಹಸಿರು ಸೀರೆಯುಟ್ಟ ಮದುಮಗಳಂತೆ ಕಂಗೊಳಿಸುವ ನಯನಮನೋಹರ ದೃಶ್ಯಾವಳಿ. ಅದರಲ್ಲೂ ಕೊಡಚಾದ್ರಿ ಬೆಟ್ಟಗಳು ಎಲ್ಲರನ್ನೂ ಆಕರ್ಷಿಸುವ ಸೊಗಸಿನ ತಾಣ.

Advertisement

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಸಮೀಪದಲ್ಲಿರುವ ಈ ಬೆಟ್ಟವು ದೂರದೂರಿಂದಲೂ ಪ್ರವಾಸಿಗರನ್ನು ಸೆಳೆಯುತ್ತಿದೆ. ಸಮುದ್ರ ಮಟ್ಟದಿಂದ 1343 ಕಿ.ಮೀ ಎತ್ತರವಿರುವ ಈ ಬೆಟ್ಟವು ಪ್ರಸಿದ್ಧ ಯಾತ್ರಾ ಸ್ಥಳವೂ ಹೌದು.

ಇಲ್ಲಿನ ಮೂಕಾಂಬಿಕ ದೇವಿಯ ಗುಡಿಯು ಕೊಲ್ಲೂರಿನ ಮೂಲವೆಂಬ ಬಗ್ಗೆ ಸ್ಥಳದ ಪೌರಾಣಿಕ ಇತಿಹಾಸಗಳು ಹೇಳುತ್ತವೆ. ಹಾಗೂ ಶ್ರೀ ಶಂಕರಾಚಾರ್ಯಾರು ಇಲ್ಲಿನ ಮೂಕಾಂಬಿಕ ದೇವಿಯನ್ನು ಕೇರಳಕ್ಕೆ ಕರೆದೊಯ್ಯುವ ಮಾರ್ಗದಲ್ಲಿ ದೇವಿಯು ನೆಲೆನಿಂತ ಜಾಗವೇ ಕೊಲ್ಲುರಾಗಿ ಹೆಸರು ಪಡೆದಿದೆ.

ಈ ಬೆಟ್ಟದಲ್ಲಿ ಶಂಕರಾಚಾರ್ಯರು ತಪ್ಪಸ್ಸು ಮಾಡಿದ ಸ್ಥಳವು ‘ಸರ್ವಜ್ಞ ಪೀಠ’ ಎಂದು ಪ್ರತೀತಿಯಲ್ಲಿದೆ. ಕೊಡಾಚಾದ್ರಿ ಬೆಟ್ಟದ ಮೇಲಿರುವ ಮೂಕಾಂಬಿಕ ದೇವಾಲಯು ಸಾಕಷ್ಟು ಪುರಾತನವಾದದ್ದು ಹಾಗೂ ತನ್ನದೇ ಆದ ಸ್ಥಳ ಮಹಿಮೆಯನ್ನು ಹೊಂದಿದೆ. ಇಲ್ಲಿನ 40 ಅಡಿ ಎತ್ತರದ ಕಬ್ಬಿಣದ ಕಂಬವು ಮೂಕಾಸುರನನ್ನು ಒದಿಸಲು ದೇವಿ ಉಪಯೋಗಿಸಿದ ತ್ರಿಶೂಲ ಎಂದು ಸ್ಥಳೀಯರು ಹೇಳುತ್ತಾರೆ.

ಸರ್ವಜ್ಞ ಪೀಠದಿಂದ ಮುಂದಕ್ಕೆ ಇರುವ ಕಡಿದದ ಬೆಟ್ಟವನ್ನು ಇಳಿದರೆ ‘ಚಿತ್ರಮೂಲ’ ಎಂಬ ಸ್ಥಳವು ಪ್ರವಾಸಿಗರನ್ನು ಚಕಿತಗೊಳಿಸುತ್ತದೆ. ಈ ಸ್ಥಳವು ಸೌಪರ್ಣಿಕಾ ನದಿಯ ಉಗಮ ಸ್ಥಾನವಾಗಿದೆ. ಹಾಗೂ ಕೊಡಚಾದ್ರಿಯಲ್ಲಿರುವ ಗಣೇಶ ಗುಹೆಯು ತನ್ನದೇ ಆದ ಪ್ರಸಿದ್ಧಿಯನ್ನು ಹೊಂದಿದೆ.

Advertisement

ಕೊಡಚಾದ್ರಿಯನ್ನು ತಲುಪಲು ಜೀಪುಗಳು ಬಾಡಿಗೆ ದೊರೆಯುತ್ತವೆ. ಅಲ್ಲಿನ ಜೀಪು ಚಾಲಕರು ಕೊಡಚಾದ್ರಿ….. ಕೊಡಚಾದ್ರಿ……. ಎಂದು ಕೂಗುವಾಗಲೇ ಮೈರೋಮಾಂಚನಗೊಳ್ಳುತ್ತದೆ. ಆ ಕಡಿದಾದ ದಾರಿಯಲ್ಲಿ ಜೀಪ್‌ ಪಯಣವೆಂದರೆ ಮೈ ನಡುಗಿಸುತ್ತದೆ. ಜೀಪ್‌ ಮಾತ್ರವಲ್ಲದೆ ಅನುಭವಿ ಬೈಕ್‌ ಚಾಲಕರು ಬೆಟ್ಟದ ತುದಿಗೆ ಸವಾರಿ ಮಾಡುತ್ತಾರೆ. ಆದರೆ ಕೊಡಚಾದ್ರಿಗೆ ಕಾಲ್ನಡಿಗೆಯಲ್ಲಿ ಹೋಗುವುದೆಂದರೆ ಆ ಅನುಭವವೇ ಬೇರೆ.

ಅಷ್ಟೂ ಎತ್ತರದ ಬೆಟ್ಟವನ್ನು ಕಾಲ್ನಡಿಗೆಯಲ್ಲಿ ಹತ್ತಿದರೆ ಮಾತ್ರ ಚಾರಣಿಗರಿಗೆ ಉತ್ತಮ ಅನುಭುವ ದೊರೆಯುತ್ತದೆ ಎನ್ನವುದು ನನ್ನ ಅಭಿಪ್ರಾಯ. ಕೊಡಚಾದ್ರಿಯನ್ನು ಕಾಲ್ನಡಿಗೆಯಲ್ಲಿ ಹತ್ತುವುದೆಂದರೆ ಸುಲಭದ ಮಾತಲ್ಲ. ಹುಮ್ಮಸಿದ್ದರೆ ಆಗದ ಕೆಲಸವೂ ಅಲ್ಲ. ಬೆಟ್ಟ ತಲುಪುವ ಜಾಗವು ಕಡಿದಾಗಿರುವುದರಿಂದ ಜಾಗ್ರತೆ ವಹಿಸುವುದು ಅವಶ್ಯಕ. ಹಾಗೂ ಮಳೆಗಾಲದ ಸಮಯದಲ್ಲಿ ಜಾರುವ ಹಾದಿ ಮಾತ್ರವಲ್ಲದೆ ಇಂಬಳಗಳ ಕುರಿತು ಜಾಗ್ರತೆ ಬೇಕು. ಮುಂಜಾನೆ ಬೇಗ ಹೊರಟು ಬೆಟ್ಟ ಏರಲು ಪ್ರಾರಂಭಿಸಿದರೆ ಮಧ್ಯಾಹ್ನದ ಒಳಗಾಗಿ ಸರ್ವಜ್ಞ ಪೀಠವನ್ನು ತಲುಪಬಹುದು.

ಮೋಡಗಳಿಲ್ಲದ ದಿನವಾದರೆ ಬೆಟ್ಟದ ಮೇಲಿನಿಂದ ಅರಬ್ಬೀ ಸಮುದ್ರ ಮತ್ತು ಕೊಲ್ಲೂರನ್ನು ನೋಡಬಹುದು. ಕೊಡಚಾದ್ರಿಯು ಒಮ್ಮೆಯಾದರೂ ನೋಡಲೇ ಬೇಕಾದ ಸುಂದರ ನೈಸರ್ಗಿಕ ತಾಣ. ಹಾಗೂ ಇದು ಸೂರ್ಯಾಸ್ತಕ್ಕೆ ಪ್ರಸಿದ್ಧವಾಗಿದ್ದು, ಕೊಡಚಾದ್ರಿಯಿಂದ ಅರಬ್ಬೀ ಸಮುದ್ರದಲ್ಲಿ ಮುಳುಗುವ ಸೂರ್ಯನನ್ನು ನೋಡುವುದೇ ಚಾರಣಿಗರಿಗೊಂದು ಮರೆಯಲಾಗದ ಅನುಭವ. ಕೊಡಚಾದ್ರಿಗೆ ಬೇಟಿ ನೀಡಲು ಮಳೆಗಾಲದ ನಂತರದ ಸಮಯವು ಸೂಕ್ತವಾಗಿದ್ದು, ಬಿಡುವಿನ ಸಮಯದಲ್ಲಿ ಚಾರಣದ ಉತ್ತಮ ಅನುಭವಕ್ಕಾಗಿ ಕೊಡಚಾದ್ರಿಯ ಕಡೆಗೊಮ್ಮೆ ಪಯಣ ಬೆಳೆಸಿ.

 -ಶಾಂಭವಿ.ಎಂ.

ಭಂಡಾರ್ಕಾಸ್‌ ಕಲಾ ಮತ್ತು ವಿಜ್ಞಾನ ಕಾಲೇಜು, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next