ಮಂಗಳೂರು: ಸಮರ್ಪಕ ಮಾಸಿಕ ವೇತನ ನೀಡುತ್ತಿಲ್ಲ ಎಂದು ಆರೋಪಿಸಿ ನಗರದ ಕಸ ನಿರ್ವಹಣೆ ಮಾಡುವ ಆ್ಯಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಸುಮಾರು 800ರಷ್ಟು ಕಾರ್ಮಿಕರು ಬುಧವಾರ ಕಸ ನಿರ್ವಹಣೆ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು. ಗುರುವಾರ ಸಂಜೆಯೊಳಗೆ ಕಾರ್ಮಿಕರ ಖಾತೆಗೆ ವೇತನ ಬಾರದಿದ್ದರೆ ಮತ್ತೆ ಕಸದ ನಿರ್ವಹಣೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಕಾರ್ಮಿಕರು ಎಚ್ಚರಿಸಿದ್ದಾರೆ.
ಮಾಸಿಕ ವೇತನ ಪಾವತಿ ಮಾಡಿಲ್ಲ ಎಂದು ಆರೋಪಿಸಿ, ಬುಧವಾರ ಬೆಳಗ್ಗೆ ಕಸ ನಿರ್ವಹಣೆ ಮಾಡುವ ಲಾರಿಗಳು/ಕಾರ್ಮಿಕರು ಕೆಲಸ ನಿರ್ವಹಿಸಲಿಲ್ಲ. ಕಾರ್ಮಿಕರು ಬೆಳಗ್ಗೆ 10ರ ಸುಮಾರಿಗೆ ಕೂಳೂರಿನ ಕಾರ್ಮಿಕರ ಯಾರ್ಡ್‌ನಿಂದ ಬಂಟ್ಸ್‌ಹಾಸ್ಟೆಲ್‌ನ ಜಿಲ್ಲಾ ಕಾರ್ಮಿಕ ಇಲಾಖೆಗೆ ಆಗಮಿಸಿ, ತಮ್ಮ ನೋವು ತೋಡಿಕೊಂಡರು. ಬಳಿಕ ಮಹಾನಗರ ಪಾಲಿಕೆಗೆ ಆಗಮಿಸಿ ಪಾಲಿಕೆ ಮುಂಭಾಗ ಪ್ರತಿಭಟನೆ ನಡೆಸಿದರು. ಮೇಯರ್ ಹರಿನಾಥ್, ಆಯುಕ್ತ ಮೊಹಮ್ಮದ್ ನಝೀರ್ ಉಪಸ್ಥಿತಿಯಲ್ಲಿ ಸಭೆ ನಡೆಸಿದರು.
ಮೇಯರ್ ಹರಿನಾಥ್ ಮಾತನಾಡಿ, ಪಾಲಿಕೆ ಆ್ಯಂಟನಿ ವೇಸ್ಟ್ ಸಂಸ್ಥೆಗೆ ಮೂರು ತಿಂಗಳ ಹಣ ಬಾಕಿ ಇರಿಸಿದ್ದು, ಅದರಲ್ಲಿ ಒಂದು ತಿಂಗಳ ಹಣವನ್ನು ಚೆಕ್ ಮೂಲಕ ಬುಧವಾರ ಪಾವತಿಸಿದೆ. ಪಾಲಿಕೆಯ ಷರತ್ತಿನ ಪ್ರಕಾರ ಗುತ್ತಿಗೆದಾರ ಕಂಪೆನಿ ಮೂರು ತಿಂಗಳ ವರೆಗೆ ಪಾಲಿಕೆ ಪಾವತಿಸದಿದ್ದರೂ ತಾವೇ ಸಿಬಂದಿ ಸಂಬಳದ ವ್ಯವಸ್ಥೆ ಮಾಡಬೇಕಾಗಿದೆ. ಆದರೆ ಅವರು ಷರತ್ತು ಉಲ್ಲಂಘಿಸುತ್ತಿದ್ದಾರೆ ಎಂದರು.
ಬಿಎಂಎಸ್ ಮುಖಂಡ ವಿಶ್ವನಾಥ ಶೆಟ್ಟಿ ಮಾತನಾಡಿ, ಆ್ಯಂಟನಿ ಸಂಸ್ಥೆಯವರಿಗೆ ಪ್ರತೀ ತಿಂಗಳು ಹಣ ಪಾವತಿ ಮಾಡಲಾಗುತ್ತದೆ ಎಂದು ಮಂಗಳೂರು ಪಾಲಿಕೆ ತಿಳಿಸಿದರೆ, ನಮಗೆ ಸಮರ್ಪಕವಾಗಿ ಹಣ ಪಾಲಿಕೆಯಿಂದ ಬರುತ್ತಿಲ್ಲ ಎಂದು ಆ್ಯಂಟನಿ ಸಂಸ್ಥೆಯವರು ಆರೋಪಿಸುತ್ತಿದ್ದಾರೆ. ಇವರಿಬ್ಬರ ನಡವಳಿಕೆಯಿಂದ ಕಾರ್ಮಿಕರು ಪ್ರತೀ ತಿಂಗಳು ಸಂಬಳವಿಲ್ಲದೆ ಬೀದಿಗೆ ಬರುವಂತಾಗಿದೆ. ಸದ್ಯಕ್ಕೆ ಸಂಬಳದ ನಿರೀಕ್ಷೆಯೊಂದಿಗೆ ಗುರುವಾರ ಎಲ್ಲ ಕಾರ್ಮಿಕರು ಕಸದ ನಿರ್ವಹಣೆ ನಡೆಸಲಿದ್ದಾರೆ. ಸಕಾಲದಲ್ಲಿ ಸಂಬಳ ಪಾವತಿಯಲ್ಲಿ ವ್ಯತ್ಯಾಸವಾದರೆ ಕಾರ್ಮಿಕರು ಪರಿತಪಿಸುವಂತಾಗುತ್ತದೆ. ಹೀಗಾಗಿ ಮತ್ತೂಮ್ಮೆ ಪ್ರತಿಭಟನೆ ನಡೆಯದಂತೆ ಆಡಳಿತದಾರರು ಎಚ್ಚರಿಕೆ ವಹಿಸಬೇಕು ಎಂದರು.