ಬಳ್ಳಾರಿ: ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಪ್ರೊ. ನಂಜುಂಡಸ್ವಾಮಿ ಬಣ) ವತಿಯಿಂದ ನಗರದ ಜಿಲ್ಲಾಧಿ ಕಾರಿಗಳ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಈ ಬಾರಿ ಸಕಾಲಕ್ಕೆ ಉತ್ತಮವಾಗಿ ಮಳೆ ಬಂದಿದ್ದರಿಂದ ಭತ್ತ, ಹತ್ತಿ, ಮೆಣಸಿನಕಾಯಿ, ಜೋಳ, ಮೆಕ್ಕೆಜೋಳ, ತೊಗರಿ, ನವಣೆ ಸೇರಿದಂತೆ ಇನ್ನಿತರೆ ಬೆಳೆಗಳು ಮಾರುಕಟ್ಟೆಗೆ ಬರುತ್ತಿವೆ. ಆದರೆ, ಮಾರುಕಟ್ಟೆಯಲ್ಲಿ ಕನಿಷ್ಠ ಬೆಲೆಗೆ ಮಾರಾಟವಾಗುತ್ತಿವೆ. ಇದರಿಂದ ಬೆಂಬಲ ಬೆಲೆ ಸಿಗದೆ ರೈತರು ನಷ್ಟಕ್ಕೀಡಾಗುತ್ತಿದ್ದಾರೆ. ರೈತರು ಕೃಷಿಗೆ ಬಳಸುವ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳ ಬೆಲೆಗಳು ದುಪ್ಪಟ್ಟು ಹೆಚ್ಚಾಗಿದೆ. ಇದರಿಂದ ಕುಟುಂಬದ ನಿರ್ವಹಣಾ ವೆಚ್ಚವು ವರ್ಷದಿಂದ ವರ್ಷಕ್ಕೆ ದುಪ್ಪಟ್ಟಾಗುತ್ತಿವೆ.
ರೈತರು ಕುಟುಂಬಗಳಿಗೆ ಜೀವನದ ನಿರ್ವಹಣೆ ಮಾಡುವುದೇ ಕಷ್ಟವಾಗಿದೆ. ರೈತ ಮಾಡಿದ ಸಾಲಗಲು ತೀರಿಸಲಾಗದೇ ಸಾಲದ ಸುಳಿಯಲ್ಲಿ ಸಿಲುಕಿ ಸಾಕಷ್ಟು ಜನ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ರೈತ ಬೆಳೆದ ಬೆಳೆಗಳು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆಮಾರಾಟವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದರೂ ಸಹ ರೈರ ರಕ್ಷಣೆಗೆ ಸರ್ಕಾರ ಮುಂದಾಗದೇ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾನಿರತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರೈತರ ಬೆಳೆಗಳು ಕೃಷಿ ಉತ್ಪನ್ನಗಳು ಮಾರುಕಟ್ಟೆಗೆ ಬರುತ್ತಿವೆ. ಆದ್ದರಿಂದ ಎಲ್ಲ ತಾಲೂಕು ಕೇಂದ್ರಗಳಲ್ಲಿ ಖರೀದಿ ಕೇಂದ್ರ ಕಡ್ಡಾಯವಾಗಿ ತೆರೆಯಬೇಕು. ಖರೀದಿ ಮಾಡಿದಂತ ಕೃಷಿ ಉತ್ಪನ್ನಗಳ ಹಣ ರೈತರ ಖಾತೆಗೆ ವಿಳಂಬ ಮಾಡದೆ ಕೂಡಲೇ ವರ್ಗಾಯಿಸಬೇಕು. ಭತ್ತ ಕಟಾವು ಮಾಡುವ ಯಂತ್ರೋಪಕರಣಗಳ ಮಾಲೀಕರು ಪ್ರತಿ ಗಂಟೆಗೆ 3000 ರೂ. ಬೆಲೆ ನಿಗದಿಪಡಿಸಿರುವುದನ್ನು ಕಡಿತಗೊಳಿಸಿ ಪ್ರತಿ ಗಂಟೆಗೆ 2000 ರೂ. ನಿಗದಿಪಡಿಸಬೇಕು. ಆದ್ದರಿಂದ ಸರ್ಕಾರ ಕೂಡಲೇ ರೈತರ ಕೃಷಿ ಉತ್ಪನ್ನಗಳಿಗೆ 2019-2020ನೇ ಸಾಲಿನ ಮುಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಘೋಷಣೆ ಮಾಡಿದಂತೆ ಎಲ್ಲ ತಾಲೂಕು ಕೇಂದ್ರಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದರು. ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯಕಾರ್ಯಾಧ್ಯಕ್ಷ ಆರ್.ಮಾಧವರೆಡ್ಡಿ ಕರೂರು, ಮುಖಂಡರಾದ ಗಂಗಾರೆಡ್ಡಿ, ಮಲ್ಲಿಕಾರ್ಜುನ, ಕಾಳಿದಾಸ, ತಿಮ್ಮನಗೌಡ, ಲೇಪಾಕ್ಷಿ ಅಸುಂಡಿ, ಹುಲುಗಯ್ಯ ಸೇರಿದಂತೆ ವಿವಿಧ ಗ್ರಾಮಗಳ ನೂರಾರು ರೈತರು ಇದ್ದರು.